Site icon Vistara News

ಮತಗಟ್ಟೆ ಸಮೀಕ್ಷೆ; ಇದಕ್ಕೂ ಮೊದಲಿನ ಸಮೀಕ್ಷೆಗಳು ಏನು ಹೇಳಿದ್ದವು? ಫಲಿತಾಂಶ ಏನಾಗಿತ್ತು?

Exit Poll Results 2023

Exit Poll Results 2023: Here are five times when they were way off the mark

ನವದೆಹಲಿ: 2024ರಲ್ಲಿ ನಡೆಯುವ ಲೋಕಸಭೆ ಚುನಾವಣೆಯ (Lok Sabha Election 2023) ದಿಕ್ಸೂಚಿ ಎಂದೇ ಬಿಂಬಿತವಾಗಿರುವ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ ಮುಕ್ತಾಯಗೊಂಡಿದೆ. ತೆಲಂಗಾಣ, ಮಧ್ಯಪ್ರದೇಶ, ಛತ್ತೀಸ್‌ಗಢ, ರಾಜಸ್ಥಾನ ಹಾಗೂ ಮಿಜೋರಾಂನಲ್ಲಿ ಚುನಾವಣೆ ಮುಗಿಯುತ್ತಲೇ ಮತಗಟ್ಟೆ ಸಮೀಕ್ಷಾ ವರದಿಗಳು (Exit Polls Result 2023) ಲಭ್ಯವಾಗಿವೆ. ಮತಗಟ್ಟೆ ಸಮೀಕ್ಷೆಗಳ ಕುರಿತು ಚರ್ಚೆಯೂ ಜೋರಾಗಿ ನಡೆಯುತ್ತಿದೆ. ಹಾಗಾದರೆ, ಇದಕ್ಕೂ ಮೊದಲು ನಡೆದ ಪ್ರಮುಖ ಚುನಾವಣೆಗಳಲ್ಲಿ ಮತಗಟ್ಟೆ ಸಮೀಕ್ಷೆ ಏನು ಹೇಳಿದ್ದವು? ಮತಗಟ್ಟೆ ಸಮೀಕ್ಷೆಗೂ, ಚುನಾವಣೆ ಫಲಿತಾಂಶಕ್ಕೂ ಏನು ವ್ಯತ್ಯಾಸವಾಗಿತ್ತು ಎಂಬುದರ ಕಿರು ಮಾಹಿತಿ ಇಲ್ಲಿದೆ.

2019ರ ಲೋಕಸಭೆ ಚುನಾವಣೆ

ದೇಶವೇ ಕುತೂಹಲದಿಂದ ಎದುರು ನೋಡುತ್ತಿದ್ದ 2019ರ ಲೋಕಸಭೆ ಚುನಾವಣೆ ಬಳಿಕ ಬಹಿರಂಗವಾಗಿದ್ದ ಮತಗಟ್ಟೆ ಸಮೀಕ್ಷೆಗಳು ಬಹುತೇಕ ನಿಜವಾಗಿದ್ದವು. ಟೈಮ್ಸ್‌ ನೌ, ಚಾಣಕ್ಯ, ಇಂಡಿಯಾ ಟುಡೇ, ನ್ಯೂಸ್‌ 18 ಹಾಗೂ ಜನ್‌ ಕೀ ಬಾತ್‌ ಸಮೀಕ್ಷೆಗಳ ಪ್ರಕಾರ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು 300ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುತ್ತದೆ ಎಂದು ತಿಳಿಸಿದ್ದವು. ಯಾವೊಂದು ಸಮೀಕ್ಷೆಯೂ ಕಾಂಗ್ರೆಸ್‌ ಗೆಲುವು ಸಾಧಿಸುತ್ತದೆ ಎಂದು ತಿಳಿಸಿರಲಿಲ್ಲ.

ಚುನಾವಣೆ ಫಲಿತಾಂಶ ಪ್ರಕಟವಾದಾಗ ಎನ್‌ಡಿಎ 353 (ಬಿಜೆಪಿ 303) ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತು. ಇನ್ನು ಕಾಂಗ್ರೆಸ್‌ 52 ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸಿತು. ಕಾಂಗ್ರೆಸ್‌ ಸರಾಸರಿ 100-120 ಕ್ಷೇತ್ರಗಳಲ್ಲಿ ಜಯಿಸಲಿದೆ ಎಂದು ಬಹುತೇಕ ಸಮೀಕ್ಷೆಗಳು ತಿಳಿಸಿದ್ದವು. ಆದರೆ, ಸಮೀಕ್ಷಾ ವರದಿ ತಿಳಿಸಿದ ಅರ್ಧದಷ್ಟು ಕ್ಷೇತ್ರಗಳಲ್ಲಿ ಮಾತ್ರ ಕಾಂಗ್ರೆಸ್‌ ಜಯಿಸಿತ್ತು.

ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ 2022

2022ರಲ್ಲಿ ಉತ್ತರ ಪ್ರದೇಶದಲ್ಲಿ ನಡೆದ ವಿಧಾನಸಭೆ ಚುನಾವಣೆ ಬಳಿಕ ಸಮೀಕ್ಷಾ ವರದಿಗಳ ಅಂದಾಜೇ ನಿಜವಾಗಿತ್ತು. ಬಹುತೇಕ ಸಮೀಕ್ಷೆಗಳು ಬಿಜೆಪಿಯೇ ರಾಜ್ಯದಲ್ಲಿ ಮತ್ತೆ ಅಧಿಕಾರದ ಗದ್ದುಗೆ ಏರಲಿದೆ ಎಂದು ತಿಳಿಸಿದ್ದವು. ಬಿಜೆಪಿ 288-326 ಕ್ಷೇತ್ರ, ಎಸ್‌ಪಿ 71-101, ಕಾಂಗ್ರೆಸ್‌ 1-3 ಕ್ಷೇತ್ರಗಳಲ್ಲಿ ಎಂದು ಇಂಡಿಯಾ ಟುಡೇ, ಬಿಜೆಪಿ 225, ಎಸ್‌ಪಿ 151, ಕಾಂಗ್ರೆಸ್‌ 9 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಟೈಮ್ಸ್‌ ನೌ ಮತಗಟ್ಟೆ ಸಮೀಕ್ಷೆ ತಿಳಿಸಿತ್ತು. ಬಹುತೇಕ ಸಮೀಕ್ಷೆಗಳು ಇದನ್ನೇ ನುಡಿದಿದ್ದವು.

ಉತ್ತರ ಪ್ರದೇಶದಲ್ಲಿ ಚುನಾವಣೆ ಫಲಿತಾಂಶ ಪ್ರಕಟವಾದಾಗ ಬಿಜೆಪಿ 255 ಕ್ಷೇತ್ರಗಳಲ್ಲಿ, ಸಮಾಜವಾದಿ ಪಕ್ಷ 111, ಕಾಂಗ್ರೆಸ್‌ 2, ಬಿಎಸ್‌ಪಿ 1 ಹಾಗೂ ಸ್ವತಂತ್ರ ಅಭ್ಯರ್ಥಿಗಳು 34 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರು. ಇದರೊಂದಿಗೆ ಯೋಗಿ ಆದಿತ್ಯನಾಥ್‌ ಅವರು ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಆಯ್ಕೆಯಾದರು.

ಪಂಜಾಬ್‌ ವಿಧಾನಸಭೆ ಚುನಾವಣೆ 2022

2022ರಲ್ಲಿ ವಿಧಾನಸಭೆ ಚುನಾವಣೆ ಬಳಿಕ ಮತಗಟ್ಟೆ ಸಮೀಕ್ಷೆಗಳ ವರದಿಯು ಭಾಗಶಃ ನಿಜವಾಗಿತ್ತು. ಇಂಡಿಯಾ ಟುಡೇ-ಆ್ಯಕ್ಸಿಸ್‌ ಮೈ ಇಂಡಿಯಾ ಮತಗಟ್ಟೆ ಸಮೀಕ್ಷೆಯು ಆಮ್‌ ಆದ್ಮಿ ಪಕ್ಷ 76-90 ಸೀಟು ಗೆಲ್ಲಲಿದೆ ಎಂದು ತಿಳಿಸಿತ್ತು. ಆಪ್‌ 62-70, ಕಾಂಗ್ರೆಸ್‌ 21-31, ಅಕಾಲಿ ದಳ 16-24 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ರಿಪಬ್ಲಿಕ್-‌ಪಿ ಮಾರ್ಕ್‌ ಮತಗಟ್ಟೆ ಸಮೀಕ್ಷೆ ತಿಳಿಸಿತ್ತು.

ಪಂಜಾಬ್‌ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾದಾಗ ಆಮ್‌ ಆದ್ಮಿ ಪಕ್ಷವು ನಿರೀಕ್ಷೆಗೂ ಮೀರಿ ಗೆಲುವು ಸಾಧಿಸಿತ್ತು. ಒಟ್ಟು 117 ಕ್ಷೇತ್ರಗಳ ಪೈಕಿ 92 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಆಡಳಿತ ನಡೆಸುತ್ತಿದ್ದ ಕಾಂಗ್ರೆಸ್‌ 18 ಕ್ಷೇತ್ರಗಳಲ್ಲಿ ಹಾಗೂ ಭಾರಿ ಪ್ರಯೋಗಕ್ಕೆ ಮುಂದಾಗಿದ್ದ ಬಿಜೆಪಿ ಕೇವಲ 2 ಕ್ಷೇತ್ರಗಳಲ್ಲಿ ಜಯಿಸಿತ್ತು.

