ಹೊಸದಿಲ್ಲಿ: ಐತಿಹಾಸಿಕ ಮೂರನೇ ಅವಧಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಸರಕಾರ ಸಜ್ಜಾಗಿರುವಂತೆ ತೋರುತ್ತಿದೆ. ಇಟಿಜಿ ಸಂಸ್ಥೆ ಹಾಗೂ ಟೈಮ್ಸ್ ನೌ ಚಾನೆಲ್ ನಡೆಸಿರುವ ಸಮೀಕ್ಷೆಗಳು (ETG Survey 2024 Lok Sabha) ಇದನ್ನು ಸೂಚಿಸಿವೆ. ಬಿಜೆಪಿ ಲೋಕಸಭೆ ಚುನಾವಣೆಯಲ್ಲಿ ಮತ್ತೆ ಜಯಭೇರಿ ಬಾರಿಸಲಿದೆ ಎಂದು ಸಮೀಕ್ಷೆ ಭವಿಷ್ಯ ನುಡಿದಿದೆ.
2024ರ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ (NDA) 323 ಸ್ಥಾನಗಳೊಂದಿಗೆ ಮರಳಿ ಬರಲಿದೆ ಎಂದು ಸಮೀಕ್ಷೆ (ETG Survey 2024 Lok Sabha) ಹೇಳಿದೆ. ಎನ್‌ಡಿಎಯ ಎದುರಾಳಿ ಇಂಡಿಯಾ ಬ್ಲಾಕ್ (INDIA bloc), ಸುಮಾರು 163 ಸ್ಥಾನಗಳನ್ನು ಗೆದ್ದುಕೊಳ್ಳಲಿದೆಯಂತೆ.
ಇಟಿಜಿ ಸಮೀಕ್ಷೆಯು, ಬಿಜೆಪಿ ಏಕಾಂಗಿಯಾಗಿ ಸುಮಾರು 308-328 ಸೀಟುಗಳನ್ನು ಗಳಿಸಬಹುದು ಎಂದು ಸೂಚಿಸಿದೆ. ಕಾಂಗ್ರೆಸ್ ಕೇವಲ 52-72 ಸ್ಥಾನಗಳೊಂದಿಗೆ ಮತ್ತೊಂದು ಕಳಪೆ ಪ್ರದರ್ಶನವನ್ನು ಕಾಣಲಿದೆ. 18 ಪಕ್ಷಗಳು ಸೇರಿಕೊಂಡು ಇಂಡಿಯಾ ಬ್ಲಾಕ್ ಅನ್ನು ರಚಿಸಿರುವ ಹೊರತಾಗಿಯೂ ಮೋದಿ ಸರ್ಕಾರಕ್ಕೆ ಗಟ್ಟಿಯಾದ ಸವಾಲು ನೀಡಿಲ್ಲ.
ಆದರೆ 2024ರ ಲೋಕಸಭಾ ಚುನಾವಣೆಯ ಫಲಿತಾಂಶದ ಮೇಲೆ ಇಂಡಿಯಾ ಬ್ಲಾಕ್ ಗಮನಾರ್ಹ ಪರಿಣಾಮ ಬೀರಲಿದೆ. 2019ರ ಸ್ಥಾನಮಾನಕ್ಕೆ ಹೋಲಿಸಿದರೆ ಎನ್‌ಡಿಎ ಸ್ಥಾನಗಳ ಸಂಖ್ಯೆಯಲ್ಲಿ ಸ್ವಲ್ಪ ಕುಸಿತವಾಗಲಿದೆ ಎಂದು ಸಮೀಕ್ಷೆ ಸೂಚಿಸಿದೆ. ಸಾರ್ವತ್ರಿಕ ಚುನಾವಣೆಗಳಿಗೆ ಇನ್ನೂ ಹಲವಾರು ತಿಂಗಳುಗಳಿದ್ದು, ಕೇಸರಿ ಪಕ್ಷವು ಮುಂಬರುವ ದಿನಗಳಲ್ಲಿ ಪ್ರಾಬಲ್ಯ ಸಾಧಿಸಬಹುದು ಎಂದಿದೆ.
