ನವದೆಹಲಿ: ಯುಪಿಎ (UPA) ಆಡಳಿತಾವಧಿಯ ಆರ್ಥಿಕ ಅವ್ಯವಸ್ಥೆಯ ಕುರಿತು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Finance Minister Nirmala Sitharaman) ಅವರು ಲೋಕಸಭೆಯಲ್ಲಿ ಗುರುವಾರ ಶ್ವೇತ ಪತ್ರ (White Paper) ಮಂಡಿಸಿದರು. ಈ ಶ್ವೇತಪತ್ರದಲ್ಲಿ ಯುಪಿಎ ಆಡಳಿತದ 10 ವರ್ಷಗಳು ಮತ್ತು ಎನ್‌ಡಿಎ (NDA) ಆಡಳಿತದ 10 ವರ್ಷಗಳನ್ನು ತುಲನೆ ಮಾಡಲಾಗಿದೆ. ವಿತ್ತ ಸಚಿವರು ಯುಪಿಎ ಆಡಳಿತದಲ್ಲಿ ರಾಷ್ಟ್ರವು ಆರ್ಥಿಕವಾಗಿ ಭಾರೀ ನಷ್ಟವನ್ನು ಅನುಭವಿಸಿತು ಎಂದು ಚರ್ಚಿಸಿದ್ದಾರೆ. ಇಲ್ಲೂ ಕಾಂಗ್ರೆಸ್ ಪಕ್ಷವನ್ನು ಹಿಗ್ಗಾ ಮುಗ್ಗಾ ಟೀಕಿಸಿಲಾಗಿದೆ. ಇನ್ನು ಕೇಂದ್ರ ಸರ್ಕಾರದ ಶ್ವೇತ ಪತ್ರಕ್ಕೆ ಪ್ರತಿಯಾಗಿ ಕಾಂಗ್ರೆಸ್ ಪಕ್ಷವು ಬ್ಲ್ಯಾಕ್ ಪೇಪರ್(ಕಪ್ಪು ಪತ್ರ) ಮಂಡಿಸಿದೆ. ಇದರಲ್ಲಿ ನರೇಂದ್ರ ಮೋದಿ ಸರ್ಕಾರದ ವೈಫಲ್ಯಗಳನ್ನು ಪಟ್ಟಿ ಮಾಡಲಾಗಿದೆ.
ನಿರ್ಮಲಾ ಸೀತಾರಾಮನ್ ಅವರು ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಶ್ವೇತಪತ್ರವನ್ನು ಮಂಡಿಸಿದರು. ಇದರಲ್ಲಿ ಯುಪಿಎ ಸರ್ಕಾರದ ವೈಫಲ್ಯಗಳ ಪಟ್ಟಿ ಮಾಡಲಾಗಿದೆ. ಆರ್ಥಿಕತೆಯನ್ನು ಬಲಪಡಿಸಲು, ರಾಷ್ಟ್ರದ ಪ್ರತಿಷ್ಠೆಯನ್ನು ಹೆಚ್ಚಿಸಲು ಮತ್ತು ಜನರ ಮನಸ್ಸಿನಲ್ಲಿ ಭರವಸೆ ಮೂಡಿಸಲು ಎನ್‌ಡಿಎ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆಯೂ ಹೇಳಲಾಗಿದೆ.
Union Finance Minister Nirmala Sitharaman lays on the Table a copy of the 'White Paper on the Indian Economy' today, in Lok Sabha pic.twitter.com/oYFwUHtSeE
— ANI (@ANI) February 8, 2024
ಶ್ವೇತಪತ್ರದಲ್ಲಿ ಏನೇನಿದೆ?
-ಯುಪಿಎ ಸರ್ಕಾರದ ಅಡಿಯಲ್ಲಿ ಭಾರತದ ಸ್ಥೂಲ ಆರ್ಥಿಕ ಪರಿಸ್ಥಿತಿಯನ್ನು ಶ್ವೇತಪತ್ರವು ಚರ್ಚಿಸಿದೆ.
-ಯುಪಿಎ ಆಡಳಿತದಲ್ಲಿ ಎರಡಂಕಿಯ ಹಣದುಬ್ಬರ.
-ಉತ್ಕರ್ಷದ ಹಂತದಲ್ಲಿ ಅತಿಯಾದ ಸಾಲ
-ಹದಗೆಟ್ಟ ಬ್ಯಾಂಕಿಂಗ್ ವಲಯ
-ನೀತಿ ಅನಿಶ್ಚಿತತೆಯಿಂದ ಭಾರತದ ವ್ಯಾಪಾರ ವಾತಾವರಣ ನಾಶ.
-ಭರವಸೆಯನ್ನೇ ಕಳೆದುಕೊಂಡಿದ್ದ ದೇಶವಾಸಿಗಳು
-ವಾಜಪೇಯಿ ಸರ್ಕಾರ ಅತ್ಯುತ್ತಮ ಆರ್ಥಿಕ ಸ್ಥಿತಿಯನ್ನು ಹಸ್ತಾಂತರಿಸಿದ್ದರು.
