Site icon Vistara News

Farmers protest: ʼದಿಲ್ಲಿ ಚಲೋʼದಲ್ಲಿ ಮೃತ ರೈತನ ಕುಟುಂಬಕ್ಕೆ 1 ಕೋಟಿ ಪರಿಹಾರ; ಪ್ರತಿಭಟನೆ ಪುನಾರಂಭ, ಇನ್ನೊಬ್ಬ ರೈತ ಸಾವು

shubhkarana singh farmer died

ಹೊಸದಿಲ್ಲಿ: ಪಂಜಾಬ್- ಹರಿಯಾಣ ಗಡಿಯಲ್ಲಿ ರೈತರ ಪ್ರತಿಭಟನೆ (Farmers protest, farmers marc, Delhi chalo) ವೇಳೆ ಮೃತಪಟ್ಟ 22 ವರ್ಷದ ರೈತ ಶುಭಕರನ್ ಸಿಂಗ್ (Shubh Karan Singh) ಅವರ ಕುಟುಂಬಕ್ಕೆ ಪಂಜಾಬ್ ಸರ್ಕಾರದಿಂದ 1 ಕೋಟಿ ರೂಪಾಯಿ ಆರ್ಥಿಕ ನೆರವನ್ನು (Compensation) ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ (Punjab CM Bhagwant Mann) ಘೋಷಿಸಿದ್ದಾರೆ. ಇದೇ ವೇಳೆಗೆ ದಿಲ್ಲಿ ಗಡಿಯಲ್ಲಿ (Delhi border) ರೈತರು ಪ್ರತಿಭಟನೆಯನ್ನು ಪುನರಾರಂಭಿಸಿದ್ದು, ಶಂಭು ಗಡಿಯಲ್ಲಿ ಹೃದಯಾಘಾತದಿಂದ ಇನ್ನೊಬ್ಬ ರೈತರು ಮೃತಪಟ್ಟಿದ್ದಾರೆ.

ಶುಭಕರನ್‌ ಸಿಂಗ್‌ ಅವರ ಕುಟುಂಬಕ್ಕೆ ಆರ್ಥಿಕ ನೆರವಿನ ಜೊತೆಗೆ ಅವರ ತಂಗಿಗೆ ಸರ್ಕಾರಿ ನೌಕರಿ ನೀಡಲಾಗುವುದು. ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದುʼ ಎಂದು ಮಾನ್‌ ಹೇಳಿದ್ದಾರೆ. ಬುಧವಾರ ಖಾನೌರಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಕತ್ತಿನ ಹಿಂಭಾಗಕ್ಕೆ ಗಾಯವಾಗಿ ಶುಭಕರನ್ ಮೃತಪಟ್ಟಿದ್ದರು. ಇದರಿಂದಾಗಿ ಕೇಂದ್ರದೊಂದಿಗಿನ ಮಾತುಕತೆಯನ್ನು ರೈತ ಮುಖಂಡರು ಸ್ಥಗಿತಗೊಳಿಸಿದ್ದರು. ಶುಭಕರನ್‌ ಶವ ಬುಧವಾರದಿಂದ ಆಸ್ಪತ್ರೆಯಲ್ಲಿದ್ದು, ಶವಪರೀಕ್ಷೆ ನಡೆಸಲು ಪೊಲೀಸರಿಗೆ ರೈತರು ಅವಕಾಶ ನೀಡಲಿಲ್ಲ.

ರೈತರ ನೇತೃತ್ವದಲ್ಲಿ ನಡೆಯುತ್ತಿರುವ ‘ದಿಲ್ಲಿ ಚಲೋ’ ಮೆರವಣಿಗೆ ಶುಕ್ರವಾರ ಪುನರಾರಂಭಗೊಂಡಿದೆ. ಶುಭಕರನ್ ಸಿಂಗ್ ಅವರ ಶೋಕಾರ್ಥವಾಗಿ ಶುಕ್ರವಾರವನ್ನು “ಕರಾಳ ದಿನ” ಎಂದು ಆಚರಿಸಲು ರೈತ ಮುಖಂಡರು ಮುಂದಾಗಿದ್ದಾರೆ. ಭಾರತಿ ಕಿಸಾನ್ ಯೂನಿಯನ್ (ಸಿಧುಪುರ್) ಅಧ್ಯಕ್ಷ ಜಗಜಿತ್ ಸಿಂಗ್ ದಲ್ಲೆವಾಲ್ ಮತ್ತು ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿಯ ಸಂಚಾಲಕ ಸರ್ವಣ್ ಸಿಂಗ್ ಪಂಧರ್ ಅವರು ಶುಭಕರನ್‌ ಸಿಂಗ್ ಅವರನ್ನು “ಹುತಾತ್ಮ” ಎಂದು ಘೋಷಿಸಲು ಪಂಜಾಬ್ ಸರ್ಕಾರಕ್ಕೆ ಒತ್ತಾಯಿಸಿದರು. ಜನರು ತಮ್ಮ ಮನೆ, ಅಂಗಡಿಗಳು ಮತ್ತು ವಾಹನಗಳ ಮೇಲೆ ಕಪ್ಪು ಬಾವುಟಗಳನ್ನು ಹಾರಿಸುವಂತೆ ಮನವಿ ಮಾಡಿದರು. ಹರ್ಯಾಣ ಸರ್ಕಾರಿ ಅಧಿಕಾರಿಗಳು ಮತ್ತು ರಾಜ್ಯ ಗೃಹ ಸಚಿವರ ವಿರುದ್ಧ ಕೊಲೆ ಆರೋಪದಡಿಯಲ್ಲಿ ಎಫ್‌ಐಆರ್ ದಾಖಲಿಸಬೇಕೆಂದು ರೈತರು ಒತ್ತಾಯಿಸಿದ್ದಾರೆ.

