Site icon Vistara News

Farmers Protest: ತೀವ್ರವಾಯ್ತು ರೈತರ ಹೋರಾಟ; ಮಾ.10ರಂದು ದೇಶಾದ್ಯಂತ ರೈಲು ತಡೆ

Supreme Court

Supreme Court suggests 'neutral umpires' to bridge government-farmers trust deficit

ನವದೆಹಲಿ: ಬೆಳೆಗಳಿಗೆ ಎಂ.ಎಸ್.ಸ್ವಾಮಿನಾಥನ್‌ (MS Swaminathan) ಆಯೋಗದ ಶಿಫಾರಸಿನಂತೆ ಕನಿಷ್ಠ ಬೆಂಬಲ ಬೆಲೆ ಕಾನೂನು ಜಾರಿಗಾಗಿ ಪಂಜಾಬ್‌ ಹಾಗೂ ಹರಿಯಾಣ ಗಡಿಯಲ್ಲಿ ಸಾವಿರಾರು ರೈತರು ನಡೆಸುತ್ತಿರುವ ಪ್ರತಿಭಟನೆಯನ್ನು (Farmers Protest) ಇನ್ನಷ್ಟು ತೀವ್ರಗೊಳಿಸಲು ತೀರ್ಮಾನಿಸಲಾಗಿದೆ. ಹಾಗಾಗಿ, ರೈತರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಮಾರ್ಚ್‌ 10ರಂದು ದೇಶಾದ್ಯಂತ ರೈಲುಗಳನ್ನು ತಡೆದು (Rail Roko) ಪ್ರತಿಭಟನೆ ನಡೆಸಲು ರೈತ ಸಂಘಟನೆಗಳು ತೀರ್ಮಾನಿಸಿವೆ.

“ರೈತರ ಬೇಡಿಕೆಗಳಿಗೆ ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ. ಹಾಗಾಗಿ, ನಾವೆಲ್ಲ ಪ್ರತಿಭಟನೆಯಿಂದ ಹಿಂದಡಿ ಇಡುವುದು ಸಾಧ್ಯವೇ ಇಲ್ಲ. ನಾವು ಪಂಜಾಬ್‌ ಹಾಗೂ ಹರಿಯಾಣದಿಂದ ಶಾಂತಿಯುತವಾಗಿಯೇ ದೆಹಲಿ ಪ್ರವೇಶಿಸುತ್ತೇವೆ. ರೈತರ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲು ತೀರ್ಮಾನಿಸಿದ್ದೇವೆ. ಮಾರ್ಚ್‌ 6ರಂದು ದೇಶದ ಎಲ್ಲ ಪ್ರದೇಶಗಳಿಂದ ರೈತರು ದೆಹಲಿಗೆ ಆಗಮಿಸುತ್ತಾರೆ. ಮಾರ್ಚ್‌ 10ರಂದು ದೇಶಾದ್ಯಂತ ಮಧ್ಯಾಹ್ನ 12 ಗಂಟೆಯಿಂದ ಸಂಜೆ 4 ಗಂಟೆವರೆಗೆ ರೈಲುಗಳನ್ನು ತಡೆದು ಪ್ರತಿಭಟನೆ ನಡೆಸುತ್ತೇವೆ” ಎಂದು ರೈತ ಮುಖಂಡ ಜಗಜಿತ್‌ ಸಿಂಗ್‌ ದಲ್ಲೇವಾಲ್‌ ಮಾಹಿತಿ ನೀಡಿದ್ದಾರೆ.

ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯ ಕಾನೂನು ಜಾರಿಗೆ ತರಬೇಕು ಎಂಬುದಾಗಿ ರೈತರು ಪಟ್ಟು ಹಿಡಿದಿದ್ದಾರೆ. ಇದರ ಮಧ್ಯೆಯೇ, ದ್ವಿದಳ ಧಾನ್ಯಗಳು, ಜೋಳ, ಹತ್ತಿ ಸೇರಿ ಹಲವು ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸುವ ಕುರಿತು ಹೊಸ ಸಮಿತಿ ರಚಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಹಾಗೆಯೇ, ರೈತರಿಂದ ಕೃಷಿ ಉತ್ಪನ್ನಗಳ ಖರೀದಿಗೆ ಯಾವುದೇ ಮಿತಿ ಇರುವುದಿಲ್ಲ ಹಾಗೂ ಖರೀದಿಗಾಗಿ ವೆಬ್‌ ಪೋರ್ಟಲ್‌ ಅಭಿವೃದ್ಧಿಪಡಿಸಲಾಗುತ್ತದೆ ಎಂಬುದು ಸೇರಿ ಕೇಂದ್ರ ಸರ್ಕಾರವು ರೈತರಿಗೆ ಹಲವು ಆಫರ್‌ ನೀಡಿತ್ತು.

ಇದನ್ನೂ ಓದಿ: Farmers protest: ʼದಿಲ್ಲಿ ಚಲೋʼದಲ್ಲಿ ಮೃತ ರೈತನ ಕುಟುಂಬಕ್ಕೆ 1 ಕೋಟಿ ಪರಿಹಾರ; ಪ್ರತಿಭಟನೆ ಪುನಾರಂಭ, ಇನ್ನೊಬ್ಬ ರೈತ ಸಾವು

ಮುಂದಿನ ಐದು ವರ್ಷಗಳಿಗೆ ಕನಿಷ್ಠ ಬೆಂಬಲ ಬೆಲೆಯ ಖಾತ್ರಿಯೂ ಕೇಂದ್ರದ ಆಫರ್‌ಗಳಲ್ಲಿ ಸೇರಿದೆ. ಲೋಕಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗಲೇ ರೈತರು ಪ್ರತಿಭಟನೆ ನಡೆಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರವು, ಬೇಡಿಕೆಗಳನ್ನು ಈಡೇರಿಸುವ ಮೂಲಕ ಅನ್ನದಾತರ ಪ್ರತಿಭಟನೆ ಶಮನಗೊಳಿಸಲು ತೀರ್ಮಾನಿಸಿತ್ತು. ಆದರೆ, ಕೇಂದ್ರ ಸರ್ಕಾರದ ಆಫರ್‌ ತಿರಸ್ಕರಿಸಿದ ರೈತರು ದೆಹಲಿ ಗಡಿಗಳಲ್ಲಿ ಪ್ರತಿಭಟನೆ ಮುಂದುವರಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version