‘ತ್ರಿವಳಿ ತಲಾಖ್’ ನಿಷೇಧ ಬೆನ್ನಲ್ಲೇ ಈಗ ಮುಸ್ಲಿಮ್ ಮಹಿಳೆಯರು ಮತ್ತೊಂದು ರೀತಿಯ ತಲಾಖ್ ಅಪಾಯವನ್ನು ಎದುರಿಸುತ್ತಿದ್ದಾರೆ. ಮುಸ್ಲಿಮ್ ವಿವಾಹ ಪದ್ಧತಿಯಲ್ಲಿ ತಲಾಖ್-ಇ-ಹಸನ್ ಎಂಬ ಪದ್ಧತಿಯೂ ಜಾರಿಯಲ್ಲಿದ್ದು, ವಿವಾಹಿತ ಮಹಿಳೆಯರೂ ಇದರಿಂದಲೂ ತೊಂದರೆ ಅನುಭವಿಸುತ್ತಿದ್ದಾರೆ. ಈ ಸಂಬಂಧ ಸುಪ್ರೀ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ.
ಉತ್ತರ ಪ್ರದೇಶ ಮೂಲದ ಬೆನಜಿರ್ ಹೀನಾ ಎಂಬುವವರು ಈ ತಲಾಖ್-ಇ-ಹಸನ್ ವಿರುದ್ಧ ಕೋರ್ಟ್ ಮೊರೆ ಹೋಗಿದ್ದಾರೆ. ಅವರು ತಲಾಖ್-ಇ-ಹಸನ್ ಸಿಂಧುತ್ವವನ್ನು ಪ್ರಶ್ನಿಸಿದ್ದಾರೆ. ಪುರುಷರು ಏಕಪಕ್ಷೀಯವಾಗಿ ವಿವಾಹವನ್ನು ರದ್ದುಗೊಳಿಸಲು ಈ ಪದ್ಧತಿಯನ್ನು ಬಳಸಿಕೊಳ್ಳುತ್ತಿದ್ದಾರೆ. ಮಹಿಳೆಯರನ್ನು ಸಂಕಷ್ಟಕ್ಕೆ ತಳ್ಳುತ್ತಿದ್ದಾರೆ. ಈ ಬಗ್ಗೆಯೂ ಸುಪ್ರೀಂ ಕೋರ್ಟ್ ಕೂಲಂಕುಷ ವಿಚಾರಣೆ ನಡೆಸಿ, ಮಹಿಳೆಯರಿಗೆ ನ್ಯಾಯ ಕೊಡಿಸಬೇಕು ಎಂಬ ವಾದವನ್ನು ಮಂಡಿಸಿದ್ದಾರೆ. ಸ್ವತಃ ಪ್ರಕರಣವನ್ನು ಸುಪ್ರೀಂ ಕೋರ್ಟ್ ಗಮನಕ್ಕೆ ತಂದಿರುವ ಅವರು, ತಮಗಾದ ಅನ್ಯಾಯವನ್ನು ಕೋರ್ಟ್‌ಗೆ ಮನವರಿಕೆ ಮಾಡಿಕೊಡುವ ಪ್ರಯತ್ನವನ್ನು ಮಾಡುತ್ತಿದ್ದಾರೆ.
