ಮಧ್ಯಪ್ರದೇಶದ ಸಿಂಗರೌಲಿ ಎಂಬಲ್ಲಿ ಸಕಾಲದಲ್ಲಿ ಆಂಬ್ಯುಲೆನ್ಸ್ ದೊರೆಯದೆ ಪುಟಾಣಿ ಬಾಲಕನೊಬ್ಬ ಅಸ್ವಸ್ಥ ತಂದೆಯನ್ನು ತಳ್ಳು ಗಾಡಿಯಲ್ಲಿ ಮಲಗಿಸಿ ಆಸ್ಪತ್ರೆಗೆ ಕರೆತಂದು ಸೇರಿಸಿದ್ದಾನೆ. ಇದೊಂದು ಹೃದಯ ಕಲಕುವ ಘಟನೆ. ಎರಡು ದಿನಗಳ ಹಿಂದಷ್ಟೇ ಬಿಹಾರದಲ್ಲಿ ಬಡಪಾಯಿ ವ್ಯಕ್ತಿಯೊಬ್ಬ ತನ್ನ ಮೃತ ಪತ್ನಿಯನ್ನು ಹೆಗಲ ಮೇಲೆ ಹೊತ್ತು ಆಸ್ಪತ್ರೆಯಿಂದ 32 ಕಿ.ಮೀ ದೂರದ ತನ್ನ ಮನೆಗೆ ನಡೆದ ಘಟನೆ ಹೃದಯ ವಿದ್ರಾವಕವಾಗಿತ್ತು. ದೇಶದ ನಾನಾ ಭಾಗಗಳಲ್ಲಿ, ನಾಗರಿಕ ಸಮಾಜವೇ ನಾಚುವ ಇಂಥ ಘಟನೆಗಳು ಆಗಾಗ ನಡೆಯುತ್ತಲೇ ಇರುತ್ತವೆ. ಇಲ್ಲಿ ಅಸ್ವಸ್ಥವಾಗಿರುವುದು ರೋಗಿಯೋ ಅಥವಾ ನಮ್ಮ ಸಮಾಜವೋ ಅಥವಾ ನಮ್ಮ ವ್ಯವಸ್ಥೆಯೋ ಎಂಬ ಪ್ರಶ್ನೆಗಳನ್ನು ಎತ್ತುವಂಥ ಘಟನೆಗಳಿವು.
ನಾವು 75ನೇ ಸ್ವಾತಂತ್ರ್ಯ ಸಂಭ್ರಮದಲ್ಲಿದ್ದೇವೆ. 5ಜಿ ಕಾಲದಲ್ಲಿದ್ದೇವೆ. ಚಂದ್ರ ಮಾತ್ರವಲ್ಲ, ಮಂಗಳ ಗ್ರಹದ ಅಂಗಳವನ್ನೂ ಪರಿಶೀಲಿಸುವಷ್ಟೂ ಮುಂದುವರಿದಿದ್ದೇವೆ. ಆದರೆ ದೇಶದ ಕೆಲವೆಡೆ ಕನಿಷ್ಠ ಮೂಲಸೌಕರ್ಯಕ್ಕೂ ಜನ ಪರದಾಡುವ ಘಟನೆಗಳು ವಿಷಾದ ಹುಟ್ಟಿಸುವಂಥವು. ಅದರಲ್ಲೂ ಬಡವರು ಸರಿಯಾದ ಆರೋಗ್ಯ ಸೇವೆಗಾಗಿ ಅಲೆಯಬೇಕಾಗಿ ಬರುವುದು ಲಕ್ಷ ಕೋಟಿ ಜಿಡಿಪಿಯ ವಿಚಾರ ಮಾತನಾಡುತ್ತಿರುವ ದೇಶಕ್ಕೆ ಅಣಕ. ಹೆಚ್ಚೇನೂ ದೂರ ಹೋಗುವುದು