ಒಸಾಮಾ ಬಿನ್ ಲಾಡೆನ್‌ನಂಥ ಅಂತಾರಾಷ್ಟ್ರೀಯ ಭಯೋತ್ಪಾದಕರಿಗೆ ಆಶ್ರಯ ನೀಡಿದ್ದ, ಸಂಸತ್ತಿನ ಮೇಲೆ ದಾಳಿ ನಡೆಸಿದ ಉಗ್ರರ ಅಡಗುತಾಣವಾಗಿದ್ದ ದೇಶಕ್ಕೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಕಾಶ್ಮೀರ ವಿವಾದವನ್ನು ಪ್ರಸ್ತಾಪಿಸುವ ಯಾವುದೇ ಯೋಗ್ಯತೆ ಇಲ್ಲ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆಯಲ್ಲಿ ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆ ಕುರಿತ ಸಂವಾದದಲ್ಲಿ ಅಧ್ಯಕ್ಷತೆ ವಹಿಸಿ ಅವರು ಇದನ್ನು ಹೇಳಿದ್ದಾರೆ. ಮುಂಬಯಿ ಮೇಲೆ 26/11ರ ಉಗ್ರ ದಾಳಿಯ ಭಯೋತ್ಪಾದಕರಿಗೆ, ಸಂಚುಕೋರರಿಗೆ ಈಗಲೂ ಆಶ್ರಯ ನೀಡಲಾಗುತ್ತಿದೆ. ಅವರಿಗೆ ಇನ್ನೂ ಶಿಕ್ಷೆಯಾಗಿಲ್ಲ. ಆದ್ದರಿಂದ ನಾನಾ ಸ್ತರಗಳಲ್ಲಿ ಭಯೋತ್ಪಾದಕರಿಗೆ ಕುಮ್ಮಕ್ಕು, ಆಶ್ರಯ ನೀಡುತ್ತಿರುವುದನ್ನು ನಿಲ್ಲಿಸಲು ಹಾಗೂ ನಾನಾ ವೇದಿಕೆಗಳ ದುರ್ಬಳಕೆಯನ್ನು ತಡೆಯಲು ವಿಶ್ವ ಸಮುದಾಯ ಸಂಘಟಿತ ಉಪಕ್ರಮಗಳನ್ನು ಕೈಗೊಳ್ಳಬೇಕು ಎಂದೂ ಅವರು ಅಂತಾರಾಷ್ಟ್ರೀಯ ಸಮುದಾಯಕ್ಕೆ ಸೂಚಿಸಿದ್ದಾರೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕಾಯಂ ಸದಸ್ಯತ್ವವನ್ನು ವಿಸ್ತರಿಸಬಾರದು ಎಂಬ ಪಾಕ್ ವಾದದ ಹಿನ್ನೆಲೆಯಲ್ಲಿ ಈ ಮಾತುಗಳು ಬಂದಿವೆ. ಭದ್ರತಾ ಮಂಡಳಿ ಸದಸ್ಯತ್ವ ವಿಸ್ತರಿಸಬಾರದು ಎಂಬ ಮಾತಿನ ಒಳಾರ್ಥ, ಭಾರತಕ್ಕೆ ಅದು ಸಿಗಬಾರದು ಎಂಬುದೇ ಆಗಿದೆ. ಭಯೋತ್ಪಾದನೆಯಲ್ಲಿ ಪಾಕ್‌ಗೆ ಸಹಾಯಕನಾದ ಚೀನಾ ಕೂಡ ಭಾರತ ಭದ್ರತಾ ಮಂಡಳಿಯ ಸದಸ್ಯನಾಗುವುದನ್ನು ತಡೆಯುತ್ತ ಬಂದಿದೆ. ವಿಶ್ವಸಂಸ್ಥೆಯಲ್ಲಿ 15 