Site icon Vistara News

ಏರ್‌ ಇಂಡಿಯಾ ವಿಮಾನಗಳಿಗೆ ಭದ್ರತೆ ಒದಗಿಸಿ; ಬೆದರಿಕೆ ಬೆನ್ನಲ್ಲೇ ಕೆನಡಾಗೆ ಭಾರತ ಆಗ್ರಹ

Air India Flights

Enhance security for Air India flights, India asks Canada after Gurpatwant Singh Pannun threat

ಒಟ್ಟಾವ: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಜನ್ಮದಿನವಾದ ನವೆಂಬರ್‌ 19ರಂದು ಏರ್‌ ಇಂಡಿಯಾ ವಿಮಾನಗಳನ್ನು ಸ್ಫೋಟಿಸುವುದಾಗಿ ನಿಷೇಧಿತ ಸಿಖ್ಸ್‌ ಫಾರ್‌ ಜಸ್ಟಿಸ್‌ (Sikhs For Justice) ಸಂಘಟನೆಯ ಉಗ್ರ ಗುರುಪತ್ವಂತ್‌ ಸಿಂಗ್‌ ಪನ್ನುನ್‌ (Gurpatwant Singh Pannun) ಬೆದರಿಕೆ ಹಾಕಿದ ಬೆನ್ನಲ್ಲೇ ಏರ್‌ ಇಂಡಿಯಾ ವಿಮಾನಗಳಿಗೆ (Air India Flights) ಹೆಚ್ಚಿನ ಭದ್ರತೆ ನೀಡಬೇಕು ಎಂದು ಕೆನಡಾ ಸರ್ಕಾರಕ್ಕೆ ಭಾರತ ಆಗ್ರಹಿಸಿದೆ.

ಗುರುಪತ್ವಂತ್‌ ಸಿಂಗ್‌ ಪನ್ನುನ್‌ ಬೆದರಿಕೆ ವಿಡಿಯೊ ಕುರಿತು ಒಟ್ಟಾವದಲ್ಲಿರುವ ಭಾರತದ ಹೈ ಕಮಿಷನರ್‌ ಸಂಜಯ್‌ ಕುಮಾರ್‌ ವರ್ಮಾ ಪ್ರತಿಕ್ರಿಯಿಸಿದ್ದು, “ಕೆನಡಾದಿಂದ ಭಾರತಕ್ಕೆ ಆಗಮಿಸುವ, ಭಾರತದಿಂದ ಕೆನಡಾಗೆ ತೆರಳುವ ಏರ್‌ ಇಂಡಿಯಾ ವಿಮಾನಗಳಿಗೆ ಹೆಚ್ಚಿನ ಭದ್ರತೆ ಒದಗಿಸಬೇಕು ಎಂಬುದಾಗಿ ಭಾರತ ಕೆನಡಾ ಸರ್ಕಾರಕ್ಕೆ ಕೋರುತ್ತದೆ. ಈ ಕುರಿತು ಕೆನಡಾ ಅಧಿಕಾರಿಗಳೊಂದಿಗೂ ಮಾತುಕತೆ ನಡೆಸಲಾಗುತ್ತಿದೆ” ಎಂದು ತಿಳಿಸಿದ್ದಾರೆ. ಭಾರತದಿಂದ ಕೆನಡಾ ನಗರಗಳಾದ ಟೊರಂಟೊ, ವ್ಯಾಂಕವರ್‌ಗೆ ವಾರದಲ್ಲಿ ಹಲವು ವಿಮಾನಗಳು ಸಂಚರಿಸುತ್ತವೆ. ಹಾಗಾಗಿ ಭಾರತವು ಕೆನಡಾ ಸರ್ಕಾರಕ್ಕೆ ಭದ್ರತೆ ಒದಗಿಸುವಂತೆ ಆಗ್ರಹಿಸಿದೆ.

ಪನ್ನುನ್‌ ಬೆದರಿಕೆ ಏನು?