ಮತ್ತೊಬ್ಬ ರೈತರ ಸಾವು

ಶಂಭು ಗಡಿಯಲ್ಲಿ ರೈತರೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಭಟಿಂಡಾ ಜಿಲ್ಲೆಯ ಅಮರ್‌ಗಢ್ ಗ್ರಾಮದ ದರ್ಶನ್ ಸಿಂಗ್ ಅವರು ಇಂದು ಬೆಳಿಗ್ಗೆ ಹೃದಯಾಘಾತದಿಂದ ಬಳಲಿ, ಪಟಿಯಾಲಾದ ರಾಜೀಂದ್ರ ವೈದ್ಯಕೀಯ ಕಾಲೇಜಿಗೆ ಕರೆದೊಯ್ದ ಬಳಿಕ ಅಲ್ಲಿ ಹೃದಯ ಸ್ತಂಭನದಿಂದ ನಿಧನರಾದರು. ಅವರಿಗೆ 62 ವರ್ಷ ವಯಸ್ಸಾಗಿತ್ತು.

ಇದಕ್ಕೂ ಹಿಂದಿನ ದಿನ, ಸಂಗ್ರೂರಿನ ಖಾನೌರಿ ಬಾರ್ಡರ್‌ನಲ್ಲಿ ರೈತ ಪ್ರತಿಭಟನೆ ಕರ್ತವ್ಯದ ವೇಳೆ ಪೊಲೀಸ್ ಅಧಿಕಾರಿಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ಪಂಜಾಬ್ ಪೊಲೀಸ್ ಡಿಜಿಪಿ ಗೌರವ್ ಯಾದವ್ ಅವರು ಘೋಷಿಸಿದ್ದರು. “ನಿನ್ನೆ, ಸಂಗ್ರೂರಿನ ಖಾನೋರಿ ಬಾರ್ಡರ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನಮ್ಮ ಧೈರ್ಯಶಾಲಿ ಡಿಎಸ್‌ಪಿ ದಿಲ್‌ಪ್ರೀತ್ ಸಿಂಗ್ ಅವರನ್ನು ಕಳೆದುಕೊಂಡಿದ್ದೇವೆ” ಎಂದಿದ್ದಾರೆ.

ಏತನ್ಮಧ್ಯೆ, ಪಂಜಾಬ್‌ನೊಂದಿಗಿನ ರಾಜ್ಯದ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತ ಮುಖಂಡರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ)- 1980ರ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಹರಿಯಾಣ ಘೋಷಿಸಿದೆ. ಹೀಗೆ ಘೋಷಿಸಿದ ಕೆಲವೇ ಗಂಟೆಗಳ ನಂತರ, ರೈತರ ವಿರುದ್ಧ ಎನ್‌ಎಸ್‌ಎಯನ್ನು ಅನ್ವಯಿಸುವುದಿಲ್ಲ ಎಂದು ಹರಿಯಾಣ ಪೊಲೀಸರು ಶುಕ್ರವಾರ ಬೆಳಿಗ್ಗೆ ಹೇಳಿದರು. ರೈತ ನಾಯಕರ ವಿರುದ್ಧ ಪೊಲೀಸರು ಇನ್ನೂ ಎನ್‌ಎಸ್‌ಎಯನ್ನು ದಾಖಲಿಸಿಲ್ಲ. ಅದಕ್ಕಾಗಿ ಪ್ರಕ್ರಿಯೆಯನ್ನು ಮಾತ್ರ ಪ್ರಾರಂಭಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: Farmers Protest: ಪೊಲೀಸರ ಏಟಿಗೆ ರೈತ ಬಲಿ; ರೈತರ ಪ್ರತಿಭಟನೆ ದಿಢೀರ್‌ ಸ್ಥಗಿತ!

Exit mobile version