Site icon Vistara News

Viral Video: ಕೋಚಿಂಗ್​ ಸೆಂಟರ್​ನಲ್ಲಿ ಬೆಂಕಿ; ಅವಸರದಲ್ಲಿ ಕಿಟಕಿಯಿಂದ ಹೊರಬಿದ್ದ ವಿದ್ಯಾರ್ಥಿಗಳು

Fire at coaching centre Of Delhi Students Jumped From Window

#image_title

ದೆಹಲಿಯ ಮುಖರ್ಜಿ ನಗರ ಏರಿಯಾದಲ್ಲಿರುವ ಒಂದು ಕೋಚಿಂಗ್​ ಸೆಂಟರ್ (Coaching Institute)ನಲ್ಲಿ ಬೆಂಕಿ ಹೊತ್ತಿ ಉರಿದಿದೆ. ಕಟ್ಟಡಕ್ಕೆ ಬೆಂಕಿ ಬೀಳುತ್ತಿದ್ದಂತೆ ವಿದ್ಯಾರ್ಥಿಗಳು ಕಿಟಕಿಯಿಂದ ಹೊರಗೆ ಹಾರಿ ಪಾರಾಗಿದ್ದಾರೆ. ಈ ವಿದ್ಯಾರ್ಥಿಗಳು ತಮ್ಮ ಬ್ಯಾಗ್​ ಮತ್ತಿತರ ಸಾಮಗ್ರಿಗಳನ್ನು ಕಿಟಕಿಯಿಂದ ಆಚೆಗೆ ಎಸೆದು, ಬಳಿಕ ತಾವು, ಹಗ್ಗದ ಮೂಲಕ ಜಾರುತ್ತ ಪಾರಾದ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಒಬ್ಬರಾದ ಬಳಿಕ ಒಬ್ಬರು, ಅತ್ಯಂತ ವೇಗವಾಗಿ ಕಟ್ಟಡದ ಕಿಟಿಕಿಯಲ್ಲಿ, ಹಗ್ಗದ ಮೂಲಕ ಹೊರಬಿದ್ದಿದ್ದಾರೆ. ಅವರು ಹೀಗೆ ಇಳಿದ ರೀತಿಯೂ ಸುರಕ್ಷಿತವಾಗಿರಲಿಲ್ಲ. ಇನ್ನೊಂದೇನೇಂದರೆ ಅದು ಸರಿಯಾದ ಹಗ್ಗವೂ ಆಗಿರಲಿಲ್ಲ. ವೈಯರ್​ನ್ನೇ ಹಗ್ಗದ ಮಾದರಿಯಲ್ಲಿ ಕಟ್ಟಲಾಗಿತ್ತು ಎಂದೂ ಹೇಳಲಾಗಿದೆ.

ಈ ತರಬೇತಿ ಕೇಂದ್ರದಲ್ಲಿ ಮಧ್ಯಾಹ್ನ 12.30ರ ಹೊತ್ತಿಗೆ ಬೆಂಕಿ ಕಾಣಿಸಿಕೊಂಡಿತು. ತಕ್ಷಣವೇ ಅಗ್ನಿಶಾಮಕದಳದ ಸುಮಾರು 11 ತಂಡಗಳು ಅಲ್ಲಿಗೆ ತೆರಳಿವೆ. ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಕೋಚಿಂಗ್​ಗಾಗಿ ಅಲ್ಲಿಗೆ ಬಂದಿದ್ದ ವಿದ್ಯಾರ್ಥಿಗಳನ್ನು ರಕ್ಷಿಸುತ್ತಿದ್ದಾರೆ. ಕಟ್ಟಡದ ಮೇಲ್ಭಾಗದಲ್ಲಿರುವ ಕೊಠಡಿಯಲ್ಲಿ ಒಂದು ಬಲಿಷ್ಠವಾದ ಹಗ್ಗ ಕಟ್ಟಿ, ಅದರ ಮೂಲಕ ವಿದ್ಯಾರ್ಥಿಗಳನ್ನು ಹೊರಗೆ ಕರೆತರಲಾಗಿದೆ. ಇನ್ನು ಈ ಮಕ್ಕಳು ಅತ್ಯಂತ ಅವಸರದಲ್ಲಿ, ಜೀವ ಉಳಿದರೆ ಸಾಕು ಎನ್ನುವ ರೀತಿಯಲ್ಲಿ ಕಟ್ಟಡದಿಂದ ಕೆಳಗೆ ಇಳಿದಿದ್ದಾರೆ. ಕೆಲವರು ಹಗ್ಗವನ್ನೂ ಹಿಡಿದುಕೊಳ್ಳಲಿಲ್ಲ. ಹಾಗೇ, ಕಿಟಿಕಿಯಿಂದ ಕೆಳಗಿನ ಕಿಟಕಿಗೆ ಹಾರುತ್ತ, ಕೆಳಗೆ ಹಾರಿದ್ದಾರೆ. ಅದರಲ್ಲೊಬ್ಬಳು ಹುಡುಗಿ ಕೂಡ, ಕೆಳಗಿನ ಫ್ಲೋರ್​​ನ ಕಿಟಕಿಯಿಂದ ನೇರವಾಗಿ ನೆಲದ ಮೇಲೆ ಜಂಪ್ ಮಾಡಿದ್ದಾಳೆ.

ಕೋಚಿಂಗ್ ಸೆಂಟರ್​​ನ ಮೇಲಿನ ಅಂತಸ್ತಿನಲ್ಲಿ, ವಿದ್ಯುತ್​ ಮೀಟರ್​ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಆದರೆ ಇಡೀ ಕಟ್ಟಡಕ್ಕೆ ಬೆಂಕಿ ಪಸರಿಸದಂತೆ ನಿಯಂತ್ರಿಸಲಾಗಿದೆ ಎಂದು ಅಗ್ನಿಶಾಮಕದಳದ ನಿರ್ದೇಶಕ ಅತುಲ್ ಗಾರ್ಗ್​ ತಿಳಿಸಿದ್ದಾರೆ. ‘ಬೆಂಕಿಯ ಕಾರಣದಿಂದ ಯಾರಿಗೂ ಹಾನಿಯಾಗಿಲ್ಲ. ಆದರೆ ವಿದ್ಯಾರ್ಥಿಗಳು ಕಿಟಕಿ ಮೂಲಕ ಕೆಳಗೆ ಹಾರುವಾಗ ಸ್ವಲ್ಪ ಸಮಸ್ಯೆಯಾಯಿತು. ನಾಲ್ವರು ವಿದ್ಯಾರ್ಥಿಗಳು ಗಾಯಗೊಂಡರು’ ಎಂದು ಅವರು ಹೇಳಿದ್ದಾರೆ. ಇನ್ನು ಬೆಂಕಿಯ ಪ್ರಮಾಣ ಜೋರಾಗಿ ಇಲ್ಲದೆ ಇದ್ದರೂ, ದಟ್ಟವಾಗಿ ಎದ್ದ ಹೊಗೆಯಿಂದಾಗಿ ವಿದ್ಯಾರ್ಥಿಗಳು ಗಾಬರಿಗೊಂಡಿದ್ದರು ಎಂದು ದೆಹಲಿ ಪೊಲೀಸ್ ಪಿಆರ್​ಒ ಸುಮನ್ ನಾಲ್ವಾ ತಿಳಿಸಿದ್ದಾರೆ.

Exit mobile version