Site icon Vistara News

ಉಗ್ರರ ವಿರುದ್ಧ ಹೋರಾಡಿ, ಆದರೆ ಪ್ರಜೆಗಳನ್ನು ನೋಯಿಸಬೇಡಿ: ಸೇನೆಗೆ ರಾಜನಾಥ್ ಸಿಂಗ್ ಕಿವಿಮಾತು

rajnath singh

ಹೊಸದಿಲ್ಲಿ: ʼಭಯೋತ್ಪಾದಕರ (Terrorists) ವಿರುದ್ಧ ಹೋರಾಡಿ, ಆದರೆ ದೇಶವಾಸಿಗಳನ್ನು ನೋಯಿಸಬೇಡಿʼ ಎಂದು ಎಂದು ರಕ್ಷಣಾ ಸಚಿವ (Defense Minister) ರಾಜನಾಥ್ ಸಿಂಗ್ (Rajnath Singh) ಅವರು ಸೇನೆಗೆ ಎಚ್ಚರಿಕೆಯ ಕಿವಿಮಾತು ಹೇಳಿದ್ದಾರೆ.

ಜಮ್ಮು ಕಾಶ್ಮೀರದ ಪೂಂಚ್ ಸೆಕ್ಟರ್‌ನಲ್ಲಿ ಮೂವರು ನಾಗರಿಕರನ್ನು ಸೇನೆಯು ವಿಚಾರಣೆಗಾಗಿ ವಶಕ್ಕೆ ಪಡೆದ ಬಳಿಕ ಅವರು ಶವವಾಗಿ ಪತ್ತೆಯಾದ ಪ್ರಕರಣದ ಹಿನ್ನೆಲೆಯಲ್ಲಿ ಅವರ ಈ ಮಾತುಗಳು ಬಂದಿವೆ. ಅವರು ಇಂದು ಜಮ್ಮುವಿಗೆ ಭೇಟಿ ನೀಡಿ, ಭಯೋತ್ಪಾದಕರು ಎರಡು ಸೇನಾ ವಾಹನಗಳ ಮೇಲೆ ಹೊಂಚುದಾಳಿ ನಡೆಸಿ ನಾಲ್ವರು ಯೋಧರ ಸಾವಿಗೆ ಕಾರಣವಾದ ತಾಣ ಹಾಗೂ ಅಲ್ಲಿನ ಭದ್ರತಾ ಸ್ಥಿತಿಗತಿಗಳನ್ನು ಪರಿಶೀಲಿಸಿದರು.

ಪ್ರತಿಯೊಬ್ಬ ಸೈನಿಕನೂ ನಮಗೆ ಕುಟುಂಬದ ಸದಸ್ಯರಿದ್ದಂತೆ. ಪ್ರತಿಯೊಬ್ಬ ಭಾರತೀಯನೂ ಈ ರೀತಿ ಭಾವಿಸುತ್ತಾನೆ. ಯಾರಾದರೂ ನಿಮ್ಮ ಮೇಲೆ ಕೆಟ್ಟ ದೃಷ್ಟಿ ಬೀರಿದರೆ ಅದನ್ನು ನಾವು ಸಹಿಸುವುದಿಲ್ಲ. ಅಂತಹ ದಾಳಿಗಳನ್ನು ನಿಲ್ಲಿಸುವಲ್ಲಿ ಭದ್ರತೆ ಮತ್ತು ಗುಪ್ತಚರ ಸಂಸ್ಥೆಗಳು ನಿರ್ಣಾಯಕ ಪಾತ್ರ ವಹಿಸುತ್ತವೆ. ಕಣ್ಗಾವಲು ಹೆಚ್ಚಿಸಲು ಯಾವುದೇ ಬೆಂಬಲ ಬೇಕಾದರೂ ಸರ್ಕಾರದಿಂದ ಒದಗಿಸಲಾಗುತ್ತದೆ. ನಮ್ಮ ಖಜಾನೆಯ ಬಾಗಿಲುಗಳು ಸಂಪೂರ್ಣವಾಗಿ ತೆರೆದಿವೆ ಎಂದು ಅವರು ಹೇಳಿದರು.

