ನವದೆಹಲಿ: ಸಾಮಾಜಿಕ ಜಾಲತಾಣವು ಸಕಲ ಮಾಹಿತಿಯ ಕಣಜ ಆಗಿದೆ. ಎಲ್ಲರಿಗೂ ಈಗ ಸಾಮಾಜಿಕ ಜಾಲತಾಣಗಳು ಅವಿಭಾಜ್ಯವಾಗಿವೆ. ಸಮಾಜದ ಮೇಲೆ, ಸರ್ಕಾರದ ಮೇಲೆ ಪರಿಣಾಮ ಬೀರುವಷ್ಟು ಸಾಮಾಜಿಕ ಜಾಲತಾಣಗಳು ಪ್ರಬಲವಾಗಿವೆ. ಹಾಗೆಯೇ, ನಕಲಿ ಸುದ್ದಿಗಳ ಹರಡುವಿಕೆಯ ಫ್ಯಾಕ್ಟರಿಗಳಾಗಿಯೂ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳಲಾಗುತ್ತಿದೆ. ಇದಕ್ಕೆ ನಿದರ್ಶನ ಎಂಬಂತೆ, ಸೌದಿ ಅರೇಬಿಯಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಚಿನ್ನದ ಪುತ್ಥಳಿಯನ್ನು (Narendra Modi Gold Bust) ಕೆತ್ತಲಾಗಿದೆ ಎಂಬ ಸುದ್ದಿ ಹರಡಿದೆ. ಆದರೆ ಈ ಸುದ್ದಿ ವಾಸ್ತವಕ್ಕೆ ಹತ್ತಿರವಾಗಿಲ್ಲ ಎಂಬುದು ಮಹತ್ವದ (Fact Check) ಸಂಗತಿಯಾಗಿದೆ.
ಏನಿದು ವದಂತಿ?
ಸೌದಿ ಅರೇಬಿಯಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಚಿನ್ನದ ಮೂರ್ತಿಯನ್ನು ಕೆತ್ತಲಾಗಿದೆ. ಇದು 156 ಗ್ರಾಂ ಇದೆ ಎಂಬ ಫೋಟೊ ಹಾಗೂ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡಲಾಗಿದೆ. ಕೆಲ ದಿನಗಳ ಹಿಂದಷ್ಟೇ ಸೌದಿ ಅರೇಬಿಯಾ ರಾಜ ಮೊಹಮ್ಮದ್ ಬಿನ್ ಸಲ್ಮಾನ್ ಅವರು ದೆಹಲಿಯಲ್ಲಿ ನಡೆದ ಜಿ 20 ಶೃಂಗಸಭೆಗೆ ಬಂದು, ದ್ವಿಪಕ್ಷೀಯ ಮಾತುಕತೆ ನಡೆಸಿದ್ದರು. ಇದರ ಬೆನ್ನಲ್ಲೇ, ಭಾರತ ಹಾಗೂ ಸೌದಿ ಅರೇಬಿಯಾ ಸಂಬಂಧದ ಪ್ರತೀಕವಾಗಿ ಮೋದಿ ಚಿನ್ನದ ಪುತ್ಥಳಿ ಕೆತ್ತಲಾಗಿದೆ ಎಂಬ ವದಂತಿ ಹರಡಿಸಲಾಗಿದೆ.
When some people get wax statues, Saudi Arabia has a bust of Gold for our PM Shri @narendramodi pic.twitter.com/FBGetUBu4q
— Mahesh Bhatt (@MaheshBhatt2016) September 13, 2023
ವಾಸ್ತವ ಏನು?
ಸೂರತ್: 2022ರ ಡಿಸೆಂಬರ್ನಲ್ಲಿ ನಡೆದಿದ್ದ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದ್ದಕ್ಕೆ ಫುಲ್ ಖುಷಿಯಾದ ಸೂರತ್ನ ಆಭರಣ ವ್ಯಾಪಾರಿಯೊಬ್ಬರು, 18 ಕ್ಯಾರೆಟ್ ಚಿನ್ನದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಪುತ್ಥಳಿಯನ್ನು ಕೆತ್ತನೆ ಮಾಡಿಸಿದ್ದಾರೆ. ಆದರೆ ಈ ವಿಡಿಯೊವನ್ನು ಸೌದಿ ಅರೇಬಿಯಾದಲ್ಲಿ ಮೋದಿ ಚಿನ್ನದ ಮೂರ್ತಿಯನ್ನು ಕೆತ್ತಲಾಗಿದೆ ಎಂದು ಸುಳ್ಳು ಹರಡಿಸಲಾಗಿದೆ ಎಂದು ಹಲವು ಮಾಧ್ಯಮ ಸಂಸ್ಥೆಗಳು ನಡೆಸಿದ ಫ್ಯಾಕ್ಟ್‌ಚೆಕ್‌ನಲ್ಲಿ ಗೊತ್ತಾಗಿದೆ.
8 ತಿಂಗಳ ಹಿಂದಿನ ವಿಡಿಯೊ
ಇದನ್ನೂ ಓದಿ: Fact Check: ಜಿ20 ಸಭೆಗೂ ಮುನ್ನ ಮೋದಿಯ ಬೃಹತ್ ಕಟೌಟ್ ಫೋಟೊ ವೈರಲ್; ಈ ಸುದ್ದಿ ನಿಜವೇ?
ಸೂರತ್ನ ಚಿನ್ನಾಭರಣ ಉದ್ಯಮಿಯಾದ, ರಾಧಿಕಾ ಚೈನ್ಸ್ನ ಮಾಲೀಕ ಬಸಂತ್ ಬೋಹ್ರಾ ಎಂಬುವರು ಈಗ ಪ್ರಧಾನಿ ನರೇಂದ್ರ ಮೋದಿಯವರ ಚಿನ್ನದ ಪ್ರತಿಮೆ ಕೆತ್ತನೆ ಮಾಡಿಸಿ ಸುದ್ದಿಯಾಗಿದ್ದರು. ಗುಜರಾತ್ನ 182 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ 156 ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಅತಿದೊಡ್ಡ ಮಟ್ಟದ ಗೆಲವು ಸಾಧಿಸಿದೆ. ಹಾಗಾಗಿ ಈ ಪ್ರತಿಮೆಯನ್ನು ಕೂಡ 156 ಗ್ರಾಂಗಳಷ್ಟು ಚಿನ್ನದಲ್ಲಿಯೇ ನಿರ್ಮಿಸಲಾಗಿದೆ.