ಪಾಟ್ನಾ, ಬಿಹಾರ: ಆರ್‌ಜೆಡಿಯ ವರಿಷ್ಠ ನಾಯಕ ಲಾಲು ಪ್ರಸಾದ್ ಯಾದವ್ (RJD Leader Lalu Prasad Yadav) ಅವರ ಹಿರಿಯ ಪುತ್ರ, ಬಿಹಾರದ ಸಚಿವ ತೇಜ್ ಪ್ರತಾಪ್ (Minister Tej Pratap Yadav) ಅವರು ತಮ್ಮ ಪತ್ನಿ ಐಶ್ವರ್ಯ ರಾಯ್ (Aishwarya Rai) ವಿರುದ್ಧ ಕೌಟುಂಬಿಕ ದೌರ್ಜನ್ಯ ಎಸಗಿದ್ದಾರೆ (domestic violence) ಎಂದು ಪಾಟ್ನಾದ ಕೌಟುಂಬಿಕ ನ್ಯಾಯಾಲಯವು (Family Court) ತೀರ್ಪು ನೀಡಿದೆ. ಕೌಟುಂಬಿಕ ಹಿಂಸಾಚಾರ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ರಕ್ಷಣೆಗಾಗಿ ಐಶ್ವರ್ಯಾ ಸಲ್ಲಿಸಿದ ಅರ್ಜಿಯನ್ನು ಅನುಮತಿಸಿರುವ ನ್ಯಾಯಾಲಯವು, ತೇಜ್ ಅವರ ಪತ್ನಿ ಐಶ್ವರ್ಯ ರಾಯ್ ಅವರಿಗೆ ತಿಂಗಳೊಳಗೇ ಪರ್ಯಾಯ ವಸತಿ ವ್ಯವಸ್ಥೆ ಮಾಡುವಂತೆ ಸೂಚಿಸಿದೆ.
ಐಶ್ವರ್ಯ ರಾಯ್ ಅವರ ವಿದ್ಯುತ್, ನೀರು ಪೂರೈ ಮತ್ತು ಇತರ ಎಲ್ಲ ಸೌಲಭ್ಯಗಳ ವೆಚ್ಚವನ್ನು ತೇಜ್ ಪ್ರತಾಪ್ ಅವರೇ ಭರಿಸಬೇಕು. ತೇಜ್ ಪ್ರತಾಪ್ ಅವರು ತಮ್ಮ ಪತ್ನಿಗೆ ಮನೆ ಪ್ರವೇಶಿಸುವುದನ್ನು ತಡೆದಿರುವುದು ಮೇಲ್ನೋಟಕ್ಕೆ ಕೌಟುಂಬಿಕ ದೌರ್ಜನ್ಯ ಎಂಬುದು ಸಾಬೀತಾಗುತ್ತದೆ. ರಾಬ್ರಿ ದೇವಿಗೆ ಮಂಜೂರು ಮಾಡಲಾದ ವಸತಿ ಬಂಗಲೆಯು ಐಶ್ವರ್ಯ ರಾಯ್ ಅವರ ವೈವಾಹಿಕ ಮನೆಯಾಗಿದ್ದು, ಅದನ್ನು “ಹಂಚಿದ ಮನೆ” ಯಾಗಿ ಬಳಸಿಕೊಳ್ಳಲು ಅವಳು ಬಳಸುವ ವಿದ್ಯುತ್, ನೀರು ಸರಬರಾಜು ಮತ್ತು ಇತರ ಸೌಕರ್ಯಗಳ ಎಲ್ಲಾ ವೆಚ್ಚಗಳನ್ನು ಸಹ ಅವನು ಭರಿಸಬೇಕು ಎಂದು ಕೋರ್ಟ್ ಹೇಳಿದೆ.
ಬಿಹಾರದ ಸರ್ಕಾರದಲ್ಲಿ ತೇಜ್ ಪ್ರತಾಪ್ ಅವರು ಪರಿಸರ, ಅರಣ್ಯ ಹಾಗೂ ಹವಾಮಾನ ಇಲಾಖೆಯ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರ ಸಹೋದರ ತೇಜಸ್ವಿ ಯಾದವ್ ಅವರು ಬಿಹಾರ ಉಪಮುಖ್ಯಮಂತ್ರಿಯಾಗಿದ್ದಾರೆ. ಬಿಹಾರದ ಮಾಜಿ ಸಿಎಂ ದರೋಗಾ ಪ್ರಸಾದ್ ರೈ ಅವರ ಮೊಮ್ಮಗಳಾದ ಐಶ್ವರ್ಯ ರಾಯ್ ಅವರನ್ನು ತೇಜ್ ಪ್ರತಾಪ್ ಅವರು 2018ರಲ್ಲಿ ವಿವಾಹವಾಗಿದ್ದರು.
ಈ ಸುದ್ದಿಯನ್ನೂ ಓದಿ: Bhai Bhatijavaad | ಮೋದಿ ʼಪರಿವಾರವಾದʼ ಟೀಕೆ ಬೆನ್ನಲ್ಲೇ ತೇಜ್ ಪ್ರತಾಪ್ ಯಾದವ್ ಸಭೆಯಲ್ಲಿ ಅವರ ಬಾವ ಭಾಗಿ!
ವಿವಾಹವಾದ ಸ್ವಲ್ಪ ದಿನಗಳ ಬಳಿಕವೇ ಐಶ್ವರ್ಯ ರಾಯ್ ಮತ್ತು ತೇಜ್ ಪ್ರತಾಪ್ ನಡುವೆ ಸಾಂಸಾರಿಕ ಭಿನ್ನಾಭಿಪ್ರಾಯಗಳು ಶುರುವಾಗಿದ್ದವು. ತಮ್ಮ ಪತಿ ವಿರುದ್ಧ ಐಶ್ವರ್ಯ ಅನೇಕ ಆರೋಪಗಳನ್ನು ಮಾಡಿದ್ದರು. ಮಾಧ್ಯಮಗಳಲ್ಲಿ ಈ ಬಗ್ಗೆ ಸಾಕಷ್ಟು ಸುದ್ದಿ ಕೂಡ ಆಘಿತ್ತು. ನನ್ನ ಹೆಂಡತಿ ತನ್ನ ಲೈಫ್‌ಸ್ಟೈಲಿಗೆ ಹೊಂದಾಣಿಕೆಯಾಗುತ್ತಿಲ್ಲ ಎಂದು ತೇಜ್ ಪ್ರತಾಪ್ ಅವರು ಆರೋಪಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಅಂತಿಮವಾಗಿ, ತೇಜ್ ಪ್ರತಾಪ್ ಹಾಗೂ ಐಶ್ವರ್ಯ ರಾಯ್ ಅವರ ಕೌಟುಂಬಿಕ ಕಲಹ ಕೌಟುಂಬಿಕ ನ್ಯಾಯಾಲಯಕ್ಕೆ ಬಂತು. ಇದೀಗ ಕೋರ್ಟ್, ತೇಜ್ ಪ್ರತಾಪ್ ಕೌಟುಂಬಿಕ ದೌರ್ಜನ್ಯ ಎಸಗಿರುವುದು ಸಾಬೀತಾಗಿದೆ ಎಂದು ತೀರ್ಪು ನೀಡಿದೆ. ಇದರೊಂದಿಗೆ, ತೇಜ್ ಪ್ರತಾಪ್ ಅವರಿಗೆ ಭಾರೀ ಹಿನ್ನಡೆಯಾಗಿದೆ.