Site icon Vistara News

Fact Check: ಕೆನಡಾ ಆರೋಪದ ಬಳಿಕ ರಾಷ್ಟ್ರಪತಿ ಭವನದ ಸಿಖ್‌ ಭದ್ರತಾ ಸಿಬ್ಬಂದಿಗೆ ಕೊಕ್?‌

Fact Check

Fact Check: Rashtrapati Bhavan Did Not remove Sikh guards, baseless claims viral

ನವದೆಹಲಿ: ಕೆನಡಾದಲ್ಲಿ ಖಲಿಸ್ತಾನಿಗಳ ನಾಯಕ ಹರ್ದೀಪ್‌ ಸಿಂಗ್‌ ನಿಜ್ಜರ್‌ನನ್ನು (Hardeep Singh Nijjar) ಹತ್ಯೆ ಮಾಡಿದ್ದರ ಹಿಂದೆ ಭಾರತ ಸರ್ಕಾರದ ಕೈವಾಡವಿದೆ ಎಂದು ಪ್ರಧಾನಿ ಜಸ್ಟಿನ್‌ ಟ್ರುಡೋ (Justin Trudeau) ಆರೋಪಿಸಿದ ಬಳಿಕ ಭಾರತದಲ್ಲಿ ಸಿಖ್‌ ಸಮುದಾಯದವರ ಕುರಿತು ವದಂತಿ ಹರಡಿಸಲಾಗುತ್ತಿದೆ. ಸಿಖ್‌ ಸಮುದಾಯದವರ ಮೇಲೆ ಕೇಂದ್ರ ಸರ್ಕಾರ ದೌರ್ಜನ್ಯ ಎಸಗುತ್ತಿದೆ ಎಂಬೆಲ್ಲ ಆರೋಪಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಮಾಡಲಾಗುತ್ತಿದೆ. ಆದರೆ, ಪಿಐಬಿ ಫ್ಯಾಕ್ಟ್‌ಚೆಕ್‌ ಘಟಕವು (Fact Check) ಎಲ್ಲ ಆರೋಪಗಳನ್ನು ತಿರಸ್ಕರಿಸಿದೆ. ಸೇನೆಯೂ ವದಂತಿಗಳನ್ನು ಅಲ್ಲಗಳೆದಿದೆ.

ಏನಿದು ವದಂತಿ?

ಹರ್ದೀಪ್‌ ಸಿಂಗ್‌ ನಿಜ್ಜರ್‌ ಕೊಲೆಯ ಕೈವಾಡದ ಕುರಿತು ಜಸ್ಟಿನ್‌ ಟ್ರುಡೋ ಆರೋಪಿಸುತ್ತಲೇ ಭಾರತದಲ್ಲಿ ಸಿಖ್ಖರ ಮೇಲೆ ದೌರ್ಜನ್ಯ ಎಸಗಲಾಗುತ್ತಿದೆ. ರಾಷ್ಟ್ರಪತಿ ಭವನ ಹಾಗೂ ರಾಷ್ಟ್ರಪತಿಯವರ ಅಧಿಕೃತ ನಿವಾಸದಿಂದ ಸಿಖ್‌ ಸಮುದಾಯದ ಸಿಬ್ಬಂದಿಯನ್ನು ತೆಗೆಯಲಾಗಿದೆ. ಅವರನ್ನು ಬೇರೆಡೆ ನಿಯೋಜಿಸಲಾಗಿದೆ. ಅಷ್ಟೇ ಅಲ್ಲ, ಭಾರತೀಯ ಸೇನೆಯಲ್ಲಿರುವ ಸಿಖ್‌ ಸಮುದಾಯದವರಿಗೆ ರಜೆಗಳನ್ನು ನೀಡುತ್ತಿಲ್ಲ. ಅವರ ರಜೆಯನ್ನು ರದ್ದುಗೊಳಿಸಲಾಗಿದೆ. ಇಂದಿರಾ ಗಾಂಧಿ ಅವರನ್ನು ಹತ್ಯೆಗೈದಂತೆ ನನ್ನನ್ನೂ ಹತ್ಯೆ ಮಾಡಲಾಗುತ್ತದೆ ಎಂಬ ಭಯ ಮೋದಿ ಅವರನ್ನು ಕಾಡುತ್ತಿದೆ ಎಂದೆಲ್ಲ ಸಾಮಾಜಿಕ ಜಾಲತಾಣಗಳಲ್ಲಿ ವದಂತಿ ಹರಡಿಸಲಾಗಿದೆ. ಕೆಲವರು ಪಾಕಿಸ್ತಾನದಿಂದ ಇಂತಹ ವದಂತಿ ಹರಡಿಸಲಾಗಿದೆ ಎಂದು ತಿಳಿದುಬಂದಿದೆ.

