Site icon Vistara News

Fire Accident: ಲಂಡನ್‌ನಲ್ಲಿ ಪಟಾಕಿ ಬೆಂಕಿಗೆ ಭಾರತೀಯ ಮೂಲದ ಕುಟುಂಬ ಭಸ್ಮ, 5 ಮಂದಿ ಬಲಿ

london fire tragedy

ಲಂಡನ್​​: ಭಾರತೀಯ ಮೂಲದ ಒಂದೇ ಕುಟುಂಬದ ಐವರು ಅಗ್ನಿ ದುರಂತದಲ್ಲಿ (Fire Accident, Fire tragedy) ಸಾವನ್ನಪ್ಪಿದ ಘಟನೆ ಪಶ್ಚಿಮ ಲಂಡನ್​ನಲ್ಲಿ (London fire tragedy) ಬೆಳಕಿಗೆ ಬಂದಿದೆ. ಸಾವನ್ನಪ್ಪಿದ ಐವರಲ್ಲಿ ಮೂವರು ಮಕ್ಕಳಿದ್ದರು ಎಂದು ಗುರುತಿಸಲಾಗಿದೆ.

ಭಾನುವಾರ ರಾತ್ರಿ ಹೀಥ್ರೂ ವಿಮಾನ ನಿಲ್ದಾಣದ ಸಮೀಪದಲ್ಲಿರುವ ಹೌನ್​ಸ್ಲೋ ಬಳಿ ದೀಪಾವಳಿ ಆಚರಣೆ ವೇಳೆ ಈ ದುರಂತ ಸಂಭವಿಸಿದೆ. ಒಂದೇ ಕುಟುಂಬದ 5 ಸಾವನ್ನಪ್ಪಿದ್ದಾರೆ. ಮತ್ತೊಬ್ಬ ವ್ಯಕ್ತಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಕುಟುಂಬದ ಮಾಹಿತಿ ಹಾಗೂ ಹೆಸರುಗಳು ತಿಳಿದುಬರಬೇಕಿದೆ.

“ಬೆಂಕಿಗೆ ಬಲಿಯಾದ ಕುಟುಂಬ ಸಂಜೆಗೆ ಮೊದಲು ದೀಪಾವಳಿ ಆಚರಿಸಿದ್ದು, ಪಟಾಕಿ ಸಿಡಿಸುತ್ತಾ ಸಂಭ್ರಮಿಸಿದ್ದು ಕಂಡುಬಂದಿದೆ. ಆದರೆ ಅದಕ್ಕೂ ಬೆಂಕಿಗೂ ಸಂಬಂಧವಿದೆಯೇ ಎಂದು ಹೇಳಲು ಸಾಧ್ಯವಿಲ್ಲ” ಎಂದು ಸ್ಥಳೀಯ ಮೂಲಗಳು ತಿಳಿಸಿವೆ. ಬೆಂಕಿಯು ನೆಲಮಹಡಿಯಿಂದ ಮೊದಲ ಮಹಡಿಯ ತನಕ ಹೊತ್ತಿ ಉರಿದಿದೆ. ಹೀಗಾಗಿ ಕೆಳಗೆ ಬಂದು ಪಾರಾಗಲು ಸಾಧ್ಯವಿಲ್ಲದೆ ಬೆಂಕಿಗೆ ಸಿಲುಕಿ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ.

ರಾತ್ರಿ 8 ಗಂಟೆ ಬಳಿಕ ಈ ಮನೆಯವರು ಭಾರಿ ಪ್ರಮಾಣದಲ್ಲಿ ಪಟಾಕಿ ಸಿಡಿಸುತ್ತಿರುವುದನ್ನು ಸ್ಥಳೀಯರು ಗಮನಿಸಿದ್ದರು. ʼಆದರೆ ಅದು ದೀಪಾವಳಿ ಸೆಲೆಬ್ರೇಶನ್‌ನಂತೆ ಕಾಣದೆ, ಅಸಹಜ ಪ್ರಮಾಣದಲ್ಲಿತ್ತು. ಅಷ್ಟೊಂದು ಪ್ರಮಾಣದಲ್ಲಿ ಸಿಡಿಸುವುದನ್ನು ನಾನು ನೋಡಿಲ್ಲʼ ಎಂದು ಬೇರೊಬ್ಬರು ಹೇಳಿದರು.

ಲಂಡನ್‌ನ ಮೇಯರ್ ಸಾದಿಕ್ ಖಾನ್, “ಇದೊಂದು ಗಂಭೀರ ದುರಂತʼʼ ಎಂದಿದ್ದಾರೆ. ʼʼಬೆಂಕಿಗೆ ಬಲಿಯಾದವರು, ಅವರ ಪ್ರೀತಿಪಾತ್ರರು ಮತ್ತು ವ್ಯಾಪಕ ಸಮುದಾಯದೊಂದಿಗೆ ನಾವು ಇದ್ದೇವೆ” ಎಂದಿದ್ದಾರೆ. ಲಂಡನ್ ಅಗ್ನಿಶಾಮಕ ಕಮಿಷನರ್ ಆಂಡಿ ರೋ, “ಇದು ಭಯಾನಕ ದುಃಖದ ಘಟನೆಯಾಗಿದೆ. ಲಂಡನ್ ಅಗ್ನಿಶಾಮಕ ದಳದ ನಮ್ಮೆಲ್ಲರ ಆಲೋಚನೆಗಳು ಈ ಕಷ್ಟದ ಸಮಯದಲ್ಲಿ ಕುಟುಂಬ, ಸ್ನೇಹಿತರು ಮತ್ತು ಪೀಡಿತರೊಂದಿಗೆ ಇವೆʼʼ ಎಂದಿದ್ದಾರೆ.

ಇದನ್ನೂ ಓದಿ: Fire Accident: ಹೈದರಾಬಾದ್‌ನಲ್ಲಿ ಅಗ್ನಿ ಆಕಸ್ಮಿಕ, 9 ಜನರ ದಾರುಣ ಸಾವು

Exit mobile version