Site icon Vistara News

Fire Tragedy: ಬೆಂಕಿ ಅವಘಡ; ಉಸಿರುಗಟ್ಟಿ ಮೃತಪಟ್ಟ ಸಹೋದರಿಯರು

Fire Tragedy

Fire Tragedy

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬೆಂಕಿ ಅವಘಡವೊಂದು (Fire Tragedyt) ಸಂಭವಿಸಿದ್ದು, ಸಹೋದರಿಯರಿಬ್ಬರು ಮೃತಪಟ್ಟಿದ್ದಾರೆ. ಉತ್ತರ ದೆಹಲಿಯ ಸದರ್ ಬಜಾರ್ ಪ್ರದೇಶ (Sadar Bazar area)ದ ಮನೆಯೊಂದರಲ್ಲಿ ಮಂಗಳವಾರ (ಏಪ್ರಿಲ್‌ 2) ಬೆಂಕಿ ಕಾಣಿಸಿಕೊಂಡಿದ್ದು, 14 ವರ್ಷದ ಬಾಲಕಿ ಮತ್ತು ಆಕೆಯ 12 ವರ್ಷದ ಸಹೋದರಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರನ್ನು ಗುಲಾಶ್ನಾ (14) ಮತ್ತು ಅನಾಯಾ (12) ಎಂದು ಗುರುತಿಸಲಾಗಿದೆ.

ʼʼಮಂಗಳವಾರ ಅಪರಾಹ್ನ ಸುಮಾರು 2 ಗಂಟೆಗೆ ನಮಗೆ ತುರ್ತು ಕರೆ ಬಂದಿತ್ತು. ಮನೆಯೊಂದರಲ್ಲಿ ಬೆಂಕಿ ಕಾಣಿಸಿಕೊಂಡಿರುವ ಬಗ್ಗೆ ಕರೆ ಮಾಡಿದವರು ತಿಳಿಸಿದ್ದು, ಐದು ಅಗ್ನಿಶಾಮಕ ವಾಹನಗಳನ್ನು ಒದಗಿಸುವಂತೆ ಕೇಳಿಕೊಂಡಿದ್ದರು. ತಕ್ಷಣ ಸ್ಥಳಕ್ಕೆ ತೆರಳಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ಕಾಣಿಸಿಕೊಂಡ ಕಟ್ಟಡದಿಂದ ಕೆಲವರನ್ನು ರಕ್ಷಿಸಿದ್ದಾರೆ. ನಾವು ಪೊಲೀಸರಿಗೂ ಮಾಹಿತಿ ನೀಡಿದ್ದೇವೆ” ಎಂದು ಅಗ್ನಿಶಾಮಕ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸದರ್ ಬಜಾರ್ ಪೊಲೀಸ್ ಠಾಣೆಯ ಸಿಬ್ಬಂದಿಯೂ ಸ್ಥಳಕ್ಕೆ ಧಾವಿಸಿದ್ದಾರೆ ಎಂದು ಉಪ ಪೊಲೀಸ್ ಆಯುಕ್ತ (ಉತ್ತರ) ಮನೋಜ್ ಕುಮಾರ್ ಮೀನಾ ಮಾಹಿತಿ ನೀಡಿದ್ದಾರೆ. ʼʼಸದರ್ ಬಜಾರ್‌ನ ಚಮೇಲಿಯನ್ ರಸ್ತೆಯಲ್ಲಿರುವ ಮನೆಯೊಂದು ಬೆಂಕಿಗೆ ಆಹುತಿಯಾಗಿದೆ ಎಂದು ತಿಳಿದುಬಂದಿದೆ. ನಾಲ್ಕು ಅಗ್ನಿಶಾಮಕ ವಾಹನಗಳು ಆಗಮಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿವೆʼʼ ಎಂದು ಅವರು ವಿವರಿಸಿದ್ದಾರೆ. ಕಟ್ಟಡವು ಹೊಗೆಯಿಂದ ತುಂಬಿತ್ತು ಮತ್ತು ರಕ್ಷಣಾ ತಂಡಗಳು ಮಾಸ್ಕ್‌‍ ಧರಿಸಿ ಒಳ ಪ್ರವೇಶಿಸಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಮೃತ ಸಹೋದರಿಯರಾದ ಗುಲಾಶ್ನಾ ಮತ್ತು ಅನಾಯಾ ಮೊದಲ ಮಹಡಿಯ ಬಾತ್‌ರೂಮ್‌ನಲ್ಲಿ ಸಿಲುಕಿಕೊಂಡಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ: Fire Tragedy: ಬಿರಿಯಾನಿ ರೆಸ್ಟೋರೆಂಟ್‌ಗೆ ಬಂದ 44 ಮಂದಿ ಬೆಂಕಿ ಆಕಸ್ಮಿಕದಲ್ಲಿ ಮೃತ್ಯು

ʼʼಬಾತ್‌ರೂಮ್‌ನಲ್ಲಿ ಸಿಕ್ಕಿಬಿದ್ದಿದ್ದ ಇಬ್ಬರು ಬಾಲಕಿಯರನ್ನು ಬಾಗಿಲು ಮುರಿದು ರಕ್ಷಿಸಿ ಆಸ್ಪತ್ರೆಗೆ ಕಳುಹಿಸಲಾಗಿತ್ತು. ಸದ್ಯ ಬೆಂಕಿಯನ್ನು ನಂದಿಸಲಾಗಿದೆ. ಬೆಂಕಿ ಹೇಗೆ ಹೊತ್ತಿಕೊಂಡಿತ್ತು ಎನ್ನುವ ಬಗ್ಗೆ ಸದ್ಯಕ್ಕೆ ಯಾವುದೇ ಮಾಹಿತಿ ದೊರೆತಿಲ್ಲ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆʼʼ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version