Site icon Vistara News

EPFO: ಹೈಯರ್ ಪೆನ್ಷನ್ ಅರ್ಜಿ ಸಲ್ಲಿಕೆ ಗಡುವು ಜುಲೈ 11ರವರೆಗೆ ವಿಸ್ತರಣೆ, ಇನ್ನುತಡ ಮಾಡಬೇಡಿ ಅರ್ಜಿ ಸಲ್ಲಿಸಿ…

epfo

ನವದೆಹಲಿ: ಉದ್ಯೋಗಿಗಳು ಇಪಿಎಸ್‌ ಅಡಿಯಲ್ಲಿ (Employees Pension Scheme-EPS ) ಹೆಚ್ಚಿನ ಪಿಂಚಣಿ ಪಡೆಯುವುದಕ್ಕೆ ಅರ್ಜಿ ಸಲ್ಲಿಸುವ ಅವಧಿಯನ್ನು 2023ರ ಜುಲೈ 11ರವರೆಗೆ ವಿಸ್ತರಿಸಲಾಗಿದೆ. ಉದ್ಯೋಗಿಗಳ ಭವಿಷ್ಯನಿಧಿ ಸಂಘಟನೆ (Employees provident fund Organisation) ಜೂನ್ 26ರವರೆಗೆ ಗಡುವು ವಿಧಿಸಿತ್ತು. ಆದರೆ, ಈಗ ಮತ್ತೆ ಅರ್ಜಿ ಸಲ್ಲಿಸುವ ಅವಧಿಯನ್ನು ಹೆಚ್ಚಿಸಿದೆ ಎಂದು ಪಿಟಿಐ ವರದಿ ಮಾಡಿದೆ(EPFO).

ಭವಿಷ್ಯನಿಧಿ ಸಂಸ್ಥೆಯು ಈ ಹಿಂದೆ ಮಾರ್ಚ್ 3 ರಿಂದ ಮೇ 3 ರವರೆಗೆ ಮೂರು ಬಾರಿ ಗಡುವನ್ನು ವಿಸ್ತರಿಸಿತ್ತು. ನಂತರ ಜೂನ್ 26 ರವರೆಗೆ ಪಿಂಚಣಿದಾರರಿಗೆ ಹೆಚ್ಚಿನ ಅವಕಾಶವನ್ನು ಒದಗಿಸಲು ಗಡುವನ್ನು ವಿಸ್ತರಿಸಲಾಯಿತು. ಸಮಸ್ಯೆಗಳನ್ನು ಎದುರಿಸುತ್ತಿರುವ ಪಿಂಚಣಿದಾರರಿಗೆ ಅನುಕೂಲವಾಗಲಿ ಎಂದು ಸಂಸ್ಥೆಯು ಅರ್ಜಿ ಸಲ್ಲಿಸುವ ಗಡುವನ್ನು ಈಗ ಮತ್ತೆ ವಿಸ್ತರಿಸಿದೆ.

ಸೆಪ್ಟೆಂಬರ್ 1, 2014 ರ ಮೊದಲು ಇಪಿಎಫ್‌ಒ ಭಾಗವಾಗಿದ್ದ ಮತ್ತು ಹೇಳಿದ ದಿನಾಂಕದ ನಂತರ ಸೇವೆಯಲ್ಲಿದ್ದ ಆದರೆ ಇಪಿಎಸ್ ಅಡಿಯಲ್ಲಿ ಜಂಟಿ ಆಯ್ಕೆಯನ್ನು ಪಡೆಯಲು ಸಾಧ್ಯವಾಗದ ಉದ್ಯೋಗಿಗಳಿಗೆ ಸುಪ್ರೀಂ ಕೋರ್ಟ್ ನಾಲ್ಕು ತಿಂಗಳೊಳಗೆ ಪಿಂಚಣಿ ಸೌಲಭ್ಯ ಪಡೆಯಲು ಮಾಡಲು ಅವಕಾಶ ಕಲ್ಪಿಸುವಂತೆ ಕಳೆದ ನವಂಬರ್ ತಿಂಗಳಲ್ಲಿ ಆದೇಶ ಮಾಡಿತ್ತು.

