Site icon Vistara News

Muhammad Yunus: ಹಿಂದುಗಳನ್ನು ಮೊದಲು ರಕ್ಷಿಸಿ; ಬಾಂಗ್ಲಾದೇಶದ ಮೊಹಮ್ಮದ್‌ ಯೂನಸ್‌ಗೆ ಮೋದಿ ಆಗ್ರಹ

Muhammad Yunus

ಢಾಕಾ: ಆಂತರಿಕ ದಂಗೆ, ಪ್ರತಿಭಟನೆ ಹಾಗೂ ಹಿಂಸಾಚಾರದ ಹಿನ್ನೆಲೆಯಲ್ಲಿ ಶೇಖ್‌ ಹಸೀನಾ (Sheikh Hasina) ಅವರು ರಾಜೀನಾಮೆ ನೀಡಿ, ದೇಶ ತೊರೆದ ಬೆನ್ನಲ್ಲೇ ಬಾಂಗ್ಲಾದೇಶದಲ್ಲಿ (Bangladesh) ಹಂಗಾಮಿ ಸರ್ಕಾರ ರಚನೆಯಾಗಿದೆ. ಹಂಗಾಮಿ ಸರ್ಕಾರದ ಮುಖ್ಯಸ್ಥರಾಗಿ ನೊಬೆಲ್‌ ಶಾಂತಿ ಪುರಸ್ಕೃತ ಮೊಹಮ್ಮದ್‌ ಯೂನಸ್‌ (Muhammad Yunus) ಅವರು ಪದಗ್ರಹಣ ಮಾಡಿದ್ದಾರೆ. ಇನ್ನು, ಮೊಹಮ್ಮದ್‌ ಯೂನಸ್‌ ಅವರಿಗೆ ಅಭಿನಂದನೆ ಸಲ್ಲಿಸಿರುವ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು, ದೇಶದಲ್ಲಿ ಹಿಂದುಗಳನ್ನು ರಕ್ಷಿಸಿ ಎಂದು ಕೂಡ ಮನವಿ ಮಾಡಿದ್ದಾರೆ.

“ನೂತನ ಜವಾಬ್ದಾರಿ ವಹಿಸಿಕೊಂಡಿರುವ ಪ್ರೊಫೆಸರ್‌ ಮೊಹಮ್ಮದ್‌ ಯೂನಸ್‌ ಅವರಿಗೆ ಶುಭಾಶಯಗಳು. ಬಾಂಗ್ಲಾದೇಶದಲ್ಲಿ ಎಲ್ಲವೂ ಸಹಜಸ್ಥಿತಿಗೆ ಬರಲಿದೆ ಎಂಬ ವಿಶ್ವಾಸವಿದೆ. ಹಾಗೆಯೇ, ಹಿಂದುಗಳು ಸೇರಿ ಎಲ್ಲ ಅಲ್ಪಸಂಖ್ಯಾತರಿಗೆ ರಕ್ಷಣೆ ಒದಗಿಸುತ್ತೀರಿ ಎಂಬ ನಂಭಿಕೆ ಇದೆ. ಉಭಯ ದೇಶಗಳ ಶಾಂತಿ, ಭದ್ರತೆ ಹಾಗೂ ಅಭಿವೃದ್ಧಿಯ ಕುರಿತು ಮುಂದಿನ ದಿನಗಳಲ್ಲೂ ಭಾರತದ ಸಹಕಾರ ಇರಲಿದೆ” ಎಂಬುದಾಗಿ ನರೇಂದ್ರ ಮೋದಿ ಪೋಸ್ಟ್‌ ಮಾಡಿದ್ದಾರೆ.

ಬಾಂಗ್ಲಾದೇಶದಲ್ಲಿ ಹಿಂಸಾಚಾರ ಆರಂಭವಾದ ಬಳಿಕ ದೇವಾಲಯಗಳು ಸೇರಿ 97ಕ್ಕೂ ಹಿಂದು ಸ್ಥಳಗಳ ಮೇಲೆ ದಾಳಿ ಇಸ್ಲಾಮಿಕ್‌ ಮೂಲಭೂತವಾದಿಗಳು ದಾಳಿ ನಡೆಸಿದ್ದಾರೆ. ಹಿಂದುಗಳನ್ನು ಒತ್ತೆಯಾಳುಗಳನ್ನಾಗಿ ಇಟ್ಟುಕೊಳ್ಳುವುದು, ಹಿಂದು ಮಹಿಳೆಯರ ಮೇಲೆ ದೌರ್ಜನ್ಯ ಎಸಗುವುದು ಸೇರಿ ಹಲವು ರೀತಿಯಲ್ಲಿ ದಾಳಿ ನಡೆಸಲಾಗಿದೆ. ಇದಕ್ಕೆಲ್ಲ ಗಲ್ಫ್‌ ದೇಶಗಳು ಬಾಂಗ್ಲಾದೇಶದ ಮೂಲಭೂತವಾದಿಗಳು ನೀಡುತ್ತಿರುವ ಹಣವೇ ಕಾರಣ ಎಂದು ಗುಪ್ತಚರ ಮೂಲಗಳು ತಿಳಿಸಿವೆ. ಹಾಗಾಗಿ, ಮೋದಿ ಅವರು ಹಿಂದುಗಳ ರಕ್ಷಣೆಗೆ ಆದ್ಯತೆ ನೀಡಿ ಎಂದು ಕೋರಿದ್ದಾರೆ.

