ನವದೆಹಲಿ: ಕರ್ನಾಟಕ ಸೇರಿ ದೇಶಾದ್ಯಂತ ನಾಗರ ಪಂಚಮಿ ಹಬ್ಬದ ಖುಷಿ ಮನೆಮಾಡಿದೆ. ರಕ್ಷಾ ಬಂಧನ, ಗಣೇಶ ಚತುರ್ಥಿ, ದಸರಾ, ದೀಪಾವಳಿ ಸೇರಿ ಸಾಲು ಸಾಲು ಹಬ್ಬಗಳು (Festival Season) ಸಮೀಪಿಸುತ್ತಿವೆ. ಬಟ್ಟೆ, ಚಿನ್ನ, ಆಪ್ತರಿಗೆ ಉಡುಗೊರೆ ಸೇರಿ ಹತ್ತಾರು ವಸ್ತುಗಳನ್ನು ಖರೀದಿಸವು ಮೂಲಕ ದೇಶದ ಜನರು ಎಲ್ಲ ಹಬ್ಬಗಳನ್ನು ಸಡಗರ ಸಂಭ್ರಮದಿಂದ ಆಚರಿಸಲು ಸಜ್ಜಾಗಿದ್ದಾರೆ. ಇದರ ಬೆನ್ನಲ್ಲೇ, ಇ-ಕಾಮರ್ಸ್ ಸಂಸ್ಥೆಗಳು (E Commerce Companies) ಸುಮಾರು 12.5 ಲಕ್ಷ ಜನರಿಗೆ ಉದ್ಯೋಗ (Festive Season Hiring) ನೀಡಲು ಮುಂದಾಗಿವೆ ಎಂದು ತಿಳಿದುಬಂದಿದೆ.
ಹೌದು, ಇ-ಕಾಮರ್ಸ್ ಸಂಸ್ಥೆಗಳ ವಹಿವಾಟು ಹಬ್ಬದ ಸೀಸನ್‌ನಲ್ಲಿ ಶೇ.35ರಷ್ಟು ಏರಿಕೆಯಾಗುತ್ತದೆ. ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚಿನ ವಹಿವಾಟು ಆಗಲಿದೆ ಎಂದು ಅಂದಾಜಿಸಲಾಗಿದೆ. ಹಾಗಾಗಿ, ಇ-ಕಾಮರ್ಸ್ ಸಂಸ್ಥೆಗಳು ಲಕ್ಷಾಂತರ ಜನರಿಗೆ ಉದ್ಯೋಗ ನೀಡಲು ಮುಂದಾಗಿವೆ. ಸುಮಾರು 10 ಲಕ್ಷ ಜನರಿಗೆ ತಾತ್ಕಾಲಿಕವಾಗಿ, ಇನ್ನೂ 2.5 ಲಕ್ಷ ಮಂದಿಗೆ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ತೀರ್ಮಾನಿಸಿವೆ. ಹಬ್ಬದ ಆಚರಣೆಯ ಖುಷಿಯ ಜತೆಗೆ ಉದ್ಯೋಗದ ಖುಷಿಯನ್ನೂ ನೀಡಲು ಕಂಪನಿಗಳು ಮುಂದಾಗಿವೆ.
ಭಾರತದಲ್ಲಿ ಆನ್‌ಲೈನ್ ಮೂಲಕ ಕೋಟ್ಯಂತರ ಜನ ಆರ್ಡರ್ ಮಾಡುತ್ತಾರೆ. ಮನೆಗೆ ಬೇಕಾಗುವ ಅಗತ್ಯ ವಸ್ತುಗಳಿಂದ ಹಿಡಿದು, ಎಲೆಕ್ಟ್ರಾನಿಕ್ಸ್ ಉಪಕರಣಗಳು, ಸೌಂದರ್ಯ ವರ್ಧಕಗಳು, ಮನೆಯ ಸಿಂಗಾರ, ಬಟ್ಟೆ ಸೇರಿ ಹತ್ತಾರು ಉಪಕರಣಗಳನ್ನು ಆನ್‌ಲೈನ್ ಮೂಲಕವೇ ಆರ್ಡರ್ ಮಾಡುತ್ತಾರೆ. ಇದನ್ನು ಅರಿತ ಇ-ಕಾಮರ್ಸ್ ಸಂಸ್ಥೆಗಳು ಗ್ರಾಹಕರಿಗೆ ಸಮಯಕ್ಕೆ ಸರಿಯಾಗಿ ಆರ್ಡರ್‌ಗಳನ್ನು ಮನೆಬಾಗಿಲಿಗೆ ತಲುಪಿಸಲು ಲಕ್ಷಾಂತರ ಜನರನ್ನು ನೇಮಕ ಮಾಡಿಕೊಳ್ಳಲು ತೀರ್ಮಾನಿಸಿವೆ ಎಂದು ತಿಳಿದುಬಂದಿದೆ.
ಕಳೆದ ವರ್ಷ ಹಬ್ಬದ ಸೀಸನ್‌ನಲ್ಲಿ ಪ್ರತಿ ದಿನ ಸರಾಸರಿ 20 ಲಕ್ಷ ಆನ್‌ಲೈನ್ ಆರ್ಡರ್‌ಗಳು ದಾಖಲಾಗಿದ್ದವು. ಗ್ರಾಹಕರ ಬೇಡಿಕೆಗಳನ್ನು ಈಡೇರಿಸುವ ಸಲುವಾಗಿ ಇ-ಕಾಮರ್ಸ್ ಸಂಸ್ಥೆಗಳು ಪರದಾಡಿದವು. ಆದರೆ, ಈ ಬಾರಿ ಗ್ರಾಹಕರಿಗೆ ಯಾವುದೇ ವ್ಯತ್ಯಯ ಆಗದಂತೆ ನೋಡಿಕೊಳ್ಳಲು ಅಮೆಜಾನ್, ಫ್ಲಿಪ್‌ಕಾರ್ಟ್ ಸೇರಿ ಹತ್ತಾರು ಇ ಕಾಮರ್ಸ್ ಸಂಸ್ಥೆಗಳು ನೌಕರರನ್ನು ನೇಮಿಸಿಕೊಳ್ಳುತ್ತಿವೆ. ಇ-ಕಾಮರ್ಸ್ ಸಂಸ್ಥೆಗಳು ಮಾತ್ರವಲ್ಲ, ದೊಡ್ಡ ದೊಡ್ಡ ಶಾಪಿಂಗ್ ಮಾಲ್‌ಗಳು, ಚಿನ್ನಾಭರಣಗಳ ಮಳಿಗೆಗಳ್ಲಲೂ ಹೆಚ್ಚಿನ ನೇಮಕಾತಿ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: Bangladesh Unrest: ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿ ನೊಬೆಲ್ ಪ್ರಶಸ್ತಿ ವಿಜೇತ ಮುಹಮ್ಮದ್ ಯೂನಸ್ ನೇಮಕ