ಬೇಡ. ನಮ್ಮಲ್ಲೇ ಉತ್ತರ ಕನ್ನಡ ಜಿಲ್ಲೆಯಲ್ಲಿ ಸರಿಯಾದ ಒಂದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಿಲ್ಲ. ಇಲ್ಲಿ ಗಂಭೀರ ಆರೋಗ್ಯ ಸಮಸ್ಯೆಗಳು ಉದ್ಭವಿಸಿದರೆ ನೂರಾರು ಕಿಲೋಮೀಟರ್ ದೂರದ ಮಣಿಪಾಲ ಅಥವಾ ಮಂಗಳೂರಿಗೆ ತೆರಳಬೇಕು. ಉತ್ತರ ಕರ್ನಾಟಕದ ಅನೇಕ ಪ್ರದೇಶಗಳಲ್ಲಿ ಸರಿಯಾದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಲ್ಲ. ಉತ್ತರ ಭಾರತದ ಬಿಹಾರ, ಮಧ್ಯಪ್ರದೇಶ, ಉತ್ತರಪ್ರದೇಶದ ಹಲವು ಹಳ್ಳಿಗಳ ಕತೆಯಂತೂ ಅಧೋಗತಿ.
ಭಾರತದಲ್ಲಿ ಪ್ರತಿವರ್ಷ ಸುಮಾರು 50,000 ಮಂದಿ ಹಾವು ಕಡಿತದಿಂದ ಮೃತಪಡುತ್ತಾರೆ. ನಿಜಕ್ಕೂ ಇದು ಚಿಕಿತ್ಸೆಯ ಕೊರತೆಯಿಂದ ಆಗುವ ಮರಣ. ಹೆಚ್ಚಿನ ಹಾವಿನ ಕಡಿತಗಳು ಗ್ರಾಮೀಣ ಪ್ರದೇಶಗಳಲ್ಲಿ, ಕೃಷಿ ಕೆಲಸಕ್ಕೆ ತೊಡಗಿದವರಲ್ಲಿ ಉಂಟಾಗುತ್ತವೆ. ಇವರನ್ನು ಸಕಾಲಕ್ಕೆ ಆಸ್ಪತ್ರೆಗೆ ತಲುಪಿಸಲು ಸಾಧ್ಯವಾಗದೆ ಹೋಗುವುದರಿಂದ ವಿಷವೇರಿ ಸಾಯುವವರು ಹೆಚ್ಚು. ಅನೇಕ ಕಡೆಗಳಲ್ಲಿ ಹಾವಿನ ವಿಷಕ್ಕೆ ಪ್ರತಿಯಾಗಿ ನೀಡುವ ಆ್ಯಂಟಿ ಸ್ನೇಕ್ ವೆನಮ್ ಸಂಗ್ರಹ ಇಲ್ಲದೆ, ದೊಡ್ಡಾಸ್ಪತ್ರೆಗೆ ಕಳಿಸುವ ಸಮಯದಲ್ಲಿಯೂ ಸಾವು ಉಂಟಾಗುತ್ತದೆ. ಇದು ನಮ್ಮ ಆರೋಗ್ಯ ಸೇವೆ ಎಲ್ಲೆಲ್ಲಿ ದುರ್ಬಲವಾಗಿದೆ ಎಂದು ಪರಿಶೀಲಿಸಿದರೆ ಸಿಗುವ ಒಂದು ಉದಾಹರಣೆ.
