ಅಹಮದಾಬಾದ್: ಬಂಧಿತ ಜಾರ್ಖಂಡ್‌ನ ಐಎಎಸ್ ಅಧಿಕಾರಿ ಪೂಜಾ ಸಿಂಘಾಲ್ ಮತ್ತು ಗೃಹ ಸಚಿವ ಅಮಿತ್ ಶಾ ಜತೆಗಿರುವ ಫೋಟೊವೊಂದನ್ನು ಟ್ವಿಟರ್‌ನಲ್ಲಿ ಪ್ರಕಟಿಸಿ ತಪ್ಪು ಮಾಹಿತಿ ನೀಡಿದ ಆರೋಪದಲ್ಲಿ ಚಿತ್ರ ನಿರ್ಮಾಣ ಅವಿನಾಶ್ ದಾಸ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ದಾಸ್ ಅವರು ತನ್ನ ಕಾರಿನಲ್ಲಿ ಕಚೇರಿಗೆ ಹೋಗುತ್ತಿದ್ದಾಗ ಅಹಮದಾಬಾದ್‌ನ ಕ್ರೈಂ ಬ್ರಾಂಚ್ ಪೊಲೀಸರು ಅವರನ್ನು ಬಂಧಿಸಿದ್ದಾರೆ.
ಟ್ವಿಟರ್‌ನಲ್ಲಿ ಪ್ರಕಟಿಸಿದ ಪೂಜಾ ಸಿಂಘಾಲ್ ಮತ್ತು ಅಮಿತ್ ಶಾ ಅವರ ಚಿತ್ರದಲ್ಲಿ ಇದು ಬಂಧನಕ್ಕೆ ಮೊದಲು ತೆಗೆದ ಚಿತ್ರ ಎಂದು ಮಾಹಿತಿ ನೀಡಿದ್ದಾರೆ. ಇದರಲ್ಲಿ ಬಂಧನಕ್ಕೆ ಮೊದಲು ಇವರು ಹೀಗೆ ಜತೆಯಾಗಿದ್ದರು ಎಂಬ ತಪ್ಪು ಮಾಹಿತಿ ಕೊಡುವ ಹುನ್ನಾರ ಅಡಗಿದೆ ಎಂದು ಆಪಾದಿಸಲಾಗಿದೆ. ಈ ನಡುವೆ, ದಾಸ್ ಅವರು ತ್ರಿವರ್ಣ ಬಣ್ಣದ ಬಟ್ಟೆಯನ್ನು ಸುತ್ತಿಕೊಂಡ ಮಹಿಳೆಯ ಆಕ್ಷೇಪಾರ್ಹ ಚಿತ್ರವನ್ನು ಕೂಡಾ ಪೋಸ್ಟ್ ಮಾಡಿದ್ದರು.
ಐಎಎಸ್ ಅಧಿಕಾರಿಯಾಗಿದ್ದ ಪೂಜಾ ಸಿಂಘಾಲ್ ಅವರನ್ನು ಹಣ ಲೇವಾದೇವಿ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಬಂಧಿಸಿತ್ತು. ಅವರ ಮನೆಯಿಂದ ದೊಡ್ಡ ಪ್ರಮಾಣದಲ್ಲಿ ಹಣವನ್ನು ವಶಪಡಿಸಿಕೊಳ್ಳಲಾಗಿತ್ತು. ಈ ದಾಳಿಯ ಚಿತ್ರಗಳು ಅಂದು ವೈರಲ್ ಆಗಿದ್ದವು.
ಅನಾರ್ಕಲಿ ಆಫ್ ಆರಾಹ್ ಸೇರಿದಂತೆ ಕೆಲವು ಚಿತ್ರಗಳನ್ನು ನಿರ್ಮಿಸಿದ್ದ ಈ ನಿರ್ಮಾಪಕನ ವಿರುದ್ಧ ಮೇ ೧೪ರಂದೇ ಅಹಮದಾಬಾದ್‌ನ ಪೊಲೀಸ್ ಕ್ರೈಂ ಬ್ರಾಂಚ್ ಪ್ರಕರಣ ದಾಖಲಿಸಿತ್ತು. ದಾಸ್ ಸೆಷನ್ಸ್ ಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಗುಜರಾತ್ ಹೈಕೋರ್ಟ್ ನಿರೀಕ್ಷಣಾ ಜಾಮೀನು ನಿರಾಕರಿಸಿತ್ತು.
ಅವಿನಾಶ್ ದಾಸ್ ಹಂಚಿಕೊಂಡ ಚಿತ್ರ ಅಂದು ಭಾರಿ ವಿವಾದಕ್ಕೆ ಕಾರಣವಾಗಿತ್ತು. ಅಮಿತ್ ಶಾ ವಿರೋಧಿಗಳು ಇದನ್ನು ಸಾಕಷ್ಟು ವೈರಲ್ ಮಾಡಿದ್ದರು. ಆದರೆ, ನಿಜವಾಗಿ ಅದು ಬಂಧನದ ಆಸುಪಾಸಿನಲ್ಲಿ ತೆಗೆದ ಚಿತ್ರವಾಗಿರಲಿಲ್ಲ.
ಇದನ್ನೂ ಓದಿ| BJP Executive | ದೇಶ ಬಲಿಷ್ಠವಾಗಲು ಬಿಜೆಪಿ ಇನ್ನೂ 30 ವರ್ಷ ಅಧಿಕಾರದಲ್ಲಿರಬೇಕೆಂದ ಅಮಿತ್ ಶಾ