ಹೊಸದಿಲ್ಲಿ: 2023ರ ಪಂಚರಾಜ್ಯ ವಿಧಾನಸಭಾ ಚುನಾವಣೆಗಳ (Assembly elections 2023) ಎಲ್ಲಾ ಐದು ರಾಜ್ಯಗಳ ಎಕ್ಸಿಟ್ ಪೋಲ್ ಫಲಿತಾಂಶಗಳು (Exit Poll Results 2023) – ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ, ಛತ್ತೀಸ್‌ಗಢ ಮತ್ತು ಮಿಜೋರಾಂ – ಹೊರಬಿದ್ದಿವೆ. ಬಿಜೆಪಿ ಮತ್ತು ಕಾಂಗ್ರೆಸ್ ತಲಾ ಎರಡು ರಾಜ್ಯಗಳನ್ನು ಗೆಲ್ಲುವ ಮುನ್ಸೂಚನೆ ನೀಡಿವೆ. ಎರಡೂ ಪಕ್ಷಗಳಿಗೂ ಇದು ಮಿಶ್ರ ಭಾವ ಮೂಡಿಸಿದ್ದು, ಇಂದು ಬಿಜೆಪಿ ಪ್ರಧಾನ ಕಚೇರಿಯಲ್ಲಿ ಇಂದು ಸಭೆ ನಡೆಯಲಿದೆ.
ಸಂಭವನೀಯ ಚುನಾವಣಾ ಫಲಿತಾಂಶಗಳ ಕುರಿತು ಬಿಜೆಪಿಯ ಪ್ರಧಾನ ಕಾರ್ಯದರ್ಶಿಗಳ ಪ್ರಮುಖ ಸಭೆಯು ಹೊಸದಿಲ್ಲಿಯಲ್ಲಿರುವ ಪಕ್ಷದ ಪ್ರಧಾನ ಕಚೇರಿಯಲ್ಲಿ ಇಂದು ನಡೆಯಲಿದೆ. ಕೆಲವು ನಾಯಕರು ಎಕ್ಸಿಟ್ ಪೋಲ್‌ಗಳ ಮೇಲೆ ತಾವು ಅವಲಂಬಿತವಾಗಿಲ್ಲ ಎಂದು ಹೇಳಿದರೆ, ಕೆಲವರು ತಮ್ಮ ಪಕ್ಷದ ಗೆಲುವಿನ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಎಕ್ಸಿಟ್ ಪೋಲ್‌ಗಳಲ್ಲಿ ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದರೆ, ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಉಳಿಯಬಹುದು ಎಂದು ಆರಂಭಿಕ ಮುನ್ನೋಟಗಳು ಸೂಚಿಸಿವೆ. ತೆಲಂಗಾಣದಲ್ಲಿ ಕಾಂಗ್ರೆಸ್ ಬಿಆರ್‌ಎಸ್ ಅನ್ನು ಕೆಳಗಿಳಿಸಬಹುದೆಂದು ಸಮೀಕ್ಷೆ ಸೂಚಿಸಿದೆ. ಎಲ್ಲಾ ಐದು ರಾಜ್ಯಗಳ ಮತ ಎಣಿಕೆ ಡಿಸೆಂಬರ್ 3ರಂದು ನಡೆಯಲಿದೆ.