ರಾಷ್ಟ್ರಗಳ ಮಂಡಳಿಯ ಅಧ್ಯಕ್ಷತೆಯನ್ನು ಪ್ರಸ್ತುತ ಭಾರತ ವಹಿಸಿದ್ದರೂ ಭದ್ರತಾ ಮಂಡಳಿಯ ಕಾಯಂ ಸದಸ್ಯತ್ವ ಇದುವರೆಗೆ ಸಿಕ್ಕಿಲ್ಲ. ಕಾಶ್ಮೀರ ವಿವಾದವನ್ನು ಮಾತುಕತೆಯ ಮೂಲಕ ಇತ್ಯರ್ಥಪಡಿಸಲು ಪಾಕಿಸ್ತಾನ ಬಯಸುತ್ತದೆ ಎಂದು ಪಾಕ್ ವಿದೇಶಾಂಗ ಸಚಿವರು ಹೇಳಿರುವುದು ವಿಶ್ವಸಂಸ್ಥೆಯ ವೇದಿಕೆಗೆ ಕಾಶ್ಮೀರ ವಿಚಾರವನ್ನು ಮತ್ತೆ ಎಳೆದು ತರಲು ಅವರು ನಡೆಸಿರುವ ವ್ಯರ್ಥ ಪ್ರಯತ್ನ. ಕಾಶ್ಮೀರ ಭಾರತದ ಅವಿಭಾಜ್ಯ ಅಂಗ, ಈ ವಿಚಾರದಲ್ಲಿ ಏನೇ ವಿವಾದವಿದ್ದರೂ ನಾವೇ ಪರಿಹರಿಸಿಕೊಳ್ಳುತ್ತೇವೆ ಎಂದು ಭಾರತ ಪದೇ ಪದೆ ಸ್ಪಷ್ಟಪಡಿಸಿದೆ. ಆದರೂ ಕಾಶ್ಮೀರ ವಿಚಾರದಲ್ಲಿ ಮತ್ತೆ ಮತ್ತೆ ವಿವಾದ ಸೃಷ್ಟಿಸಲು ಬಯಸುವುದು ಪಾಕಿಸ್ತಾನದ ಚಾಳಿ. ಇದಕ್ಕೆ ತಕ್ಕ ಉತ್ತರವನ್ನೂ ಭಾರತ ಕೊಡುತ್ತ ಬಂದಿದೆ.
ಕಾಶ್ಮೀರದಲ್ಲಿದ್ದ ಆರ್ಟಿಕಲ್ 370 ಅನ್ನು ರದ್ದುಪಡಿಸಿದಾಗ, ಅತಿ ಘೋರ ತಪ್ಪು ನಡೆಯಿತೆಂಬಂತೆ ಪಾಕ್ ಬೊಬ್ಬೆ ಹಾಕಿತು. ಅಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಯಿತು ಎಂದು ದೂರಿತು. ಚೀನಾ ಕೂಡ ಈ ವಿಚಾರದಲ್ಲಿ ಮೂಗು ತೂರಿಸಲು ಬಂದಿತು. ಆದರೆ ವಿಶ್ವಸಂಸ್ಥೆಯಲ್ಲಿ ಭಾರತ ತನ್ನ ನಿಲುಮೆಯನ್ನು ದೃಢವಾಗಿ ಪ್ರದರ್ಶಿಸಿದ್ದಲ್ಲದೆ, ಕಾಶ್ಮೀರದ ಬಗ್ಗೆ ಬೇರೆ ಯಾರೂ ಮಾತನಾಡುವ ಅಗತ್ಯವಿಲ್ಲ ಎಂದು ಪ್ರತಿಪಾದಿಸಿತು. ಅನೇಕ ಸಂದರ್ಭಗಳಲ್ಲಿ ಪಾಕಿಸ್ತಾನ ಹಾಗೂ ಚೀನಾದ ಕುಟಿಲತೆ, ದ್ವಿಮುಖ ನೀತಿ, ಇತ್ಯಾದಿಗಳನ್ನೂ ವಿಶ್ವಸಂಸ್ಥೆಯಲ್ಲಿ ಭಾರತ ಬಯಲು ಮಾಡುತ್ತ ಬಂದಿದೆ. ಮುಂಬಯಿಯಲ್ಲಿ ನಡೆದ ಉಗ್ರ ದಾಳಿ, ಪುಲ್ವಾಮಾದಲ್ಲಿ ಯೋಧರ ಮೇಲೆ ನಡೆದ ಸ್ಫೋಟಕ ದಾಳಿಗಳಿಗೆ ಸಂಬಂಧಿಸಿದಂತೆ ಪಾಕಿಸ್ತಾನದ ಕೈವಾಡ ಇರುವುದನ್ನು ಭಾರತ ದಾಖಲೆಗಳ ಮೂಲಕವೇ ಸಾಬೀತುಪಡಿಸಿದೆ. ಒಂದು ಹಂತದಲ್ಲಿ ಕೇಂದ್ರ ಸರ್ಕಾರವನ್ನು ಟೀಕಿಸಲೆಂದೇ ಸೃಷ್ಟಿಯಾದ ಅಂತಾರಾಷ್ಟ್ರೀಯ ನಿಯೋಗದ ಭೇಟಿಯನ್ನೂ ಕಾಶ್ಮೀರಕ್ಕೆ ಏರ್ಪಡಿಸಲಾಯಿತು. ಆದರೆ ಯಾವುದರಿಂದಲೂ ಸತ್ಯವನ್ನು ಮುಚ್ಚಿಡಲು ಹಾಗೂ ತಾನು ಹೇಳುತ್ತಿರುವ ಸುಳ್ಳಿಗೆ ಗಿರಾಕಿಗಳನ್ನು ಸೃಷ್ಟಿಸಲು ಪಾಕಿಸ್ತಾನದಿಂದ ಸಾಧ್ಯವಾಗಲಿಲ್ಲ. ಇಂದಿಗೂ ಕಾಶ್ಮೀರದಲ್ಲಿ ಅಸ್ಥಿರತೆ ಸೃಷ್ಟಿಸಲು ಪಾಕ್ ಯತ್ನಿಸುತ್ತಲೇ ಇದೆ ಎಂಬುದಕ್ಕೆ ಇತ್ತೀಚೆಗೆ ಪಾಶ್ಮೀರಿ ಪಂಡಿತರ ಮೇಲೆ ಮತ್ತೆ ಹೆಚ್ಚುತ್ತಿರುವ ದಾಳಿಗಳು ಸಾಕ್ಷಿ. ಇದರೊಂದಿಗೆ ಪಂಜಾಬ್‌ನಲ್ಲಿ ನಡೆಯುತ್ತಿರುವ ಖಲಿಸ್ತಾನ ಭಯೋತ್ಪಾದನೆಗೆ ಕುಮ್ಮಕ್ಕು, ಪಂಜಾಬನ್ನು ಮಾದಕ ದ್ರವ್ಯಗಳ ಆಡುಂಬೊಲವಾಗಿಸುವಲ್ಲಿ ದೊಡ್ಡ ಕೊಡುಗೆಯನ್ನೂ ಪಾಕಿಸ್ತಾನ ನೀಡಿರುವುದೂ ಬಯಲಾಗುತ್ತಲೇ ಇದೆ.
ಇದೆಲ್ಲವನ್ನೂ ಅಂತಾರಾಷ್ಟ್ರೀಯ ಸಮುದಾಯದ ಮುಂದಿಟ್ಟು ಪಾಕಿಸ್ತಾನವನ್ನು ಮತ್ತೆ ಬೆತ್ತಲು ಮಾಡುವುದು ನಮ್ಮಿಂದ ಸಾಧ್ಯವಾಗಬೇಕು. ಸಮರ್ಥ ನಾಯಕತ್ವ ನಮ್ಮದಾಗಿರುವುದರಿಂದ ಇದು ಸಾಧ್ಯವಾಗುತ್ತಿದೆ ಕೂಡ. ಭಯೋತ್ಪಾದನೆಯ ವಿರುದ್ಧ ನಾವು ಅತ್ಯುತ್ತಮವಾದ ತಂತ್ರಗಳನ್ನು ಸಂಘಟಿತವಾಗಿ ಕೈಗೊಳ್ಳುವ ಕಾಲ ಸನ್ನಿಹಿತವಾಗಿದೆ ಎಂದು ವಿದೇಶಾಂಗ ಸಚಿವರು ಹೇಳಿರುವಲ್ಲಿ ಅಂತಾರಾಷ್ಟ್ರೀಯ ಸಮುದಾಯದ ಬೆಂಬಲವನ್ನೂ ಪಡೆಯುವ ಕಾರ್ಯತಂತ್ರವೂ ಇದೆ.
ಇದನ್ನೂ ಓದಿ | ವಿಸ್ತಾರ ಸಂಪಾದಕೀಯ l ನಮ್ಮ ಕ್ಲಿನಿಕ್; ಆರೋಗ್ಯ ಕ್ಷೇತ್ರದ ಸುಧಾರಣೆಯತ್ತ ಮಹತ್ವದ ಹೆಜ್ಜೆ