ಮೊಹಮ್ಮದ್‌ ಯೂನಸ್‌ ಅವರೊಂದಿಗೆ 15 ಸಲಹೆಗಾರರು ಕೂಡ ಪ್ರಮಾಣವಚನ ಸ್ವೀಕರಿಸಿದ್ದಾರೆ ಎಂದು ತಿಳಿದುಬಂದಿದೆ. ಇನ್ನು, ಬಾಂಗ್ಲಾದೇಶದಲ್ಲಿ ಹೊಸದಾಗಿ ಚುನಾವಣೆ ನಡೆದು, ನೂತನ ಸರ್ಕಾರ ಅಸ್ತಿತ್ವಕ್ಕೆ ಬರುವವರೆಗೆ ಮೊಹಮ್ಮದ್‌ ಯೂನಸ್‌ ಅವರೇ ಹಂಗಾಮಿ ಪ್ರಧಾನಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಇವರಿಗೆ ಬಾಂಗ್ಲಾದೇಶ ನ್ಯಾಷನಲ್‌ ಪಾರ್ಟಿ (BNP) ಬೆಂಬಲವಿದೆ. ಇದರೊಂದಿಗೆ ಬಾಂಗ್ಲಾದೇಶದಲ್ಲಿ ಶೇಖ್‌ ಹಸೀನಾ ಅವರ ಆಡಳಿತ ಅಂತ್ಯವಾಗಿ, ಮೊಹಮ್ಮದ್‌ ಯೂನಸ್‌ ಅವರ ಆಡಳಿತ ಜಾರಿಗೆ ಬಂದಿದೆ. ಶೇಖ್‌ ಹಸೀನಾ ಅವರು 15 ವರ್ಷ ಪ್ರಧಾನಿಯಾಗಿದ್ದರು. ಸದ್ಯ ಅವರು ಭಾರತದಲ್ಲಿ ಆಶ್ರಯ ಪಡೆದಿದ್ದಾರೆ.

83 ವರ್ಷದ ಮುಹಮ್ಮದ್ ಯೂನಸ್ ಅವರು ಶೇಖ್‌ ಹಸೀನಾ ಅವರ ಪ್ರಮುಖ ಟೀಕಾಕಾರರು ಮತ್ತು ರಾಜಕೀಯ ವಿರೋಧಿಯೂ ಆಗಿದ್ದಾರೆ. ಅರ್ಥಶಾಸ್ತ್ರಜ್ಞರು ಆಗಿರುವ ಯೂನಸ್ 2006ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಪಡೆದಿದ್ದಾರೆ. ಬಡ ವ್ಯಕ್ತಿಗಳಿಗೆ, ವಿಶೇಷವಾಗಿ ಮಹಿಳೆಯರಿಗೆ ಸಹಾಯ ಮಾಡುವ ಗುರಿಯನ್ನು ಹೊಂದಿರುವ ಮೈಕ್ರೋಕ್ರೆಡಿಟ್‌ನೊಂದಿಗೆ ಅವರ ಅದ್ಭುತ ಕೆಲಸಕ್ಕಾಗಿ ನೊಬೆಲ್ ಸಮಿತಿಯು ಯೂನಸ್ ಮತ್ತು ಅವರ ಗ್ರಾಮೀಣ ಬ್ಯಾಂಕ್ ಅನ್ನು ಗುರುತಿಸಿದೆ. ತಳಮಟ್ಟದಿಂದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಯನ್ನು ಉತ್ತೇಜಿಸುವ ಅವರ ಕಾರ್ಯವನ್ನು ಗೌರವಿಸುವ ಸಲುವಾಗಿ ನೊಬೆಲ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಇದನ್ನೂ ಓದಿ: Muhammad Yunus: ಬಾಂಗ್ಲಾ ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿ ಮೊಹಮ್ಮದ್‌ ಯೂನಸ್‌ ಪದಗ್ರಹಣ!

Exit mobile version