ಮಧ್ಯಪ್ರದೇಶದಲ್ಲಿ ಬಿಜೆಪಿ ನಾಯಕಿ ಉಮಾಭಾರತಿ ಅವರು ಎಕ್ಸಿಟ್ ಪೋಲ್‌ಗಳನ್ನು ತಾವು ಅವಲಂಬಿಸುವುದಿಲ್ಲ ಎಂದಿದ್ದಾರೆ. “230 ಸ್ಥಾನಗಳಲ್ಲಿ ಒಂದು ಪಕ್ಷವು 112ರಿಂದ 130 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ. ಈಗ, ಆ ಪಕ್ಷವು 112 ಸ್ಥಾನಗಳನ್ನು ಪಡೆದು ಚುನಾವಣೆಯಲ್ಲಿ ಸೋತರೆ, ಎಕ್ಸಿಟ್ ಪೋಲ್‌ಸ್ಟರ್‌ಗಳು ತಾವು ಹೇಳಿದ್ದು ಸರಿ ಎನ್ನುತ್ತಾರೆ. ಆ ಪಕ್ಷ 120 ಸ್ಥಾನಗಳನ್ನು ಪಡೆದು ಗೆದ್ದಾಗಲೂ ಭವಿಷ್ಯ ಸರಿಯಾಗಿದೆ ಎನ್ನುತ್ತಾರೆ. ಆದ್ದರಿಂದ ಎಕ್ಸಿಟ್ ಪೋಲ್‌ಗಳು ಒಂದೇ ನಾಣ್ಯದ ಎರಡು ಮುಖಗಳು. ನಾನು ಅವರ ಮೇಲೆ ಅವಲಂಬಿತವಾಗಿಲ್ಲ” ಎಂದಿದ್ದಾರೆ. “ನನ್ನ ಪಕ್ಷ ಮಧ್ಯಪ್ರದೇಶದಲ್ಲಿ ಸರ್ಕಾರ ರಚಿಸಬೇಕೆಂದು ನಾನು ಬಯಸುತ್ತೇನೆ. ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ನಾನು ತುಂಬಾ ಗೌರವಿಸುತ್ತೇನೆʼʼ ಎಂದು ಹೇಳಿದ್ದಾರೆ.
ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್, “ಎಕ್ಸಿಟ್ ಪೋಲ್ ಫಲಿತಾಂಶಗಳು ವೈವಿಧ್ಯಮಯವಾಗಿವೆ. ಅದರ ಬಗ್ಗೆ ನಾವು ಏನನ್ನೂ ಹೇಳಲಾರೆವು. ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ 130ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯಲಿದೆ ಎಂದು ನಾನು ನಿಮಗೆ ಭರವಸೆ ನೀಡಬಲ್ಲೆ. ಜನರು ಪರಿವರ್ತನೆ ಬಯಸುತ್ತಿದ್ದಾರೆ. ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಆಡಳಿತದಿಂದ ಬೇಸತ್ತಿದ್ದಾರೆʼʼ ಎಂದಿದ್ದಾರೆ.
ಛತ್ತೀಸ್‌ಗಢದಲ್ಲಿ ತಮ್ಮ ಪಕ್ಷವು ಸುಮಾರು 80% ಸ್ಥಾನಗಳನ್ನು ಪಡೆಯಲಿದೆ ಎಂದು ಛತ್ತೀಸ್‌ಗಢ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಬೈಜ್ ವಿಶ್ವಾಸ ವ್ಯಕ್ತಪಡಿಸಿದರು. “ಇತರ ರಾಜ್ಯಗಳ ಎಕ್ಸಿಟ್ ಪೋಲ್‌ಗಳು ಉತ್ತಮವಾಗಿವೆ. ಮಧ್ಯಪ್ರದೇಶ ಮತ್ತು ತೆಲಂಗಾಣದಲ್ಲೂ ಉತ್ತಮ ವಾತಾವರಣವಿದೆ. ತೆಲಂಗಾಣದಲ್ಲಿ ಶೇ. 80ರಷ್ಟು ಸೀಟುಗಳನ್ನು ಪಡೆಯುತ್ತೇವೆ. ನಾಲ್ಕು ರಾಜ್ಯಗಳಲ್ಲಿ ಕಾಂಗ್ರೆಸ್ ಸರ್ಕಾರ ರಚಿಸಲಿದೆ ಎಂದರು.
ಬಿಜೆಪಿಯ ಹಿರಿಯ ನಾಯಕಿ ಸರೋಜ್ ಪಾಂಡೆ ಅವರು, “ಎಕ್ಸಿಟ್ ಪೋಲ್‌ಗಳು ಜನರು ಪ್ರಧಾನಿ ಮೋದಿಯವರ ಮೇಲೆ ಇಟ್ಟಿರುವ ವಿಶ್ವಾಸವನ್ನು ತೋರಿಸಿವೆ. ಬಿಜೆಪಿ ಸಾಕಷ್ಟು ಪ್ರಗತಿ ಸಾಧಿಸಿದೆ. ನಾವು ನಮ್ಮ ಸರ್ಕಾರವನ್ನು ಹೊಂದಿರದ ರಾಜ್ಯಗಳಲ್ಲಿ ಸರ್ಕಾರವನ್ನು ರಚಿಸುತ್ತೇವೆ” ಎಂದಿದ್ದಾರೆ.