ಸಂಕಷ್ಟದಲ್ಲಿ ಮಹಿಳೆಯರು
ತಲಾಖ್-ಇ-ಹಸನ್ ಪದ್ಧತಿಯಲ್ಲಿ ಪುರುಷರು ಏಕಪಕ್ಷೀಯವಾಗಿ ವಿವಾಹವನ್ನು ರದ್ದು ಮಾಡುತ್ತಿರುವುದರಿಂದ ಮಹಿಳೆಯರಿಗೆ ಅನ್ಯಾಯವಾಗುತ್ತಿದೆ. ವಿಶೇಷವಾಗಿ ಗ್ರಾಮೀಣ ಪ್ರದೇಶದಲ್ಲಿರುವ ಮಹಿಳೆಯರು ಈ ಅನ್ಯಾಯವನ್ನು ಮೌನವಾಗಿ ಸಹಿಸಿಕೊಳ್ಳುತಿದ್ದಾರೆಂದು ಅರ್ಜಿದಾರಳಾಗಿರುವ ಹೀನಾ ಅವರು ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದಾರೆ. ನಾನೊಬ್ಬಳು ಪತ್ರಕರ್ತೆ. ಸುಪ್ರೀಂ ಕೋರ್ಟ್ ಮುಂದೆ ನನ್ನ ಪ್ರಕರಣವನ್ನು ಮಂಡಿಸಲು ಸಾಕಷ್ಟು ಜನರು ಸಹಾಯ ಮಾಡಿದ್ದಾರೆ. ಆದರೆ, ಹಳ್ಳಿಗಳಲ್ಲಿರುವ ಮಹಿಳೆಯರು ಈ ತಲಾಖ್-ಇ-ಹಸನ್ ಪದ್ಧತಿಯಿಂದ ಸಾಕಷ್ಟು ನೋವು ಅನುಭವಿಸುತ್ತಿದ್ದಾರೆಂದು ಅವರು ವಾದ ಮಂಡಿಸಿದ್ದಾರೆ.
ಹೀನಾಳ ಗಂಡನಿಗೆ ನೋಟಿಸ್
ಈಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವ ಹೀನಾ ಅವರಿಗೆ ಅವರ ಪತಿ ತಮ್ಮ ಗೆಳೆಯನ ಮೂಲಕ ತಲಾಖ್ ನೀಡಿದ್ದಾರೆ! ಹೀನಾ ಪರವಾಗಿ ವಾದ ಮಂಡಿಸುತ್ತಿರುವ ಶ್ಯಾಮ್ ದಿವಾನ್ ಅವರು, ಅರ್ಜಿದಾರಳು ಈಗಲೂ ಗಂಡನೇ ತನ್ನ ಹಾಗೂ ತನ್ನ ಮಗುವಿನ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ಬಯಸುತ್ತಿರುವುದರಿಂದ ಕೋರ್ಟ್, ವಕೀಲರೂ ಆಗಿರುವ ಅರ್ಜಿದಾರಳ ಪತಿಯ ವಿರುದ್ಧ ಖಟ್ಲೆ ಹೂಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ಹೀನಾ ಅವರ ಗಂಡನ ವಿರುದ್ಧ ದಾವೆ ದಾಖಲಿಸಿಕೊಂಡು, ಅಕ್ಟೋಬರ್ 11ರೊಳಗೆ ಉತ್ತರ ನೀಡುವಂತೆ ನೋಟಿಸ್ ನೀಡಿದೆ.
ಕೋರ್ಟ್ ಏನು ಹೇಳಿದೆ?
ತಲಾಖ್-ಇ-ಹಸನ್ ಅನ್ನು ಇಸ್ಲಾಮ್ ಒದಗಿಸಿದೆ. ಆದರೆ, ಇದಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ನಿಯಮಗಳ ಅನುಸಾರ ಮಾಡಲಾಗಿದೆಯೇ ಎಂಬುದನ್ನು ಗಮನಿಸಬೇಕಿದೆ. ಬಹಳಷ್ಟು ಸಂದರ್ಭದಲ್ಲಿ ದೊಡ್ಡ ವಿಷಯಗಳನ್ನು ನಿರ್ಧರಿಸುವಾಗ, ಪರಿಸ್ಥಿತಿ ಮತ್ತು ಪದ್ಧತಿಯ ಕಾರಣಕ್ಕೆ ಬಲಿಪಶುಗಳಾದವರಿಗೆ ತಕ್ಷಣಕ್ಕೆ ಪರಿಹಾರ ದೊರೆಯುವುದಿಲ್ಲ. ಆ ಕಾರಣಕ್ಕೆ ಅರ್ಜಿದಾರಳ ಗಂಡನಿಗೆ ನೋಟಿಸು ನೀಡುತ್ತಿದ್ದೇವೆ ಎಂದು ಜಸ್ಟೀಸ್ ಕೌಲ್ ಮತ್ತು ಒಕಾ ಅವರಿದ್ದ ಪೀಠ ಹೇಳಿದೆ.
