Site icon Vistara News

ರೈತರ ಪ್ರತಿಭಟನೆ ಏಕೆ? ‘ಸ್ವಾಮಿನಾಥನ್‌’ ವರದಿಯನ್ನು ಯುಪಿಎ ತಿರಸ್ಕರಿಸಿದ್ದೇಕೆ?

Farmers Protest

Farmers Protests: What is Swaminathan Committee and what did it recommend?

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯತ್ತ ಸಾವಿರಾರು ರೈತರು ಲಗ್ಗೆ ಇಡುತ್ತಿದ್ದಾರೆ. ಉತ್ತರ ಪ್ರದೇಶ, ಪಂಜಾಬ್‌ ಹರಿಯಾಣದ ಸಾವಿರಾರು ರೈತರು ದೆಹಲಿ ಸಮೀಪ ಪ್ರತಿಭಟನೆ (Farmers Protest) ನಡೆಸುತ್ತಿದ್ದಾರೆ. ರೈತರು ದೆಹಲಿ ಪ್ರವೇಶಿಸಬಾರದು ಎಂದು ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದ್ದು, ಬಿಗಿ ಬಂದೋಬಸ್ತ್‌ ಕೈಗೊಳ್ಳಲಾಗಿದೆ. ರೈತರು ಕೂಡ ಪಟ್ಟು ಸಡಿಲಿಸುತ್ತಿಲ್ಲ. ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಕಾನೂನು (MSP) ಜಾರಿಗೆ ತರಬೇಕು, ಎಂ.ಎಸ್.ಸ್ವಾಮಿನಾಥನ್‌ ಆಯೋಗದ ಶಿಫಾರಸುಗಳನ್ನು ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ. ಹಾಗಾದರೆ, ಏನಿದು ಸ್ವಾಮಿನಾಥನ್‌ (Swaminathan Committee) ವರದಿ? ಶಿಫಾರಸುಗಳು ಯಾವವು ಎಂಬುದರ ಮಾಹಿತಿ ಇಲ್ಲಿದೆ.

ಏನಿದು ಸ್ವಾಮಿನಾಥನ್‌ ಆಯೋಗ?

ರೈತರ ಸಮಸ್ಯೆಗಳನ್ನು ಬಗೆಹರಿಸುವುದು, ಅವರ ಆದಾಯ ಹೆಚ್ಚಿಸುವುದು, ಕನಿಷ್ಠ ಬೆಂಬಲ ಬೆಲೆ ಘೋಷಣೆ ಸೇರಿ ಹಲವು ಕಾರಣಗಳಿಗಾಗಿ ಯುಪಿಎ ಸರ್ಕಾರದ ಮೊದಲ ಅವಧಿಯಲ್ಲಿ ಎಂ.ಎಸ್.ಸ್ವಾಮಿನಾಥನ್‌ ಆಯೋಗವನ್ನು ರಚಿಸಲಾಗಿತ್ತು. ಸ್ವಾಮಿನಾಥನ್‌ ನೇತೃತ್ವದ ಆಯೋಗವು ರೈತರ ಸಮಸ್ಯೆಗಳನ್ನು ಕೂಲಂಕಷವಾಗಿ ಅಧ್ಯಯನ ನಡೆಸಿ, 2004ರಿಂದ 2006ರ ಅವಧಿಯಲ್ಲಿ ಯುಪಿಎ ಸರ್ಕಾರಕ್ಕೆ ಹಲವು ಬಾರಿ ಶಿಫಾರಸುಗಳನ್ನು, ವರದಿಗಳನ್ನು ಸಲ್ಲಿಸಿದೆ.

ವರದಿಯ ಶಿಫಾರಸುಗಳೇನು?

ಸ್ವಾಮಿನಾಥನ್‌ ಆಯೋಗದ ವರದಿಗಳಲ್ಲಿ ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡುವುದು ಪ್ರಮುಖ ಶಿಫಾರಸಾಗಿದೆ. ಆಯೋಗದ ವರದಿ ಪ್ರಕಾರ, ರೈತರ ಬೆಳೆಗಳಿಗೆ ವೆಚ್ಚವಾದ ಒಟ್ಟು ಹಣದಲ್ಲಿ ಶೇ.50ಕ್ಕಿಂತ ಹೆಚ್ಚಿನ ಹಣವನ್ನು ಕನಿಷ್ಠ ಬೆಂಬಲ ಬೆಲೆಯನ್ನಾಗಿ ನೀಡಬೇಕು ಎಂಬುದು ಶಿಫಾರಸಿನ ಪ್ರಮುಖ ಅಂಶವಾಗಿದೆ. ಆದರೆ, 2010ರಲ್ಲಿ ಯುಪಿಎ ಸರ್ಕಾರವು ಸ್ವಾಮಿನಾಥನ್‌ ಆಯೋಗದ ವರದಿಯನ್ನು ತಿರಸ್ಕರಿಸಿತು.

