Site icon Vistara News

ಕೋರ್ಟ್‌ನಲ್ಲೇ ಅಳಿಯನನ್ನು ಗುಂಡಿಕ್ಕಿ ಕೊಂದ ಮಾಜಿ ಪೊಲೀಸ್‌ ಅಧಿಕಾರಿ; ಕೃತ್ಯಕ್ಕೆ ಕಾರಣವೇನು?

Chandigarh Court

ಚಂಡೀಗಢ: ಪಂಜಾಬ್‌ನ ಚಂಡೀಗಢ ಕೋರ್ಟ್‌ನಲ್ಲಿ (Chandigarh Court) ಮಾಜಿ ಪೊಲೀಸ್‌ ಅಧಿಕಾರಿಯೊಬ್ಬರು ನೀರಾವರಿ ಇಲಾಖೆಯಲ್ಲಿ ಐಆರ್‌ಎಸ್‌ ಅಧಿಕಾರಿಯಾಗಿರುವ (IRS Officer) ವ್ಯಕ್ತಿಯೊಬ್ಬರ ಮೇಲೆ ಗುಂಡು ಹಾರಿಸಿ ಕೊಲೆ ಮಾಡಿದ್ದಾರೆ. ಮೃತರನ್ನು ಹರ್‌ಪ್ರೀತ್‌ ಸಿಂಗ್‌ ಎಂದು ಗುರುತಿಸಿದರೆ, ಕೊಲೆ ಆರೋಪಿಯನ್ನು ಮಾಲ್ವಿಂದರ್‌ ಸಿಂಗ್‌ ಸಿಧು ಎಂಬುದಾಗಿ ಗುರುತಿಸಲಾಗಿದೆ. ಮಾಲ್ವಿಂದರ್‌ ಸಿಂಗ್‌ಗೆ ಹರ್‌ಪ್ರೀತ್‌ ಸಿಂಗ್‌ ಅಳಿಯ (ಮಗಳ ಗಂಡ) ಆಗಬೇಕು ಎಂಬ ಸಂಗತಿಯು ಬಳಿಕ ಬಯಲಾಗಿದೆ.

ಮಾಲ್ವಿಂದರ್‌ ಸಿಂಗ್‌ ಹಾಗೂ ಹರ್‌ಪ್ರೀತ್‌ ಸಿಂಗ್‌ ಮಧ್ಯೆ ಕೌಟುಂಬಿಕ ಸಮಸ್ಯೆ, ಕಂದಕ ಉಂಟಾಗಿತ್ತು. ಹಾಗಾಗಿ, ಅವರು ನ್ಯಾಯಾಲಯ ಮೆಟ್ಟಿಲೇರಿದ್ದರು. ಹಾಗಾಗಿ, ಇಬ್ಬರೂ ಕೌಟುಂಬಿಕ ನ್ಯಾಯಾಲಯಕ್ಕೆ ತೆರಳಿದ್ದರು. ಇದೇ ವೇಳೆ ಇಬ್ಬರ ಮಧ್ಯೆ ಮಧ್ಯಸ್ಥಿಕೆ ಪ್ರಕ್ರಿಯೆ ನಡೆಯುತ್ತಿತ್ತು. ಆಗ, ಮಾಲ್ವಿಂದರ್‌ ಸಿಂಗ್‌, ಶೌಚಾಲಯಕ್ಕೆ ಹೋಗಿಬರುತ್ತೇನೆ ಎಂದು ಕೋಣೆಯಿಂದ ಹೊರಬಂದರು. ಇದೇ ವೇಳೆ ಮಾವನಿಗೆ ದಾರಿ ತೋರಿಸುತ್ತೇನೆ ಎಂದು ಹರ್‌ಪ್ರೀತ್‌ ಸಿಂಗ್‌ ಕೂಡ ಹೊರಬಂದರು. ಇದಾದ ಬಳಿಕ ಐದು ಬಾರಿ ಗುಂಡು ಹಾರಿಸಿದ ಸದ್ದು ಕೇಳಿದ ಕಾರಣ ಇಡೀ ಕೋರ್ಟ್‌ನಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಯಿತು.

