Site icon Vistara News

Smriti Singh: ಹುತಾತ್ಮ ಯೋಧನ ಪತ್ನಿ ಬಗ್ಗೆ ಅಶ್ಲೀಲ ಕಮೆಂಟ್;‌ ಅಹ್ಮದ್‌ ವಿರುದ್ಧ ಎಫ್‌ಐಆರ್

Smriti Singh

Rs 1 Crore Army Insurance Fund Divided Between Captain Anshuman Singhs Parents And Wife Smriti Singh

ನವದೆಹಲಿ: ಕಳೆದ ವರ್ಷ ಗಡಿಯಲ್ಲಿ ಹುತಾತ್ಮರಾದ ಯೋಧ, ಕ್ಯಾಪ್ಟನ್‌ ಅನ್ಶುಮಾನ್‌ ಸಿಂಗ್‌ (Captain Anshuman Singh) ಎಂಬುವರ ಪತ್ನಿ ಸ್ಮೃತಿ ಸಿಂಗ್‌ (Smriti Singh) ಬಗ್ಗೆ ಅಹ್ಮದ್‌ ಕೆ. ಎಂಬಾತನು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಕಮೆಂಟ್‌ ಮಾಡಿದ್ದು, ಆತನ ವಿರುದ್ಧ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಎಫ್‌ಐಆರ್‌ ದಾಖಲಿಸಲಾಗಿದೆ. ಅಹ್ಮದ್‌ ಕೆ ಎಂಬಾತನ ವಿರುದ್ಧ ದೆಹಲಿ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ.

“ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲವಾಗಿ ಕಮೆಂಟ್‌ ಮಾಡಿದ ವ್ಯಕ್ತಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (BNS) ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ” ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಅಶ್ಲೀಲ ಕಮೆಂಟ್‌ಗೆ ಸಂಬಂಧಿಸಿದಂತೆ ರಾಷ್ಟ್ರೀಯ ಮಹಿಳಾ ಆಯೋಗವು ದೂರು ನೀಡಿದ ಹಿನ್ನೆಲೆಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ.

ಪತಿಯ ಕುರಿತು ಸ್ಮೃತಿ ಸಿಂಗ್‌ ಮಾತು

ಕಳೆದ ವರ್ಷದ ಜುಲೈನಲ್ಲಿ ಸಿಯಾಚಿನ್‌ನಲ್ಲಿ ಹುತಾತ್ಮನಾದ ಕ್ಯಾಪ್ಟನ್‌ ಅನ್ಶುಮಾನ್‌ ಸಿಂಗ್‌ ಅವರಿಗೆ ಕೆಲ ದಿನಗಳ ಹಿಂದಷ್ಟೇ ಮರಣೋತ್ತರವಾಗಿ ದೇಶದ ಎರಡನೇ ಗ್ಯಾಲಂಟ್ರಿ ಪ್ರಶಸ್ತಿಯಾದ ಕೀರ್ತಿ ಚಕ್ರ ಪ್ರಶಸ್ತಿ (Kirti Chakra Award) ಘೋಷಿಸಲಾಗಿದ್ದು, ಪತಿಯ ಪರವಾಗಿ ಅವರ ಪತ್ನಿ ಸ್ಮೃತಿ ಸಿಂಗ್‌ ಅವರು ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಸ್ಮೃತಿ ಸಿಂಗ್‌ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕೀರ್ತಿ ಚಕ್ರ ಪ್ರಶಸ್ತಿ ನೀಡಿದ್ದಾರೆ. ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾಧ್ಯಮದವರೊಂದಿಗೆ ಸ್ಮೃತಿ ಸಿಂಗ್‌ ಮಾತನಾಡಿದ್ದು, ಪತಿಯ ಜತೆ ಕಳೆದ ದಿನಗಳನ್ನು ನೆನೆದು ಕಣ್ಣೀರು ಹಾಕಿದ್ದರು. ಈ ವಿಡಿಯೊ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು. ಆದರೆ, ಅಹ್ಮದ್‌ ಕೆ ಎಂಬಾತನು ಸ್ಮೃತಿ ಸಿಂಗ್‌ ಬಗ್ಗೆ ಅವಹೇಳನಕಾರಿಯಾಗಿ ಕಮೆಂಟ್‌ ಮಾಡಿದ್ದಾನೆ. ಈತನ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂಬುದಾಗಿ ಜನ ಆಗ್ರಹಿಸುತ್ತಿದ್ದಾರೆ.

ಬಂಧಿಸುವಂತೆ ಮಹಿಳಾ ಆಯೋಗ ಆಗ್ರಹ

ಸ್ಮೃತಿ ಸಿಂಗ್‌ ಅವರಿಗೆ ಅವಹೇಳನಕಾರಿಯಾಗಿ ಕಮೆಂಟ್‌ ಮಾಡಿದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಮಹಿಳಾ ಆಯೋಗವು ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿತ್ತು. “ಸ್ಮೃತಿ ಸಿಂಗ್‌ ಅವರಿಗೆ ಅವಹೇಳನಕಾರಿಯಾಗಿ ಕಮೆಂಟ್‌ ಮಾಡಿದವನನ್ನು ದೆಹಲಿಯ ಅಹ್ಮದ್‌ ಕೆ. ಎಂಬುದಾಗಿ ಗುರುತಿಸಲಾಗಿದೆ. ಈತನ ವಿರುದ್ಧ ಪೊಲೀಸರು ಕೂಡಲೇ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಆರೋಪಿಯನ್ನು ಬಂಧಿಸಬೇಕು. ಈ ಕುರಿತು ಮೂರು ದಿನಗಳಲ್ಲಿ ವರದಿ ನೀಡಬೇಕು” ಎಂಬುದಾಗಿ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಅವರು ದೆಹಲಿ ಪೊಲೀಸರಿಗೆ ನೋಟಿಸ್‌ ನೀಡಿದ್ದರು.

2023ರ ಜುಲೈ 19ರಂದು ಸಿಯಾಚಿನ್‌ನಲ್ಲಿ ಅಗ್ನಿ ದುರಂತ ಸಂಭವಿಸಿತ್ತು. ಬೆಳಗಿನ ಜಾವ ಭಾರತೀಯ ಸೇನೆಯ ಶಸ್ತ್ರಾಸ್ತ್ರಗಳನ್ನು ಇರಿಸುವ ನೆಲೆಯಲ್ಲಿ ಶಾರ್ಟ್‌ ಸರ್ಕ್ಯೂಟ್‌ನಿಂದಾಗಿ ಬೆಂಕಿ ಹೊತ್ತಿಕೊಂಡಿತ್ತು. ಫೈಬರ್‌ ಗ್ಲಾಸ್‌ನ ಕೋಣೆಯಲ್ಲಿ ಸಿಲುಕಿದ್ದ ಹಲವು ಸೈನಿಕರನ್ನು ಕ್ಯಾಪ್ಟನ್‌ ಅನ್ಶುಮಾನ್ ಸಿಂಗ್‌ ಅವರು ರಕ್ಷಣೆ ಮಾಡಿದ್ದರು. ಆದರೆ, ರಕ್ಷಣೆ ಮಾಡಿದ ಬಳಿಕ ಅವರೇ ಅಗ್ನಿಯ ಕೆನ್ನಾಲಗೆಗೆ ಸಿಲುಕಿ ಹುತಾತ್ಮರಾಗಿದ್ದರು.

ಇದನ್ನೂ ಓದಿ: Smriti Singh: ಮನೆ, ಮಗುವಿನ ಕನಸಿತ್ತು, ಎಲ್ಲವೂ ನುಚ್ಚು ನೂರಾಯ್ತು; ಹುತಾತ್ಮ ಯೋಧನ ಪತ್ನಿ ಕಣ್ಣೀರು!

Exit mobile version