“ಇಂತಹ ದಾಳಿಗಳನ್ನು ಲಘುವಾಗಿ ತೆಗೆದುಕೊಳ್ಳಬಾರದು. ನೀವೆಲ್ಲರೂ ಜಾಗರೂಕರಾಗಿದ್ದೀರಿ ಎಂದು ನನಗೆ ತಿಳಿದಿದೆ, ಆದರೆ ಹೆಚ್ಚಿನ ಜಾಗರೂಕತೆಯ ಅಗತ್ಯವಿದೆ ಎಂದು ನಾನು ಭಾವಿಸುತ್ತೇನೆ. ನಿಮ್ಮ ಶೌರ್ಯವು ನಮಗೆ ಹೆಮ್ಮೆ ತರುತ್ತದೆ. ನಿಮ್ಮ ತ್ಯಾಗ, ನಿಮ್ಮ ಪ್ರಯತ್ನಗಳಿಗೆ ಯಾವುದೇ ಪರ್ಯಾಯವಿಲ್ಲ. ಅವು ಅಮೂಲ್ಯವಾದುದು. ಸೈನಿಕ ಹುತಾತ್ಮರಾದಾಗ, ನಾವು ಸ್ವಲ್ಪ ಪರಿಹಾರವನ್ನು ನೀಡಿದರೂ ಸಹ, ನಷ್ಟವನ್ನು ಸರಿದೂಗಿಸಲು ಸಾಧ್ಯವಿಲ್ಲ. ಸರ್ಕಾರ ನಿಮ್ಮೊಂದಿಗಿದೆ. ನಿಮ್ಮ ಯೋಗಕ್ಷೇಮ ಮತ್ತು ಭದ್ರತೆ ನಮ್ಮ ಆದ್ಯತೆಯ ಪಟ್ಟಿಯಲ್ಲಿ ಹೆಚ್ಚಿನದಾಗಿದೆ ಎಂದು ನಾನು ನಿಮಗೆ ಭರವಸೆ ನೀಡಲು ಬಯಸುತ್ತೇನೆ” ಎಂದು ಅವರು ಹೇಳಿದರು.

ಇಂದು ಮುಂಜಾನೆ ರಕ್ಷಣಾ ಸಚಿವರು ಜಮ್ಮುವಿಗೆ ಆಗಮಿಸಿದ್ದು, ಕೂಡಲೇ ರಜೌರಿಗೆ ತೆರಳಿದ್ದಾರೆ. ಹಲವಾರು ಸೈನಿಕರ ಸಾವಿಗೆ ಕಾರಣವಾದ ಸೇನಾ ಕಾರ್ಯಾಚರಣೆಗಳು ಹಾಗೂ ಪುನರಾವರ್ತಿತ ಲೋಪಗಳಿಗಾಗಿ ಬ್ರಿಗೇಡಿಯರ್ ಮಟ್ಟದ ಅಧಿಕಾರಿಯೊಬ್ಬರು ತನಿಖೆಯನ್ನು ಎದುರಿಸುತ್ತಿದ್ದಾರೆ. ಪೂಂಚ್ ಸೆಕ್ಟರ್‌ನಲ್ಲಿ ತನಿಖೆಗಾಗಿ ಸೇನೆಯ ವಶದಲ್ಲಿದ್ದ ಮೂವರು ನಾಗರಿಕರ ಸಾವಿನ ನಂತರ ಸ್ಥಳೀಯ ನಿವಾಸಿಗಳಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಸಿಂಗ್‌ ಅವರು ಸ್ಥಳೀಯ ನಿವಾಸಿಗಳು ಮತ್ತು ಮೃತ ನಾಗರಿಕರ ಕುಟುಂಬಗಳನ್ನು ಭೇಟಿ ಮಾಡುವ ಸಾಧ್ಯತೆಯಿದೆ. ಮಧ್ಯಾಹ್ನ 3 ಗಂಟೆಗೆ ಅವರು ಜಮ್ಮುವಿನ ರಾಜಭವನದಲ್ಲಿ ಉನ್ನತ ಮಟ್ಟದ ಭದ್ರತಾ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ.

ರಕ್ಷಣಾ ಸಚಿವರ ಭೇಟಿಯ ಹಿನ್ನೆಲೆಯಲ್ಲಿ ಜಮ್ಮುವಿನಾದ್ಯಂತ ಭದ್ರತೆಯನ್ನು ಹೆಚ್ಚಿಸಲಾಗಿದೆ. ಇದಕ್ಕೂ ಮುನ್ನ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಕೇಂದ್ರಾಡಳಿತ ಪ್ರದೇಶಕ್ಕೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿದರು.

ಇದನ್ನೂ ಓದಿ: ಕಾಶ್ಮೀರದಲ್ಲಿ ಉಗ್ರರಿಗೆ ಚೀನಾ ಕುಮ್ಮಕ್ಕು; ಸೈನಿಕರ ಮೇಲೆ ದಾಳಿಗೆ ಚೀನಾ ಶಸ್ತ್ರಾಸ್ತ್ರಗಳ ಬಳಕೆ!

Exit mobile version