Site icon Vistara News

Fire Tragedy: ಬಣ್ಣದ ಫ್ಯಾಕ್ಟರಿಯಲ್ಲಿ ಭೀಕರ ಬೆಂಕಿ ದುರಂತ, 11 ಸಾವು

fire tragedy delhi

ಹೊಸದಿಲ್ಲಿ: ಗುರುವಾರ ಸಂಜೆ ದೆಹಲಿಯ ಅಲಿಪುರ್ ಪ್ರದೇಶದಲ್ಲಿರುವ ಬಣ್ಣದ ಫ್ಯಾಕ್ಟರಿಯಲ್ಲಿ (Paint Factory) ಸಂಭವಿಸಿದ ಭೀಕರ ಬೆಂಕಿ ಆಕಸ್ಮಿಕದಲ್ಲಿ (Fire Tragedy) ಕನಿಷ್ಠ 11 ಜನರು ಸಾವನ್ನಪ್ಪಿದ್ದಾರೆ ಮತ್ತು ನಾಲ್ವರು ಗಾಯಗೊಂಡಿದ್ದಾರೆ. ಅಗ್ನಿಶಾಮಕ ದಳದ ಪ್ರಕಾರ ಎರಡು ಬಣ್ಣ ಮತ್ತು ರಾಸಾಯನಿಕ ಗೋದಾಮುಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ಬೆಂಕಿಯು ಸ್ಫೋಟದಿಂದ ಮೊದಲು ಸಂಭವಿಸಿದೆ ಎಂದು ಪೊಲೀಸರು ಹೇಳಿದ್ದಾರೆ. ಬಹುಶಃ ಇದು ಕಾರ್ಖಾನೆಯಲ್ಲಿ ಇರಿಸಲಾದ ರಾಸಾಯನಿಕಗಳಿಂದ ಉಂಟಾಗಿರಬಹುದು ಎಂದು ಶಂಕಿಸಲಾಗಿದೆ. “ಮೃತರ ಶರೀರಗಳನ್ನು ಬಾಬು ಜಗಜೀವನ್ ರಾಮ್ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ನಾಲ್ವರು ಗಾಯಗೊಂಡವರನ್ನು ರಾಜಾ ಹರೀಶ್ ಚಂದ್ರ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಮೃತ ವ್ಯಕ್ತಿಗಳನ್ನು ಇನ್ನೂ ಗುರುತಿಸಲಾಗಿಲ್ಲ” ಎಂದು ಅಗ್ನಿಶಾಮಕ ಇಲಾಖೆ ಹೇಳಿಕೆಯಲ್ಲಿ ತಿಳಿಸಿದೆ.

ಸಂಜೆ 5.25ಕ್ಕೆ ಬೆಂಕಿ ಆಕಸ್ಮಿಕದ ಬಗ್ಗೆ ಕರೆ ಬಂತು. ಕೂಡಲೇ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ರಾತ್ರಿ 9 ಗಂಟೆ ಸುಮಾರಿಗೆ ಬೆಂಕಿ ನಂದಿಸಲಾಯಿತು. ಬೆಂಕಿ ನಂದಿಸಿ ಸಿಬ್ಬಂದಿ ಒಳಕ್ಕೆ ಪ್ರವೇಶಿಸುವುದಕ್ಕೂ ಮುನ್ನವೇ 11 ಮಂದಿ ಸಾವನ್ನಪ್ಪಿದ್ದರು ಎಂದು ದೆಹಲಿ ಅಗ್ನಿಶಾಮಕ ಸೇವೆಯ (DFS) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಣ್ಣದ ಕಾರ್ಖಾನೆಯಲ್ಲಿ ಭಾರಿ ಪ್ರಮಾಣದ ರಾಸಾಯನಿಕಗಳನ್ನು ಶೇಖರಿಸಿಡಲಾಗಿದ್ದು, ಬೆಂಕಿಯ ಆರ್ಭಟ ಇನ್ನೂ ಜೋರಾಗಿತ್ತು. ರಾಸಾಯನಿಕಗಳು ಹಾಗೂ ಪೇಂಟ್‌ ಸುಟ್ಟಿದ್ದರಿಂದ ಉಂಟಾದ ಹೊಗೆ ಹಾಗೂ ದುರ್ವಾಸನೆ ಪರಿಸರದಲ್ಲಿ ದಟ್ಟವಾಗಿ ಕವಿದಿದೆ. ಪೊಲೀಸರ ಪ್ರಕಾರ, ಬೆಂಕಿಯ ಮೊದಲು ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿದೆ. ಈ ಬಗ್ಗೆ ತನಿಖೆ ನಡೆಸಲು ತಂಡಗಳನ್ನು ರಚಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ಛಿದ್ರವಾದ ರೆಸ್ಟೋರೆಂಟ್​, 31 ಮಂದಿ ದುರ್ಮರಣ; ರಸ್ತೆಗೆ ಬಿದ್ದ ಹೆಣಗಳು, ಅವಶೇಷಗಳು

Exit mobile version