ದೇಶದ ಬಹುತೇಕ ಎಲ್ಲ ರಾಜ್ಯಗಳಲ್ಲೂ ಸರ್ಕಾರದಿಂದ ಉಚಿತ ಆಂಬ್ಯುಲೆನ್ಸ್ ವ್ಯವಸ್ಥೆ ಇದೆ. ಇದಕ್ಕಾಗಿ ಸರ್ಕಾರದ ಖಜಾನೆಯಿಂದ ದೊಡ್ಡ ಮೊತ್ತ ಖರ್ಚಾಗುತ್ತಿದೆ. ಇಷ್ಟಾಗಿಯೂ ಬಡ ಜನರಿಗೆ ಅಗತ್ಯ ಇರುವಾಗ ಈ ವ್ಯವಸ್ಥೆ ಸಿಗದೇ ಹೋಗುವುದು ಅಮಾನುಷ. ಇಂಥ ಘಟನೆಗಳು ಮಾನವೀಯತೆ ಮೇಲಿನ ಪ್ರಹಾರ ಮಾತ್ರವಲ್ಲ, ದೇಶದ ಪ್ರತಿಷ್ಠೆಗೇ ಕುಂದುಂಟು ಮಾಡುವಂಥವು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನ ಸಾಮಾನ್ಯರಿಗೆ ಯೋಜನೆ ರೂಪಿಸಿದರೆ ಸಾಲದು. ಅದರಿಂದ ಸಕಾಲಕ್ಕೆ ಜನರಿಗೆ ಪ್ರಯೋಜನ ಆಗುತ್ತಿದೆಯೇ ಎನ್ನುವುದನ್ನು ಖಾತರಿಪಡಿಸುವುದೂ ಅಷ್ಟೇ ಮುಖ್ಯ.
ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಟರ್ಕಿ ಭೂಕಂಪ ಪೀಡಿತರಿಗೆ ನೆರವು; ಮತ್ತೊಮ್ಮೆ ಜಗದ ಹೃದಯ ಗೆದ್ದ ಭಾರತ
ಪ್ರತಿವರ್ಷ ಕೇಂದ್ರ ಸರ್ಕಾರ ಆರೋಗ್ಯ ಬಜೆಟ್ ಅನ್ನು ಹಿಂದಿನ ವರ್ಷಕ್ಕಿಂತ ಎರಡೋ ಮೂರೋ ಶೇಕಡದಷ್ಟು ಹೆಚ್ಚಿಸುತ್ತದೆ. ಈ ವರ್ಷ ಆರೋಗ್ಯ ಸೇವೆಗೆ ಮೀಸಲಿಡಲಾದ ಮೊತ್ತ 88,956 ಕೋಟಿ ರೂಪಾಯಿ. ಇದೇನೂ ಸಣ್ಣ ಮೊತ್ತವಲ್ಲ. ಆದರೆ ಇದರ ಉಪಯೋಗ ಹೇಗೆ ಆಗುತ್ತಿದೆ ಎಂಬುದು ಮುಖ್ಯ. ಕಳೆದ ವರ್ಷವೇ ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್‌ನಡಿ ರಾಷ್ಟ್ರೀಯ ಡಿಜಿಟಲ್ ಆರೋಗ್ಯ ಮೂಲವ್ಯವಸ್ಥೆಯ ಬಗ್ಗೆ ಪ್ರಧಾನಮಂತ್ರಿಗಳು ಘೋಷಿಸಿದ್ದರು. ಡಿಜಿಟಲ್ ಆಗುವುದೆಂದರೆ ಸೇವೆ ಸಕಾಲಕ್ಕೆ ಅಂಗೈಯಲ್ಲೇ ಸಿಗುವುದು ಎಂದರ್ಥ. ಅದು ಗ್ರಾಮೀಣ ಪ್ರದೇಶದವರನ್ನು, ದೀನದಲಿತರನ್ನು, ಸಮಾಜದ ಅಂಚಿನಲ್ಲಿರುವವರನ್ನು ತಲುಪಿದಾಗ ಮಾತ್ರ ಸಾರ್ಥಕ. ಈ ನಿಟ್ಟಿನಲ್ಲಿ ಕೇಂದ್ರ- ರಾಜ್ಯ ಸರ್ಕಾರಗಳು ಹೆಚ್ಚಿನ ಗಮನ ಹರಿಸಬೇಕು.