ಒಂದು ಬೆಳೆ ಬೆಳೆಯಲು ಉಂಟಾದ ಖರ್ಚಿನಲ್ಲಿ ಅರ್ಧಕ್ಕಿಂತ ಹೆಚ್ಚು ಪಾಲನ್ನು ಕನಿಷ್ಠ ಬೆಂಬಲ ಬೆಲೆಯನ್ನಾಗಿ ನೀಡುವುದು ಔಚಿತ್ಯವಲ್ಲ. ಇದರಿಂದ ಆರ್ಥಿಕ ಹೊರೆ ಹಾಗೂ ಕೃಷಿ ಉತ್ಪನ್ನದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಆಗಿನ ಕೇಂದ್ರ ಸರ್ಕಾರವು ವರದಿಯನ್ನು ತಿರಸ್ಕರಿಸಿತು ಎಂದು ತಿಳಿದುಬಂದಿದೆ. ಈಗ ವರದಿಯ ಜಾರಿಗಾಗಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.

ಅಶ್ರುವಾಯು ಪ್ರಯೋಗ

ಉತ್ತರ ಪ್ರದೇಶ, ಹರ್ಯಾಣ, ಪಂಜಾಬ್ ಮತ್ತಿತರ ಕಡೆಯ ರೈತರು 25 ಸಾವಿರಕ್ಕೂ ಅಧಿಕ ಟ್ರ್ಯಾಕ್ಟರ್‌ ಮೂಲಕ ಆಗಮಿಸುತ್ತಿರುವುದನ್ನು ತಡೆಯಲು ಶಂಭು ಗಡಿಯಲ್ಲಿ ಅಶ್ರು ವಾಯು ಪ್ರಯೋಗಿಸಲಾಗಿದೆ. ರೈತರ ಮೇಲೆ ಪೊಲೀಸರು ಟಿಯರ್‌ ಗ್ಯಾಸ್‌ ಬಳಸಿದ್ದಾರೆ. ದೆಹಲಿಯಿಂದ ಸುಮಾರು 200 ಕಿ.ಮೀ. ದೂರದಲ್ಲಿರುವ ಶಂಭು ಗಡಿಯ ದೃಶ್ಯಾವಳಿಗಳಿಂದ ಪೊಲೀಸರು ಮತ್ತು ಭದ್ರತಾ ಸಿಬ್ಬಂದಿ ರೈತರನ್ನು ಚದುರಿಸಲು ಡ್ರೋನ್‌ಗಳಿಂದ ಹೊಗೆ ಬಾಂಬ್‌ಗಳನ್ನು (smoke bombs) ಎಸೆಯುತ್ತಿರುವುದು ಕಂಡು ಬಂದಿದೆ. ಸುಮಾರು 200 ರೈತ ಸಂಘಟನೆಗಳು ಕರೆ ನೀಡಿದ ಈ ದೆಹಲಿ ಚಲೋ ಪ್ರತಿಭಟನೆಯಲ್ಲಿ ಸುಮಾರು ಒಂದು ಲಕ್ಷ ರೈತರು ಪಾಲ್ಗೊಂಡಿದ್ದಾರೆ.

ಇದನ್ನೂ ಓದಿ: Delhi Farmers Protest: 6 ತಿಂಗಳ ಪಡಿತರ ತೆಗೆದುಕೊಂಡು ಪ್ರತಿಭಟನೆಗೆ ಹೊರಟ ರೈತರು

ಅಂಬಾಲಾ, ಜಿಂದ್, ಫತೇಹಾಬಾದ್, ಕುರುಕ್ಷೇತ್ರ ಮತ್ತು ಸಿರ್ಸಾ ಸೇರಿದಂತೆ ಹಲವು ಸ್ಥಳಗಳಲ್ಲಿ ಹರಿಯಾಣದ ಅಧಿಕಾರಿಗಳು ಪಂಜಾಬ್‌ನೊಂದಿಗೆ ರಾಜ್ಯದ ಗಡಿಯನ್ನು ಭದ್ರಪಡಿಸಿದ್ದಾರೆ. ಕಾಂಕ್ರೀಟ್ ಬ್ಲಾಕ್‌ಗಳು, ಕಬ್ಬಿಣದ ಮೊಳೆಗಳು, ಮುಳ್ಳುತಂತಿಗಳು, ಬ್ಯಾರಿಕೇಡ್ ಬಳಸಿ ರಸ್ತೆ ತಡೆಯಲಾಗಿದೆ. ಪ್ರತಿಭಟನಾಕಾರರನ್ನು ರಾಜ್ಯಕ್ಕೆ ಪ್ರವೇಶಿಸದಂತೆ ನಿರ್ಬಂಧಿಸಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version