ನವೆಂಬರ್‌ 4ರಂದು ಗುರುಪತ್ವಂತ್‌ ಸಿಂಗ್‌ ಪನ್ನುನ್‌ ವಿಡಿಯೊ ಬಿಟ್ಟಿದ್ದು, “ನವೆಂಬರ್‌ 19ರಂದು ಸಿಖ್ಖರು ಏರ್‌ ಇಂಡಿಯಾ ವಿಮಾನಗಳಲ್ಲಿ ಪ್ರಯಾಣಿಸಬಾರದು.‌ ಅಂದು ಏರ್‌ ಇಂಡಿಯಾ ವಿಮಾನಗಳನ್ನು ಸ್ಫೋಟಿಸಲಾಗುವುದು” ಎಂದು ಹೇಳಿದ್ದಾನೆ. ನವೆಂಬರ್‌ 19 ಇಂದಿರಾ ಗಾಂಧಿ ಜನ್ಮದಿನವಾದ ಕಾರಣ ಅಂದೇ ಏರ್‌ ಇಂಡಿಯಾ ವಿಮಾನಗಳನ್ನು ಸ್ಫೋಟಿಸಲಾಗುವುದು ಎಂದಿದ್ದಾನೆ. ಅಮೃತಸರದ ಸ್ವರ್ಣಮಂದಿರ ಹೊಕ್ಕಿದ್ದ ಉಗ್ರರ ವಿರುದ್ಧ ಇಂದಿರಾ ಗಾಂಧಿ ಅವರು ಆಪರೇಷನ್‌ ಬ್ಲ್ಯೂ ಸ್ಟಾರ್‌ಗೆ ಆದೇಶ ಮಾಡಿದ ಬಳಿಕ ಅವರು 1984ರಲ್ಲಿ ಹತ್ಯೆಗೀಡಾದರು. ಈಗ ಅವರ ಜನ್ಮದಿನದಂದೇ ಏರ್‌ ಇಂಡಿಯಾ ವಿಮಾನ ಸ್ಫೋಟಿಸಲು ಸಂಚು ರೂಪಿಸಲಾಗಿದೆ.

ಇದನ್ನೂ ಓದಿ: India Canada Row: ಕೆನಡಾ ಮತ್ತೆ ಉಪಟಳ; ವ್ಯಾಪಾರದ ಚರ್ಚೆ ಇಲ್ಲ ಎಂದ ಕೇಂದ್ರ!

ಭಾರತ ಹಾಗೂ ಕೆನಡಾ ನಡುವಿನ ರಾಜತಾಂತ್ರಿಕ ಸಂಬಂಧ ಹಳಸಿದ ಬಳಿಕ ಖಲಿಸ್ತಾನಿ ಉಗ್ರ ಗುರುಪತ್ವಂತ್‌ ಸಿಂಗ್‌ ಉಪಟಳ ಜಾಸ್ತಿಯಾಗುತ್ತಿದೆ. ಕೆನಡಾದಲ್ಲಿರುವ ಹಿಂದುಗಳಿಗೆ ಬೆದರಿಕೆ ಹಾಕುವುದು ಸೇರಿ ಹಲವು ಕೃತ್ಯಗಳಲ್ಲಿ ಖಲಿಸ್ತಾನಿ ಉಗ್ರರು ತೊಡಗಿದ್ದಾರೆ. ಇದಕ್ಕೆಲ್ಲ ಗುರುಪತ್ವಂತ್‌ ಸಿಂಗ್‌ ಪನ್ನುನ್‌ ಪಿತೂರಿ ಇದೆ. ಆದರೆ, ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ), 1967 ರ ಸೆಕ್ಷನ್ 33 (5) ರ ಅಡಿಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಗುರ್​ಪತ್ವಂತ್ ಸಿಂಗ್ ಪನ್ನುನ್​ಗೆ ಸೇರಿದ ಚಂಡೀಗಢದಲ್ಲಿನ ಮನೆ ಮತ್ತು ಅಮೃತಸರದ ಕೃಷಿ ಭೂಮಿಯನ್ನು ವಶಪಡಿಸಿಕೊಂಡಿದೆ. ಈ ಮೂಲಕ ಆತನಿಗೆ ಭಾರತದ ಬಾಗಿಲನ್ನು ಸಂಪೂರ್ಣ ಬಂದ್ ಮಾಡುವ ಜತೆಗೆ ಆತನಿಗೆ ಇಲ್ಲಿಂದ ಒಂದು ಪೈಸೆಯೂ ದೊರೆಯದಂತೆ ಮಾಡಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version