ಮತ್ತೊಂದು ಪ್ರಕರಣ
ತಲಾಖ್-ಇ-ಹಸನ್ ಪ್ರಶ್ನಿಸಿ ನಝ್ರೀನ್ ನಿಶಾ ಖಾದಿರ್ ಶೇಖ್ ಕೂಡ ಸುಪ್ರಿಂ ಕೋರ್ಟ್ ಮೊರೆ ಹೋಗಿದ್ದಾರೆ. ಹೀನಾ ಅವರಂಥ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ ಎಂದು ಅವರ ಪರವಾಗಿ ವಾದ ಮಂಡಿಸುತ್ತಿರುವ ರಂಜಿತ್ ಕುಮಾರ್ ತಿಳಿಸಿದ್ದಾರೆ. ನಝ್ರೀನ್ ಅವರಿಗೆ ಯಾವುದೇ ಜೀವನಾಂಶವನ್ನು ನೀಡದೇ ಗಂಡ ವಿಚ್ಛೇದನ ನೀಡಿದ್ದಾನೆ.
ಏನಿದು ತಲಾಖ್-ಇ-ಹಸನ್?
ಇಸ್ಲಾಮ್ ವಿವಾಹ ಪದ್ಧತಿಯಲ್ಲಿ ಪಾಲಿಸಿಕೊಂಡು ಬರಲಾಗುತ್ತಿರುವ ಮತ್ತೊಂದು ರೀತಿಯ ವಿವಾಹ ವಿಚ್ಛೇದನ ಪದ್ಧತಿ. ಈ ತಲಾಖ್-ಇ-ಹಸನ್ ಪದ್ಧತಿಯಲ್ಲಿ ಗಂಡ, ಮೂರು ತಿಂಗಳಲ್ಲಿ ತಲಾಖ್ ಹೇಳುವ ಮೂಲಕ ಪತ್ನಿಗೆ ವಿಚ್ಛೇದನ ನೀಡಬಹುದು. ಈ ಪದ್ಧತಿಯನ್ನು ತಲಾಖ್-ಎ-ಹಸನ್ ಎಂದು ಕರೆಯಲಾಗುತ್ತದೆ. ಈ ನಡುವೆ ದೊರೆಯುವ ಅವಧಿಯಲ್ಲಿ ದಂಪತಿಗಳು ಒಟ್ಟಿಗೆ ವಾಸಿಸದಿದ್ದರೆ, ಮೂರನೇ ತಿಂಗಳಲ್ಲಿ ಮೂರನೇ ಹೇಳಿಕೆಯ ನಂತರ ವಿಚ್ಛೇದನವನ್ನು ಔಪಚಾರಿಕಗೊಳಿಸಲಾಗುತ್ತದೆ. ಇಲ್ಲಿ ‘ಖುಲಾ’ ಆಯ್ಕೆ ಮೂಲಕ ಮಹಿಳೆಯರೂ ಗಂಡನಿಂದ ವಿಚ್ಛೇದನ ಪಡೆಯಲು ಅವಕಾಶವಿದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
ತಲಾಖ್ ಪ್ರಶ್ನಿಸಿದ್ದು ಯಾರು?
ಉತ್ತರ ಪ್ರದೇಶದ ಪತ್ರಕರ್ತೆ ಬೆನಜಿರ್ ಹೀನಾ ಮತ್ತು ನಝ್ರೀನ್ ನಿಶಾ ಖಾದಿರ್ ಶೇಖ್. ಇವರಿಬ್ಬರು ತಲಾಖ್-ಇ-ಹಸನ್ ಪದ್ಧತಿಯಲ್ಲೂ ಹೆಣ್ಣಮಕ್ಕಳಿಗೆ ಶೋಷಣೆಯಾಗುತ್ತಿದೆ. ಈ ಪದ್ಧತಿಯನ್ನೂ ನಿಷೇಧಿಸುವಂತೆ ಅರ್ಜಿದಾರರು ಸುಪ್ರೀಂ ಕೋರ್ಟ್‌ಗೆ ಕೇಳಿಕೊಂಡಿದ್ದಾರೆ. ಜತೆಗೆ ತಾವೂ ಈ ಪದ್ಧತಿಯ ಬಲಿಪಶುಗಳಾಗಿದ್ದು, ನ್ಯಾಯವನ್ನು ಒದಗಿಸುವಂತೆ ಕೇಳಿಕೊಂಡಿದ್ದಾರೆ.
