ನವದೆಹಲಿ: ಚೋಲೆ ಭಟುರೆ ಎಲ್ಲರ ಹೃದಯದಲ್ಲಿ ವಿಶೇಷ ಸ್ಥಾನ ಹೊಂದಿರುತ್ತದೆ. ವಿಶೇಷವಾಗಿ ಉತ್ತರ ಭಾರತಕ್ಕೆ ಸೇರಿದ ಜನರು ಈ ತಿಂಡಿಯ ಕಟ್ಟಾ ಅಭಿಮಾನಿಗಳು. ಅಪಾಯದ ಕ್ಷಣವೊಂದು ಎದುರಾದರೂ ಕೈಯಲ್ಲಿದ್ದ ಚೋಲೆ ಭಟುರೆಯನ್ನು ಬಿಡದ ಪ್ರಸಂಗವೊಂದು ಈ ಮಾತಿಗೆ ಇನ್ನಷ್ಟು ಇಂಬು ಕೊಟ್ಟಿದೆ. ಈ ವಿಷಯ ವೈರಲ್ (Viral News ) ಆದ ಬಳಿಕ, ಪ್ರಾಣ ಕೊಟ್ಟೆವು, ಆದರೆ ಚೋಲೆ ಭಟುರೆ ಬಿಡೆವು ಎಂಬ ಘೋಷಣೆಗಳು ಜನಪ್ರಿಯಗೊಂಡಿತು.
ಗ್ರೇಟರ್ ನೋಯ್ಡಾ ಸೊಸೈಟಿಯಲ್ಲಿ ವಾಸಿಸುವ ಒಂದೇ ಕುಟುಂಬದ ಮೂವರು ಸದಸ್ಯರು ಲಿಫ್ಟ್ ಒಂದರಲ್ಲಿ 30 ನಿಮಿಷಕ್ಕೂ ಹೆಚ್ಚು ಕಾಲ ಸಿಕ್ಕಿ ಹಾಕಿಕೊಂಡಿದ್ದರು. ಈ ವೇಳೆ ಅವರ ಕೈಯಲ್ಲಿ ಚೋಲೆ ಭಟುರೆಯ ಪ್ಲೇಟ್ ಇತ್ತು. ಆದರೆ, ಅವರ್ಯಾರೂ ಪ್ಲೇಟ್ ನೆಲಕ್ಕಿಡದೇ ಹಾಗೆಯೇ ಕೈಯಲ್ಲಿ ಹಿಡಿದುಕೊಂಡು ನಿಂತಿದ್ದರು. ಹೀಗಾಗಿ ಚೋಲೆ ಮೇಲಿನ ಪ್ರೀತಿ ಪ್ರಾಣಕ್ಕಿಂತಲೂ ಹೆಚ್ಚು ಎಂಬುದು ಬಹಿರಂಗಗೊಂಡಿದೆ.
ಲಿಫ್ಟ್ ಒಳಗಿನ ಎಮರ್ಜೆನ್ಸಿ ಬಟನ್ ವಿಫಲಗೊಂಡಿತ್ತು. ತಕ್ಷಣ ಅವರು ಸಹಾಯಕ್ಕಾಗಿ ತಮ್ಮ ನೆರೆಹೊರೆಯವರಿಗೆ ಕರೆ ಮಾಡಿದ್ದರು. ಭದ್ರತಾ ಸಿಬ್ಬಂದಿ ಮತ್ತು ಸಂಬಂಧಪಟ್ಟ ನೆರೆಹೊರೆಯವರು ಸಿಕ್ಕಿಬಿದ್ದ ವ್ಯಕ್ತಿಗಳಿಗೆ ಸಹಾಯ ಮಾಡಲು ಓಡಿ ಬಂದಿದ್ದರು. ಆಗ ಎಲ್ಲರ ಗಮನ ಸೆಳೆದ ಸಂಗತಿಯೆಂದರೆ, ಲಿಫ್ಟ್ ನಿಂದ ನಿರ್ಗಮಿಸುವ ಮೊದಲು, ಅವರು ಚೋಲೆ ಭಟುರೆಗೆ ಒಂದಿಷ್ಟೂ ಹಾನಿಯಾಗದಂತೆ ನೋಡಿಕೊಂಡಿದ್ದರು. ಅವರಲ್ಲಿ ಒಬ್ಬರು ತಮ್ಮನ್ನು ರಕ್ಷಿಸಲು ಲಿಫ್ಟ್ ಹೊರಗೆ ಕಾಯುತ್ತಿದ್ದವರಿಗೆ “ಪೆಹ್ಲೆ ಮೇರೆ ಭಟುರೆ ಪಕ್ಡೋ (ಮೊದಲು ನನ್ನ ತಟ್ಟೆಯನ್ನು ಹಿಡಿದುಕೊಳ್ಳಿ)” ಎಂದು ಹೇಳುವುದು ವೈರಲ್ ಆಗಿದೆ. ಇದು ಅಲ್ಲಿದ್ದವರಿಗೆ ತಕ್ಷಣ ನಗುವನ್ನು ತರಿಸಿತ್ತು.
