Site icon Vistara News

Fire Accident: ರಾಸಾಯನಿಕ ಕಾರ್ಖಾನೆಯಲ್ಲಿ ಬೆಂಕಿ ಅವಘಡ; ಓರ್ವ ಸಾವು, ನಾಲ್ಕು ಮಂದಿಗೆ ಗಾಯ

fire accident

fire accident

ಮುಂಬೈ: ಮಹಾರಾಷ್ಟ್ರದ ರಾಸಾಯನಿಕ ಕಾರ್ಖಾನೆಯೊಂದರಲ್ಲಿ (Chemical Factory) ಸಂಭವಿಸಿದ ಅಗ್ನಿ ಅವಘಡದಲ್ಲಿ (Fire accident) ಓರ್ವ ಸಾವನ್ನಪ್ಪಿದ್ದು ನಾಲ್ಕು ಮಂದಿಗೆ ಗಂಭೀರ ಗಾಯಗಳಾಗಿವೆ. ಥಾಣೆಯ ಬದ್ಲಾಪುರದ ಎಂಐಡಿಸಿಯಲ್ಲಿರುವ ರಾಸಾಯನಿಕ ಕಾರ್ಖಾನೆಯಲ್ಲಿ ಈ ಅವಘಡ ಸಂಭವಿಸಿದೆ. ಬೆಂಕಿಯ ತೀವ್ರತೆಗೆ ಕಾರ್ಖಾನೆಯ ಹೊರಗೆ ನಿಲ್ಲಿಸಿದ ವಾಹನಗಳೂ ಆಹುತಿಯಾಗಿವೆ.

ಬೆಂಕಿ ಹತ್ತಿಕೊಂಡ ನಿಖರ ಕಾರಣ ಇನ್ನು ತಿಳಿದು ಬಂದಿಲ್ಲ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಅಗ್ನಿಶಾಮಕ ದಳದವರು ತಕ್ಷಣ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಿಯಂತ್ರಿಸಲು ಶ್ರಮಿಸಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ. ಈ ರಾಸಾಯನಿಕ ಕಾರ್ಖಾನೆಯ ಒಂದು ವಿಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು ಮತ್ತು ಇಡೀ ಆವರಣವನ್ನು ವೇಗವಾಗಿ ವ್ಯಾಪಿಸಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಬೆಂಕಿ ಕಾಣಿಒಸಿಕೊಂಡ ತಕ್ಷಣ ಕಂಪೆನಿಯ ತುರ್ತು ಪ್ರತಿಕ್ರಿಯೆ ತಂಡವು ಕಾರ್ಯಪ್ರವೃತ್ತವಾಗಿ ಅಗ್ನಿಶಾಮಕ ತಂಡಕ್ಕೆ ಮಾಹಿತಿ ನೀಡಿತ್ತು.

ದುರದೃಷ್ಟವಶಾತ್ ಅಗ್ನಿಶಾಮಕ ತಂಡದ ಪ್ರಯತ್ನಗಳ ಹೊರತಾಗಿಯೂ ಘಟನೆಯಲ್ಲಿ ಓರ್ವ ವ್ಯಕ್ತಿ ಮೃತಪಟ್ಟರೆ ಇತರ ನಾಲ್ವರು ಗಾಯಗೊಂಡಿದ್ದಾರೆ. ಅವರನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಸುಮಾರು ಒಂದು ಕಿ.ಮೀ. ವ್ಯಾಪ್ತಿಗೆ ಈ ಸ್ಫೋಟದ ಶಬ್ದ ಕೇಳಿಸಿದೆ. ಬೆಳಗ್ಗೆ ಸುಮಾರು 4.30ರ ವೇಳೆಗೆ ಈ ಅವಘಡ ನಡೆದಿದೆ.

ಮತ್ತೊಂದು ಘಟನೆಯಲ್ಲಿ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ವಸಾಯಿ ಪೂರ್ವದಲ್ಲಿರುವ ಇ-ತ್ಯಾಜ್ಯ ನಿರ್ವಹಣಾ ಘಟಕದಲ್ಲಿ ಸೋಮವಾರ (ಜನವರಿ 15) ಸಂಜೆ 7.30ಕ್ಕೆ ಭಾರಿ ಬೆಂಕಿ ಕಾಣಿಸಿಕೊಂಡಿತ್ತು. ಈ ಘಟನೆ ಮಾಸುವ ಮುನ್ನವೇ ಇನ್ನೊಂದು ಅನಾಹುತ ಸಂಭವಿಸಿದೆ.

ಇದನ್ನೂ ಓದಿ: Fire Accident: ಬೆಂಕಿ ಅವಘಡ, ಹೊತ್ತಿ ಉರಿದ ಐಟಿ ಕಂಪನಿ, ಪೀಠೋಪಕರಣ ಮಳಿಗೆ

Exit mobile version