ಏನು ವ್ಯತ್ಯಾಸ?
ತಲಾಖ್-ಇ-ಬಿದ್ಧತ್(ತ್ರಿವಳಿ ತಲಾಖ್) ಪದ್ಧತಿಯಲ್ಲಿ ಗಂಡ, ತಕ್ಷಣಕ್ಕೆ ಮೂರು ಬಾರಿ ತಲಾಖ್, ತಲಾಖ್ ಮತ್ತು ತಲಾಖ್ ಎಂದು ಹೇಳಿದರೆ, ಮದುವೆ ರದ್ದಾಗುತ್ತಿತ್ತು. ಈ ಪದ್ಧತಿಯನ್ನು ಸುಪ್ರೀಂ ಕೋರ್ಟ್ 2019ರಲ್ಲಿ ರದ್ದು ಮಾಡಿದೆ. ಆದರೆ, ತಲಾಖ್-ಇ-ಹಸನ್ ಪದ್ಧತಿಯಲ್ಲಿ, ಗಂಡ ಮೂರು ತಿಂಗಳ ಕಾಲ ತಿಂಗಳಿಗೊಮ್ಮೆ ತಲಾಖ್ ಎಂದು ಹೇಳುತ್ತಾನೆ. ಈ ಅವಧಿಯಲ್ಲಿ ದಂಪತಿಗಳು ಪರಸ್ಪರ ಮನಸ್ತಾಪ ಮರೆತು ಒಂದಾಗಿ ಹೋಗಬಹುದು. ಒಂದೊಮ್ಮೆ ಸಾಧ್ಯವಾಗದಿದ್ದರೆ ಮೂರನೇ ತಿಂಗಳಿಗೆ ತಲಾಖ್ ಹೇಳಿದರೆ, ಮದುವೆ ರದ್ದಾಗುತ್ತದೆ. ಆದರೆ, ಮೆಹರ್ ಕೊಡಬೇಕಾಗುತ್ತದೆ.
ಸುಪ್ರೀಂ ಕೋರ್ಟ್ ಅಭಿಪ್ರಾಯವೇನು?
ತಲಾಖ್-ಇ-ಹಸನ್ ಪದ್ಧತಿ ರದ್ದಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್, ಆಗಸ್ಟ್ 17ರಂದು ತನ್ನ ಅಭಿಪ್ರಾಯ ವ್ಯಕ್ತಪಡಿಸಿ, ದೇಶದಲ್ಲಿ ಮತ್ತೊಂದು ಕಾರ್ಯಸೂಚಿಯಾಗಿ ಈ ವಿಚಾರವನ್ನು ಬೆಳೆಸುವುದು ಬೇಡ ಎಂದು ಅಭಿಪ್ರಾಯಪಟ್ಟಿತ್ತು. ಆದರೆ, ಈಗ ತಲಾಖ್-ಇ-ಹಸನ್ ಪದ್ಧತಿಯಲ್ಲಿ ಸರಿಯಾದ ಪ್ರಕ್ರಿಯೆಗಳನ್ನು ಪಾಲಿಸುವ ಬಗ್ಗೆ ಪರೀಕ್ಷಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಇದನ್ನೂ ಓದಿ | ತಲಾಖ್ ಹೆಸರಲ್ಲಿ ಶೋಷಣೆ: ಮೋದಿಗೆ ದೂರು ನೀಡುತ್ತಾ ಲೈವ್‌ನಲ್ಲೇ ಆತ್ಮಹತ್ಯೆಗೆ ಯತ್ನಿಸಿದ ಮಾಜಿ ಉಪಮೇಯರ್