ಛತ್ತೀಸ್‌ಗಢದ ಮಾಜಿ ಸಿಎಂ ಮತ್ತು ಬಿಜೆಪಿ ನಾಯಕ ರಮಣ್ ಸಿಂಗ್, “ಬಿಜೆಪಿ ಭಾರಿ ಜಿಗಿತವನ್ನು ಸಾಧಿಸಿದೆ ಎಂದು ಎಕ್ಸಿಟ್ ಪೋಲ್‌ನಿಂದ ಸ್ಪಷ್ಟವಾಗಿದೆ. 15 ಸ್ಥಾನಗಳಿಂದ 48 ಸ್ಥಾನಗಳಿಗೆ ಜಿಗಿದಿದ್ದೇವೆ. ಇದು ಖಂಡಿತವಾಗಿ 48 ಸೀಟುಗಳನ್ನು ದಾಟಲಿದೆ ಮತ್ತು ನಾವು ಸುಮಾರು 55-56 ಸ್ಥಾನಗಳನ್ನು ಪಡೆಯುತ್ತೇವೆ. ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಸರ್ಕಾರವನ್ನು ರಚಿಸುತ್ತದೆ” ಎಂದಿದ್ದಾರೆ.
ಛತ್ತೀಸ್‌ಗಢ ಸಿಎಂ ಮತ್ತು ಕಾಂಗ್ರೆಸ್ ನಾಯಕ ಭೂಪೇಶ್ ಬಘೇಲ್, “ನಾವು 75 ಸ್ಥಾನಗಳನ್ನು ಪಡೆಯುವ ಗುರಿಯನ್ನು ಹೊಂದಿದ್ದೇವೆ ಮತ್ತು ನಾವು ಆ ಅಂಕಿಅಂಶಕ್ಕೆ ಹತ್ತಿರದಲ್ಲಿರುತ್ತೇವೆ” ಎಂದಿದ್ದಾರೆ.
ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷ ರೇವಂತ್ ರೆಡ್ಡಿ ಅವರು ಎಕ್ಸಿಟ್ ಪೋಲ್ ಫಲಿತಾಂಶಗಳನ್ನು “ತೆಲಂಗಾಣ ಜನತೆಯ ಗೆಲುವು” ಎಂದು ಬಣ್ಣಿಸಿದ್ದಾರೆ. “ಈ ಚುನಾವಣೆ ಕಾಂಗ್ರೆಸ್ ವಿರುದ್ಧ ಬಿಆರ್‌ಎಸ್ ಅಲ್ಲ. 4 ಕೋಟಿ ಜನರು ಬಿಆರ್‌ಎಸ್ ವಿರುದ್ಧ ಇದ್ದರು. ಇದು ತೆಲಂಗಾಣ ಜನತೆಯ ಗೆಲುವು. ನಾವು ಆರು ಗ್ಯಾರಂಟಿಗಳನ್ನು ಮೊದಲ ಕ್ಯಾಬಿನೆಟ್‌ನಲ್ಲಿಯೇ ಕಾರ್ಯರೂಪಕ್ಕೆ ತರುತ್ತೇವೆ. ಕಾಂಗ್ರೆಸ್ ಈ ಬಾರಿ ಪ್ರಚಂಡ ಗೆಲುವು ಸಾಧಿಸಲಿದೆ. ಅದೇ ವಿಷಯ ಎಕ್ಸಿಟ್ ಪೋಲ್‌ಗಳಲ್ಲಿ ಪ್ರತಿಫಲಿಸಿದೆ. ನಾವು 80ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯಲಿದ್ದೇವೆ” ಎಂದು ಅವರು ಹೇಳಿದರು.
ಇದನ್ನೂ ಓದಿ: Exit Polls Result 2023: ತೆಲಂಗಾಣ, ಛತ್ತೀಸ್‌ಗಢ ‘ಕೈ’ವಶ, ರಾಜಸ್ಥಾನಕ್ಕೆ ಬಿಜೆಪಿ, ಎಂಪಿಯಲ್ಲಿ ಸಮಬಲ!