ಗುಜರಾತ್‌ ವಿಧಾನಸಭೆ ಚುನಾವಣೆ 2022

ದೇಶದ ಗಮನ ಸೆಳೆದಿದ್ದ 2022ರ ಗುಜರಾತ್‌ ವಿಧಾನಸಭೆ ಚುನಾವಣೆಯಲ್ಲೂ ಮತಗಟ್ಟೆ ಸಮೀಕ್ಷೆಗಳ ವರದಿಗಳೇ ನಿಜವಾಗಿದ್ದವು. ಟೈಮ್ಸ್‌ ನೌ-ಇಟಿಜಿಯು ಬಿಜೆಪಿ 131, ಕಾಂಗ್ರೆಸ್‌ 41 ಹಾಗೂ ಆಪ್‌ 6 ಕ್ಷೇತ್ರಗಳಲ್ಲಿ ಜಯಿಸಲಿದೆ ಎಂದು ಹೇಳಿತ್ತು. ಸಿ ವೋಟರ್‌ ಕೂಡ ಬಿಜೆಪಿ 134, ಕಾಂಗ್ರೆಸ್‌ 37 ಹಾಗೂ ಆಪ್‌ 7 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಹೇಳಿತ್ತು. ಇನ್ನು ಗುಜರಾತ್‌ನಲ್ಲಿ ಮತಗಟ್ಟೆ ಸಮೀಕ್ಷೆಗಳು ಭವಿಷ್ಯ ನುಡಿದಂತೆ ಬಿಜೆಪಿ 156 ಕ್ಷೇತ್ರ, ಆಪ್‌ 5 ಹಾಗೂ ಕಾಂಗ್ರೆಸ್‌ 17 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ, ಬಿಜೆಪಿ ಮತ್ತೆ ಅಧಿಕಾರದ ಗದ್ದುಗೆ ಹಿಡಿದಿತ್ತು.

ಕರ್ನಾಟಕ ವಿಧಾನಸಭೆ ಚುನಾವಣೆ 2023

ದೇಶದ ಗಮನ ಸೆಳೆದಿದ್ದ ಕರ್ನಾಟಕ ವಿಧಾನಸಭೆ ಚುನಾವಣೆ ಬಳಿಕ ಪ್ರಕಟವಾದ ಮತಗಟ್ಟೆ ಸಮೀಕ್ಷೆ ವರದಿಗಳನ್ನು ಮೀರಿ ಫಲಿತಾಂಶ ಪ್ರಕಟವಾಗಿತ್ತು. ಕಾಂಗ್ರೆಸ್‌ ಮುನ್ನಡೆ ಸಾಧಿಸಿದರೂ ಸುಲಭವಾಗಿ ಬಹುಮತ ಸಿಗುವುದಿಲ್ಲ ಎಂದೇ ಬಹುತೇಕ ಸಮೀಕ್ಷೆಗಳು ತಿಳಿಸಿದ್ದವು. ಬಿಜೆಪಿಯು 83-95, ಕಾಂಗ್ರೆಸ್‌ 100-112, ಜೆಡಿಎಸ್‌ 21-29 ಹಾಗೂ ಪಕ್ಷೇತರರು 02-06 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ಟಿವಿ 9 ಸಿ ವೋಟರ್‌ ಸಮೀಕ್ಷೆ ತಿಳಿಸಿತ್ತು. ಬಿಜೆಪಿಯು 94-117, ಕಾಂಗ್ರೆಸ್‌ 91-106, ಜೆಡಿಎಸ್‌ 14-24 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಜನ್‌ ಕೀ ಬಾತ್‌ ಸಮೀಕ್ಷೆ ತಿಳಿಸಿತ್ತು.

ಇದನ್ನೂ ಓದಿ: Assembly Elections: ‘ಉಚಿತ ಗ್ಯಾರಂಟಿ’ಗಿಂತ 4 ರಾಜ್ಯಗಳ ಚುನಾವಣೆಯಲ್ಲಿ ಜಾತಿ ಮತಗಳೇ ನಿರ್ಣಾಯಕ!

ಚುನಾವಣೆ ಫಲಿತಾಂಶವು ಬಿಜೆಪಿ, ಜೆಡಿಎಸ್‌ ಬಿಡಿ, ಖುದ್ದು ಕಾಂಗ್ರೆಸ್‌ಗೇ ಅಚ್ಚರಿ ಮೂಡಿಸಿತ್ತು. ಕಾಂಗ್ರೆಸ್‌ ನಿರೀಕ್ಷೆಗೂ ಮೀರಿ ಕಾಂಗ್ರೆಸ್‌ 135 ಸ್ಥಾನಗಳನ್ನು ಗೆದ್ದರೆ, ಬಿಜೆಪಿ ಕೇವಲ 66 ಕ್ಷೇತ್ರಗಳಲ್ಲಿ ಗೆಲುವಿನ ನಗೆ ಬೀರಿತ್ತು. ಜೆಡಿಎಸ್‌ ಕೇವಲ 19 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿತ್ತು. ಮತಗಟ್ಟೆ ಸಮೀಕ್ಷೆಯ ಅಂದಾಜನ್ನೂ ಮೀರಿ ಫಲಿತಾಂಶ ಪ್ರಕಟವಾಗಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version