ಮುಂಬಯಿ: ಮಹಾರಾಷ್ಟ್ರ ರಾಜ್ಯ ಸರ್ಕಾರದ ಉದ್ಯೋಗಿಗಳ ವೇತನ ಮತ್ತು ಪಿಂಚಣಿಗಳನ್ನು ನಿರ್ವಹಿಸಲು ಕರ್ಣಾಟಕ ಬ್ಯಾಂಕ್‌ಗೆ ಗುತ್ತಿಗೆ ನೀಡಿರುವುದಕ್ಕೆ ಸಂಬಂಧಿಸಿ ಹಣಕಾಸು ಸಚಿವರೂ ಆಗಿರುವ ದೇವೇಂದ್ರ ಫಡ್ನವಿಸ್ ಮತ್ತು ಎನ್‌ಸಿಪಿ ನಾಯಕ ಅಜಿತ್ ಪವಾರ್ ನಡುವೆ ವಾಕ್ಸಮರ ನಡೆದಿದೆ.
ಕರ್ನಾಟಕದ ಜತೆಗೆ ಗಡಿ ವಿವಾದ ನಡೆಯುತ್ತಿರುವ ಸಂದರ್ಭದಲ್ಲಿ, ರಾಜ್ಯ ಸರ್ಕಾರಿ ಉದ್ಯೋಗಿಗಳ ವೇತನ, ಪಿಂಚಣಿ ಬಿಡುಗಡೆ ಮಾಡುವ ಕೆಲಸವನ್ನು ಕರ್ಣಾಟಕ ಬ್ಯಾಂಕ್‌ಗೆ ವಹಿಸಿರುವುದು ದುರದೃಷ್ಟಕರ ಎಂದು ಶಿಂಧೆ-ಫಡ್ನವಿಸ್ ಸರ್ಕಾರವನ್ನು ಎನ್‌ಸಿಪಿ ಟೀಕಿಸಿದೆ. ಆದರೆ ಈ ನಿರ್ಧಾರವನ್ನು ಅಜಿತ್ ಪವಾರ್ ಅವರು ಹಣಕಾಸು ಸಚಿವರಾಗಿದ್ದಾಗಲೇ ಕೈಗೊಳ್ಳಲಾಗಿತ್ತು ಎಂದು ಫಡ್ನವಿಸ್ ತಿರುಗೇಟು ನೀಡಿದ್ದಾರೆ.
ಮಹಾರಾಷ್ಟ್ರ ರಾಜ್ಯ ಸರ್ಕಾರ ಬುಧವಾರ ಹೊರಡಿಸಿದ ಹೇಳಿಕೆಯಲ್ಲಿ, ಖಾಸಗಿ ವಲಯದ ಮೂರು ಬ್ಯಾಂಕ್‌ಗಳಿಗೆ ಸರ್ಕಾರಿ ಸಿಬ್ಬಂದಿಯ ವೇತನ, ಪಿಂಚಣಿ ನಿರ್ವಹಣೆಯ ಗುತ್ತಿಗೆ ವಹಿಸಲಾಗಿದೆ ಎಂದು ತಿಳಿಸಿತ್ತು. ಕರ್ಣಾಟಕ ಬ್ಯಾಂಕ್, ಜಮ್ಮು ಕಾಶ್ಮೀರ್ ಬ್ಯಾಂಕ್ ಮತ್ತು ಉತ್ಕರ್ಷ್ ಸ್ಮಾಲ್ ಫೈನಾನ್ಸ್ ಬ್ಯಾಂಕ್‌ಗೆ ವಹಿಸಲಾಗಿತ್ತು.
ಈ ನಿರ್ಧಾರವನ್ನು 2021ರ ಡಿಸೆಂಬರ್‌ನಲ್ಲಿಯೇ ಕೈಗೊಳ್ಳಲಾಗಿತ್ತು. ಆಗ ನಾವೆಲ್ಲಿ ಅಧಿಕಾರದಲ್ಲಿ ಇದ್ದೆವು? ಹೀಗಾಗಿ ನಮ್ಮನ್ನು ದ್ವೇಷಿಸುತ್ತಿರುವುದೇಕೆ? ಹೆಸರು ಕರ್ಣಾಟಕ ಇದೆ ಎಂದ ಮಾತ್ರಕ್ಕೆ ಬ್ಯಾಂಕ್ ಅನ್ನು ಕಡೆಗಣಿಸುವುದು ಸಮಂಜಸವಲ್ಲ ಎಂದು ಫಡ್ನವಿಸ್ ಹೇಳಿದ್ದಾರೆ.
ಈ ಮೂರು ಬ್ಯಾಂಕ್‌ಗಳು ನಮ್ಮನ್ನು ಸಂಪರ್ಕಿಸಿದ್ದು ನಿಜ. ಆದರೆ ತಾಂತ್ರಿಕ ಕಾರಣಗಳಿಂದ ಅದನ್ನು ತಿರಸ್ಕರಿಸಲಾಗಿತ್ತು. ಫಡ್ನವಿಸ್ ಏಕೆ ಸುಳ್ಳು ಹೇಳುತ್ತಿದ್ದಾರೆ ಎಂದು ಗೊತ್ತಾಗುತ್ತಿಲ್ಲ ಎಂದು ಎನ್‌ಸಿಪಿ ನಾಯಕ ಆರೋಪಿಸಿದ್ದಾರೆ.
ಕರ್ಣಾಟಕ ಬ್ಯಾಂಕ್‌ನ ಪ್ರಸ್ತಾಪವನ್ನು ಒಂದೇ ದಿನದಲ್ಲಿ ಫಡ್ನವಿಸ್ ಅಂಗೀಕರಿಸಿದ್ದಾರೆ. ಕರ್ನಾಟಕ ಮೂಲದ ಬ್ಯಾಂಕ್ ಬಗ್ಗೆ ಫಡ್ನವಿಸ್‌ಗೆ ಅಂಥ ಒಲವು ಏಕೆ? ಅದೂ ಗಡಿ ವಿವಾದ ಇರುವಾಗ ಬೇಕಿತ್ತಾ ಎಂದು ಅಜಿತ್ ಪವಾರ್ ಟೀಕಿಸಿದ್ದಾರೆ.