ಎಲ್ಲ ಇಪಿಎಫ್‌ ಸದಸ್ಯರೂ ಈ ಸೌಲಭ್ಯಕ್ಕೆ ಅರ್ಹರಲ್ಲ. ಅರ್ಹತೆ ಇರುವವರು ಮಾತ್ರ ಅರ್ಜಿ ಸಲ್ಲಿಸಬಹುದು. ಅರ್ಹತೆ ಇದ್ದರೆ ನಿಗದಿತ ದಾಖಲೆ ಸಲ್ಲಿಸಿ ಅರ್ಜಿ ದಾಖಲಿಸಬಹುದು. ಮೂಲ ವೇತನವು ನಿರ್ದಿಷ್ಟ ಮಿತಿಗಿಂತ ಮೇಲಿದ್ದರೆ ಅರ್ಹತೆ ಸಿಗಲಿದೆ. ಇಪಿಎಸ್‌ ಅಡಿಯಲ್ಲಿ ಪಿಂಚಣಿಗೆ ಅರ್ಹತೆಯಲ್ಲಿ ಮೂಲ ವೇತನದ ಮಿತಿ ಮಾಸಿಕ 15,000 ರೂ. ಇದೆ. ಇದಕ್ಕಿಂತಲೂ ಹೆಚ್ಚು ಮೂಲ ವೇತನ ಇರುವವರು ಹೆಚ್ಚಿನ ಪಿಂಚಣಿ ಪಡೆಯಲು ಅರ್ಜಿ ಸಲ್ಲಿಸಬಹುದು.

ಈ ಸುದ್ದಿಯನ್ನೂ ಓದಿ: EPFO Nomination update : ಇಪಿಎಫ್‌ಒ ನಾಮಿನೇಶನ್‌ ಬಾಕಿ ಇದೆಯೇ? ಹೀಗೆ ಮಾಡಿ…

ಹೆಚ್ಚಿನ ಪಿಂಚಣಿ ಬೇಕಿದ್ದರೆ ಏನು ಮಾಡಬೇಕಾಗುತ್ತದೆ?

ನಿಮಗೆ ಇಪಿಎಫ್‌ಒ ಅಡಿಯಲ್ಲಿ ಹೆಚ್ಚು ಪಿಂಚಣಿ ಸಿಗಬೇಕಿದ್ದರೆ, ನಿಮ್ಮ ಇಪಿಎಫ್‌ ಖಾತೆಯಿಂದ ಇಪಿಎಸ್‌ ಖಾತೆಗೆ ಹೆಚ್ಚು ಹಣ ವರ್ಗಾವಣೆ ಆಗಬೇಕಾಗುತ್ತದೆ. ಪ್ರಸ್ತುತ ಉದ್ಯೋಗಿಗಳು ಮತ್ತು ಉದ್ಯೋಗದಾತರು ಉದ್ಯೋಗಿಗಳ ಮೂಲವೇತನ, ತುಟ್ಟಿಭತ್ಯೆಯ 12%ರಷ್ಟನ್ನು ಇಪಿಎಫ್‌ಗೆ ಸಲ್ಲಿಸಲಾಗುತ್ತದೆ. ಉದ್ಯೋಗಿಗಳ 12% ದೇಣಿಗೆ ಪೂರ್ಣವಾಗಿ ಇಪಿಎಫ್‌ಗೆ ಸಂದಾಯವಾಗುತ್ತದೆ. ಉದ್ಯೋಗಿಗಳ 12% ಪಾಲಿನಲ್ಲಿ 3.67% ಇಪಿಎಫ್‌ಗೆ ಹೋಗುತ್ತದೆ. ಉಳಿದ 8.33% ಇಪಿಎಸ್‌ಗೆ ಹೋಗುತ್ತದೆ. ಸರ್ಕಾರ ಉದ್ಯೋಗಿಯ ಪಿಂಚಣಿಗೆ 1.6% ನೀಡುತ್ತದೆ. ಆದರೆ ಇದೀಗ ಉದ್ಯೋಗಿಗಳೂ ಇಪಿಎಸ್‌ಗೆ ಹೆಚ್ಚುವರಿ ದೇಣಿಗೆ ನೀಡುವ ಮೂಲಕ ಹೆಚ್ಚಿನ ಪಿಂಚಣಿ ಪಡೆಯಲು ಅವಕಾಶ ಸೃಷ್ಟಿಯಾಗಿದೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version