Site icon Vistara News

ದ್ರೌಪದಿ ಮುರ್ಮು ಅವಹೇಳನ: ರಾಮ್ ಗೋಪಾಲ್ ವರ್ಮಾ ವಿರುದ್ಧ ಕೇಸ್

Ram Gopal Varma

ನವ ದೆಹಲಿ: ರಾಷ್ಟ್ರಪತಿ ಚುನಾವಣೆಗೆ ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕಾಗಿ ಚಲನಚಿತ್ರ ನಿರ್ಮಾಪಕ ರಾಮ್ ಗೋಪಾಲ್ ವರ್ಮಾ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಾಗಿ ಹೈದರಾಬಾದ್ ಪೊಲೀಸರು ಶುಕ್ರವಾರ ಹೇಳಿದ್ದಾರೆ.

ತೆಲಂಗಾಣದ ಭಾರತೀಯ ಜನತಾ ಪಕ್ಷದ ನಾಯಕ ಜಿ ನಾರಾಯಣ ರೆಡ್ಡಿ ಅವರು ಅಬಿಡ್ಸ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ದ್ರೌಪದಿ ಮುರ್ಮು ಅವರ ಬಗ್ಗೆ ಆರ್‌ಜಿವಿ ಸಾಮಾಜಿಕ ಮಾಧ್ಯಮ ವೇದಿಕೆ ಟ್ವಿಟರ್‌ನಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

“ನಾವು ದೂರನ್ನು ಸ್ವೀಕರಿಸಿ ಕಾನೂನು ಅಭಿಪ್ರಾಯಕ್ಕಾಗಿ ಕಳುಹಿಸಿದ್ದೇವೆ. ಕಾನೂನು ಅಭಿಪ್ರಾಯವನ್ನು ಸ್ವೀಕರಿಸಿದ ನಂತರ, ವರ್ಮಾ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯಿದೆಯಡಿ ಪ್ರಕರಣ ದಾಖಲಿಸುತ್ತೇವೆ ಎಂದು ಅಬಿಡ್ಸ್ ಪೊಲೀಸ್ ಇನ್ಸ್‌ಪೆಕ್ಟರ್ ಪ್ರಸಾದ ರಾವ್ ತಿಳಿಸಿದರು.

“ದ್ರೌಪದಿ ರಾಷ್ಟ್ರಪತಿಯಾದರೆ ಪಾಂಡವರು ಯಾರು? ಮತ್ತು ಮುಖ್ಯವಾಗಿ, ಕೌರವರು ಯಾರು?” ಎಂದು ವರ್ಮಾ ಟ್ವೀಟ್ ಮಾಡಿದ್ದರು. ವರ್ಮಾ ಅವರ ಕಾಮೆಂಟ್‌ ಹಿರಿಯ ಮಹಿಳಾ ರಾಜಕಾರಣಿಗೆ ಅತ್ಯಂತ ಅವಮಾನಕರವಾಗಿವೆ ಎಂದು ರೆಡ್ಡಿ ತಮ್ಮ ದೂರಿನಲ್ಲಿ ಹೇಳಿದ್ದಾರೆ.

ಈ ನಡುವೆ, ತಮ್ಮ ಟ್ವಿಟ್ಟರ್ ಪೋಸ್ಟ್ “ಯಾರ ಭಾವನೆಗಳನ್ನೂ ನೋಯಿಸುವ ಉದ್ದೇಶವನ್ನು ಹೊಂದಿಲ್ಲ. ಇದನ್ನು ವಿನೋದದಿಂದ ಹೇಳಲಾಗಿದೆಯೇ ಹೊರತು ಬೇರೆ ರೀತಿಯಲ್ಲಿ ಉದ್ದೇಶಿಸಿಲ್ಲ. ಮಹಾಭಾರತದಲ್ಲಿ ದ್ರೌಪದಿ ನನ್ನ ನೆಚ್ಚಿನ ಪಾತ್ರ. ಈ ಹೆಸರು ಅಪರೂಪವಾಗಿರುವುದರಿಂದ, ನಾನು ಅದಕ್ಕೆ ಸಂಬಂಧಿಸಿದ ಪಾತ್ರಗಳನ್ನು ನೆನಪಿಸಿಕೊಂಡಿದ್ದೇನೆ. ಯಾರ ಭಾವನೆಗಳಿಗೂ ಧಕ್ಕೆ ತರುವ ಉದ್ದೇಶ ಇಲ್ಲ’ʼ ಎಂದು ಆರ್‌ಜಿವಿ ಸಮಜಾಯಿಷಿ ನೀಡಿ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ದಿಶಾ ಸಿನಿಮಾ ಹೆಸರಲ್ಲಿ ವಂಚನೆ; ನಿರ್ದೇಶಕ ರಾಮ್‌ ಗೋಪಾಲ್‌ ವರ್ಮಾ ವಿರುದ್ಧ ಕೇಸ್‌

Exit mobile version