ಇದನ್ನೂ ಓದಿ : Viral Video: ಒಳಗೆ ಸೇರಿದರೆ ಗುಂಡು, ಬೆಕ್ಕೂ ಆಗುವುದು ಗಂಡು!
ಇನ್ಸ್ಟಾಗ್ರಾಮ್ನಲ್ಲಿ ವೈರಲ್ ಆದ ವೀಡಿಯೊ ವೀಕ್ಷಕರ ಗಮನ ಸೆಳೆಯಿತು. ಆದರೆ ಕುಟುಂಬವು ಚೋಲೆ ಭಟುರೆಯನ್ನು ಒಂದಿಷ್ಟು ಚೆಲ್ಲದಂತೆ ಕಾಪಾಡಿಕೊಂಡಿದ್ದು ಎಲ್ಲರ ಮುಖದಲ್ಲಿ ನಗು ಮೂಡಿಸಿತು. “ಮಹಿಳೆಯರೇ ಮತ್ತು ಮಕ್ಕಳೇ ಮೊದಲು ಚೋಲೆ ಭಟುರೆ ಕಾಪಾಡಿಕೊಳ್ಳಿ ಎಂದು ಒಬ್ಬರು ಬರೆದುಕೊಂಡಿದ್ದಾರೆ. ಇನ್ನೊಬ್ಬರು “ದೆಹಲಿಯಲ್ಲಿ ಸಂಭವಿಸಬಹುದಾದ ಅದ್ಭುತ ವಿಷಯ ಎಂದಿದ್ದಾರೆ.
ವೀಡಿಯೊ ಮಾಡುವಾಗ ಯಾವುದೇ ಚೋಲೆ ಭಟುರೆಗೆ ಹಾನಿಯಾಗಿಲ್ಲ” ಎಂದು ಇನ್ನೊಬ್ಬರು ಇನ್ಸ್ಟಾಗ್ರಾಮ್ನಲ್ಲಿ ಕಾಮೆಂಟ್ ಮಾಡಿದ್ದಾರೆ. “ಗರಂ ಗರಂ ಖಾ ಲೆನೆ ಚೈಯೆ (ಬಿಸಿಯಾಗಿರುವಾಗ ಅದನ್ನು ತಿನ್ನಬೇಕಿತ್ತು)” ಎಂದು ಮತ್ತೊಬ್ಬ ಬಳಕೆದಾರರು ಬರೆದಿದ್ದಾರೆ. ಲಿಫ್ಟ್ ನಲ್ಲಿ ಸಿಲುಕಿಕೊಳ್ಳುವುದು ಕಷ್ಟದ ಅನುಭವವಾಗಿದ್ದರೂ, ಈ ಗುಂಪು ತಮ್ಮ ಅನುಭವವನ್ನು ಶಾಶ್ವತವಾಗಿ ನೆನಪಿಸಿಕೊಳ್ಳುತ್ತದೆ ಎಂದು ನಮಗೆ ಖಾತ್ರಿಯಿದೆ ಎಂದು ಇನ್ನೊಬ್ಬರು ಹಾಸ್ಯದ ಪ್ರತಿಕ್ರಿಯೆ ಕೊಟ್ಟಿದ್ದಾರೆ.