-ಸದೃಢ ಆರ್ಥಿಕ ಸ್ಥಿತಿಯ ಹೊರತಾಗಿಯೂ ಯುಪಿಎ ದೇಶದ ಅರ್ಥವ್ಯವಸ್ಥೆಯನ್ನು ಹಾಳು ಮಾಡಿತು.
-2014ರಿಂದ 2013ರವರೆಗಿನ ಸಾರ್ವಜನಿಕ ಹಣಕಾಸಿನ ದುರುಪಯೋಗ
-ದೂರದೃಷ್ಟಿಯ ನಿರ್ವಹಣೆಯ ಕೊರತೆ
-ಸಾಕಷ್ಟು ಹಗರಣಗಳಿಂದ ದೇಶದ ಖಜಾನೆಗೆ ನಷ್ಟ
-2014ರಲ್ಲಿ ಎನ್‌ಡಿಎ ಸರ್ಕಾರಕ್ಕೆ ಅಸ್ವಸ್ಥ ಆರ್ಥಿಕ ವ್ಯವಸ್ಥೆ ದೊರೆಯಿತು.
-ದೇಶದ ಆರ್ಥಿಕ ವ್ಯವಸ್ಥೆಯನ್ನು ಪುನರ್‌ನಿರ್ಮಾಣ ಮಾಡಲಾಯಿತು.
-ಈ ಎಲ್ಲ ಸಂಗತಿಗಳ ಬಗ್ಗೆ ಶ್ವೇತ ಪತ್ರದಲ್ಲಿ ಮಾಹಿತಿ ನೀಡಲಾಗಿದೆ.
ಕಾಂಗ್ರೆಸ್‌ನಿಂದ ಬ್ಲ್ಯಾಕ್ ಪೇಪರ್!
ಯುಪಿಎ ಕಾಲದ ಆರ್ಥಿಕ ದುರಾಡಳಿತ ಬಗ್ಗೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶ್ವೇತ ಪತ್ರ ಮಂಡಿಸುತ್ತಿದ್ದಂತೆ ಕಾಂಗ್ರೆಸ್ ನರೇಂದ್ರ ಮೋದಿ ಸರ್ಕಾರದ ಆರ್ಥಿಕ ವೈಫಲ್ಯಗಳನ್ನು ಪಟ್ಟಿ ಮಾಡುವ ಬ್ಲ್ಯಾಕ್ ಪೇಪರ್ ಹೊರ ತಂದಿದ್ದಾರೆ. ಎಷ್ಟು ಜನರಿಗೆ ಉದ್ಯೋಗ ಸಿಕ್ಕಿದೆ ಎಂದು ಸರ್ಕಾರ ಎಂದಿಗೂ ಹೇಳುವುದಿಲ್ಲ. ಅವರು ಉದ್ಯೋಗ ಖಾತ್ರಿ ಯೋಜನೆಯ ಹಣವನ್ನು ಬಿಡುಗಡೆ ಮಾಡುತ್ತಿದ್ದಾರೆ. ಅವರು ರಾಜ್ಯಗಳ ವಿರುದ್ಧ ತಾರತಮ್ಯ ಮಾಡುತ್ತಿದ್ದಾರೆ. 10 ವರ್ಷಗಳ ಬಳಿಕವೂ ಮೋದಿ ಈಗಲೂ ಕಾಂಗ್ರೆಸ್ ಟಾರ್ಗೆಟ್ ಮಾಡುತ್ತಿದ್ದಾರೆಯೇ ಹೊರತು ತಮ್ಮದನ್ನು ಏನೂ ಹೇಳುತ್ತಿಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಅವರು ವಾಗ್ದಾಳಿ ನಡೆಸಿದ್ದಾರೆ.
10 ವರ್ಷ ಅಧಿಕಾರದಲ್ಲಿದ್ದರೂ ತಮ್ಮ ಬಗ್ಗೆ ಮಾತನಾಡುವ ಬದಲು ಕಾಂಗ್ರೆಸ್ ಪಕ್ಷವನ್ನು ಮಾತ್ರ ಟೀಕಿಸುತ್ತಾರೆ.ಇಂದಿಗೂ ಬೆಲೆ ಏರಿಕೆ, ನಿರುದ್ಯೋಗ, ಆರ್ಥಿಕ ಅಸಮಾನತೆಯ ಬಗ್ಗೆ ಮಾತನಾಡಿದ್ದಾರೆಯೇ? ಮೋದಿಯ ಗ್ಯಾರಂಟಿ ಎನ್ನುವುದು ಕೇವಲ ಸುಳ್ಳುಗಳ ಕಂತೆಯಾಗಿದೆ ಎಂದು ಖರ್ಗೆ ಅವರು ಟೀಕಿಸಿದರು.
ಈ ಸುದ್ದಿಯನ್ನೂ ಓದಿ: ಎನ್‌ಡಿಎ vs ಯುಪಿಎ; ಶ್ವೇತಪತ್ರ ಹೊರಡಿಸಲು ಅಧಿವೇಶನದ ಅವಧಿ 1 ದಿನ ವಿಸ್ತರಿಸಿದ ಕೇಂದ್ರ