2019ರಲ್ಲಿ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) 353 ಸ್ಥಾನಗಳನ್ನು ಭದ್ರಪಡಿಸಿಕೊಂಡಿತ್ತು. ಬಿಜೆಪಿ 37.76% ಮತಗಳನ್ನು ಗಳಿಸಿತ್ತು. ಚಲಾವಣೆಯಾದ 603.7 ಮಿಲಿಯ ಮತಗಳಲ್ಲಿ NDA ಪಡೆದ ಒಟ್ಟು ಮತಗಳು 45% ತಲುಪಿದೆ. ಕಾಂಗ್ರೆಸ್ ಪಡೆದುದು ಕೇವಲ 52 ಸ್ಥಾನಗಳು.
ಇತ್ತೀಚೆಗಷ್ಟೇ ಮುಕ್ತಾಯಗೊಂಡ ಐದು ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಪ್ರಾಬಲ್ಯ ಸಾಧಿಸಿದೆ. ಹಿಂದಿ ಬೆಲ್ಟಿನ ಮೂರು ರಾಜ್ಯಗಳಲ್ಲಿ ಕೇಸರಿ ಪಕ್ಷ ವಿಜಯದ ನಗೆ ಬೀರಿದೆ. ಇದು 2024ರ ಚುನಾವಣೆಯಲ್ಲಿ ಪ್ರತಿಫಲಿಸುವ ನಿರೀಕ್ಷೆಯಿದೆ. ವಿಶೇಷವಾಗಿ ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ರಾಜಸ್ಥಾನದಂತಹ ರಾಜ್ಯಗಳು ಬಿಜೆಪಿಯ ಚುನಾವಣಾ ಬಲಕ್ಕೆ ಗಮನಾರ್ಹ ಕೊಡುಗೆ ನೀಡಲಿವೆ.
ಹಿಂದಿ ಹೃದಯಭಾಗದ ರಾಜ್ಯಗಳಲ್ಲಿ ಬಿಜೆಪಿಯ ಇತ್ತೀಚಿನ ಗೆಲುವುಗಳು ಪ್ರಧಾನಿ ನರೇಂದ್ರ ಮೋದಿಯವರ ಮೇಲಿನ ಮತದಾರರ ನಿರಂತರ ನಂಬಿಕೆಯನ್ನು ಎತ್ತಿ ಹಿಡಿದಿವೆ. “ಮೋದಿ ಕಿ ಗ್ಯಾರಂಟಿ” ಬಿಜೆಪಿಯ ಒಂದು ಪ್ರಮುಖ ಅಂಶವಾಗಿ ಪಕ್ಷದ ಗೆಲುವಿಗೆ ಕೊಡುಗೆ ನೀಡಿದೆ.
ಈಗಲೇ ಚುನಾವಣೆ ನಡೆದರೆ ಈ ಸಮೀಕ್ಷೆ ಪ್ರಕಾರ ಯಾರಿಗೆಷ್ಟು ಸ್ಥಾನ?
ಬಿಜೆಪಿ: 308-328
ಕಾಂಗ್ರೆಸ್: 52-72
ವೈಎಸ್ಆರ್ ಸಿಪಿ: 24-25
ಡಿಎಂಕೆ: 20-24
ಟಿಎಂಸಿ: 20-24
ಬಿಜೆಡಿ: 13-15
ಬಿಆರ್ ಎಸ್: 3-5
ಆಪ್: 4-7
ಇತರ: 66-76
ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ಬೆಲೆ ಶೀಘ್ರ ಇಳಿಕೆ! ಲೋಕಸಭೆ ಎಲೆಕ್ಷನ್ ಎಫೆಕ್ಟ್?