ಮಾಲ್ವಿಂದರ್‌ ಸಿಂಗ್‌ ಅಳಿಯನಿಗೇ ಐದು ಬಾರಿ ಗುಂಡು ಹಾರಿಸಿದ್ದಾರೆ. ಐದರ ಪೈಕಿ ಎರಡು ಗುಂಡುಗಳು ಹರ್‌ಪ್ರೀತ್‌ ಸಿಂಗ್‌ಗೆ ತಗುಲಿವೆ. ಹರ್‌ಪ್ರೀತ್‌ ಸಿಂಗ್‌ ಕೋರ್ಟ್‌ನಲ್ಲಿ ಕೆಳಗೆ ಬಿದ್ದಿರುವ ವಿಡಿಯೊ ಲಭ್ಯವಾಗಿದೆ. “ಅವರಿಗೆ ಗುಂಡು ತಗುಲಿದೆ. ಯಾರಾದರೂ ಆಸ್ಪತ್ರೆಗೆ ಕರೆದುಕೊಂಡು ನಡೆಯಿರಿ” ಎಂದು ವ್ಯಕ್ತಿಯೊಬ್ಬ ಹೇಳುತ್ತಿರುವುದು ವಿಡಿಯೊದಲ್ಲಿ ದಾಖಲಾಗಿದೆ. ಬಳಿಕ ಹರ್‌ಪ್ರೀತ್‌ ಸಿಂಗ್‌ ಅವರನ್ನು ಆಸ್ಪತ್ರೆಗೆ ಸಾಗಿಸಲು ಪ್ರಯತ್ನಿಸಿದರೂ ಮಾರ್ಗ ಮಧ್ಯೆಯೇ ಅಧಿಕಾರಿ ಮೃತಪಟ್ಟರು ಎಂದು ತಿಳಿದುಬಂದಿದೆ.

ಅಳಿಯನಿಗೇ ಗುಂಡು ಹಾರಿಸಿದ ವ್ಯಕ್ತಿಯನ್ನು ಕೆಲ ವಕೀಲರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಇದಾದ ಬಳಿಕ ಪೊಲೀಸರು ಮಾಲ್ವಿಂದರ್‌ ಸಿಂಗ್‌ ಅವರನ್ನು ಬಂಧಿಸಿದರು. ಕೋರ್ಟ್‌ನಲ್ಲೇ ಹರ್‌ಪ್ರೀತ್‌ ಸಿಂಗ್‌ ರಕ್ತದ ಮಡುವಿನಲ್ಲಿ ಬಿದ್ದ ವಿಡಿಯೊ ಕೂಡ ಲಭ್ಯವಾಗಿದೆ. ಇಬ್ಬರ ನಡುವಿನ ಕೌಂಟುಂಬಿಕ ಸಮಸ್ಯೆ ಏನು? ಮಗಳಿಗೆ ಹರ್‌ಪ್ರೀತ್‌ ಸಿಂಗ್‌ ಕಿರುಕುಳ ಕೊಡುತ್ತಿದ್ದರಾ? ಸಂಧಾನಕ್ಕೆ ಬಂದವರ ಮಧ್ಯೆ ಗಲಾಟೆ ಏಕೆ ನಡೆಯಿತು ಎಂಬುದು ಸೇರಿ ಕೃತ್ಯಕ್ಕೆ ಕಾರಣ ಏನು ಎಂಬುದು ಇದುವರೆಗೆ ಗೊತ್ತಾಗಿಲ್ಲ. ಮಾಲ್ವಿಂದರ್‌ ಸಿಂಗ್‌ ಅವರು ಅಸಿಸ್ಟಂಟ್‌ ಐಜಿಪಿಯಾಗಿದ್ದರು ಹಾಗೂ ಅವರು ಅಮಾನತಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: Murder Case: ಒಂಟಿ ಕೈ ರೌಡಿಯಿಂದ ಇನ್ನೊಬ್ಬ ರೌಡಿಯ ಕೊಚ್ಚಿ ಕೊಲೆ

Exit mobile version