ವಾಸ್ತವಾಂಶ ಏನು?

ನಕಲಿ ಸುದ್ದಿಗಳನ್ನು ಪರಿಶೀಲಿಸಿ, ವಾಸ್ತವವನ್ನು ಜನರಿಗೆ ತಿಳಿಸುವ ಪಿಐಬಿ ಫ್ಯಾಕ್ಟ್‌ಚೆಕ್‌ ಘಟಕವು ಈ ವದಂತಿಗಳನ್ನು ಅಲ್ಲಗಳೆದಿದೆ. “ರಾಷ್ಟ್ರಪತಿ ಭವನದಿಂದ ಸಿಖ್‌ ಭದ್ರತಾ ಸಿಬ್ಬಂದಿಯನ್ನು ತೆರವುಗೊಳಿಸಲಾಗಿದೆ ಹಾಗೂ ಸೇನೆಯಲ್ಲಿರುವ ಸಿಖ್‌ ಯೋಧರಿಗೆ ರಜೆಗಳನ್ನು ನೀಡುತ್ತಿಲ್ಲ ಎಂಬ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪಸರಿಸಿರುವ ಮಾಹಿತಿಯು ಸತ್ಯಕ್ಕೆ ದೂರವಾಗಿದೆ. ಇಂತಹ ಯಾವುದೇ ಆದೇಶ ಹೊರಡಿಸಿಲ್ಲ” ಎಂದು ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆ ನೀಡಿದೆ.

ಇದನ್ನೂ ಓದಿ: India Canada Row: ಮಣಿಪುರ, ಕಾಶ್ಮೀರಕ್ಕೆ ಹೋಗದಿರಿ; ಕೆನಡಾ ಮತ್ತೊಂದು ಉದ್ಧಟತನ

ಭಾರತೀಯ ಸೇನೆಯೂ ಇಂತಹ ವದಂತಿಗಳ ಕುರಿತು ಸ್ಪಷ್ಟನೆ ನೀಡಿದೆ. “ಭಾರತೀಯ ಸೇನೆಯ ಕುರಿತ ಯಾವುದೇ ನಕಲಿ ಮಾಹಿತಿಯನ್ನು, ದ್ವೇಷ ಹರಡುವ ಪೋಸ್ಟ್‌ಗಳನ್ನು ನಂಬದಿರಿ” ಎಂದು ಆರೋಪಗಳನ್ನು ಅಲ್ಲಗಳೆದಿದೆ. ಕೆನಡಾದಲ್ಲಿರುವ ಭಾರತೀಯರ ರಕ್ಷಣೆ ಮಾಡಬೇಕು ಹಾಗೂ ಭಾರತ ವಿರೋಧಿ ಚಟುವಟಿಕೆಗಳನ್ನು ನಿಗ್ರಹಿಸಬೇಕು ಎಂದು ನರೇಂದ್ರ ಮೋದಿ ಅವರು ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೋ ಅವರಿಗೆ ಸೂಚಿಸಿದ ಬಳಿಕ ಎರಡೂ ದೇಶಗಳ ಸಂಬಂಧದ ಮಧ್ಯೆ ಬಿರುಕು ಬಿಟ್ಟಿದೆ. ಇದು ಈಗ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಸುದ್ದಿ ಹರಡಿಸುವ, ಭಾರತದ ವಿರುದ್ಧ ಷಡ್ಯಂತ್ರ ಮಾಡುವತನಕ ಮುಂದುವರಿದಿದೆ.

Exit mobile version