Site icon Vistara News

Firecracker Explosion: ಪುರಿ ಜಗನ್ನಾಥ ದೇಗುಲದಲ್ಲಿ ಅಗ್ನಿ ದುರಂತ; 15 ಮಂದಿಗೆ ಗಾಯ

Firecracker Explosion

Firecracker Explosion

ಭುವನೇಶ್ವರ: ವಿಶ್ವ ಪ್ರಸಿದ್ಧ ಒಡಿಶಾದ ಪುರಿ ಜಗನ್ನಾಥ ದೇಗುಲ (Puri Jagannath temple)ದಲ್ಲಿ ಬುಧವಾರ ರಾತ್ರಿ ಅಗ್ನಿ ದುರಂತವೊಂದು ಸಂಭವಿಸಿದ್ದು, ಸುಮಾರು 15 ಮಂದಿಗೆ ಸುಟ್ಟ ಗಾಯಗಳಾಗಿವೆ. ಭಗವಾನ್ ಜಗನ್ನಾಥನ ಚಂದನ್ ಜಾತ್ರಾ ಉತ್ಸವದ ಸಂದರ್ಭದಲ್ಲಿ ಪಟಾಕಿಗಳ ರಾಶಿ ಸ್ಫೋಟಗೊಂಡು ಈ ದುರಂತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ (Firecracker Explosion).

ಉತ್ಸವ ವೀಕ್ಷಣೆಗಾಗಿ ನೂರಾರು ಮಂದಿ ನರೇಂದ್ರ ಪುಷ್ಕರಿಣಿ ದಂಡೆ ಮೇಲೆ ಜಮಾಯಿಸಿದ್ದ ವೇಳೆ ಪಟಾಕಿ ಸ್ಫೋಟಗೊಂಡಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಭಕ್ತರ ಗುಂಪು ಪಟಾಕಿ ಹಚ್ಚುತ್ತಿತ್ತು. ಈ ವೇಳೆ ಇದ್ದಕ್ಕಿದ್ದಂತೆ ಹಾರಿದ ಬೆಂಕಿಯ ಕಿಡಿ ಪಟಾಕಿಗಳ ರಾಶಿಗೆ ಅಪ್ಪಳಿಸಿತು. ಇದು ಸ್ಫೋಟಕ್ಕೆ ಕಾರಣ ಎಂದು ಅವರು ವಿವರಿಸಿದ್ದಾರೆ.

ಪಟಾಕಿ ಸಿಡಿಯುತ್ತಿದ್ದಂತೆ ಅಲ್ಲಿ ನೆರೆದಿದ್ದ ಕೆಲವರು ತಮ್ಮನ್ನು ರಕ್ಷಿಸಿಕೊಳ್ಳಲು ಪುಷ್ಕರಿಣಿಗೆ ಜಿಗಿದಿದ್ದಾರೆ. ಇನ್ನು ಹಲವರು ಕೂಡಲೇ ಸ್ಥಳದಿಂದ ತೆರಳಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ. ಗಾಯಗೊಂಡವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆ ಪೈಕಿ ನಾಲ್ವರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಘಟನೆಯ ಬಗ್ಗೆ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ದುಃಖ ವ್ಯಕ್ತಪಡಿಸಿದ್ದು, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಚಿಕಿತ್ಸೆಯ ವೆಚ್ಚವನ್ನು ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಭರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ʼʼಪುರಿ ಜಗನ್ನಾಥ ಉತ್ಸವದ ವೇಳೆ ನಡೆದ ಬೆಂಕಿ ದುರಂತದಿಂದ ತೀವ್ರ ದುಃಖವಾಗಿದೆ. ಗಾಯಗೊಂಡವರಿಗೆ ಸರಿಯಾದ ಚಿಕಿತ್ಸೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ವ್ಯವಸ್ಥೆಯನ್ನು ಮೇಲ್ವಿಚಾರಣೆ ಮಾಡಲು ಮುಖ್ಯ ಆಡಳಿತ ಕಾರ್ಯದರ್ಶಿ ಮತ್ತು ಜಿಲ್ಲಾಡಳಿತಕ್ಕೆ ನಿರ್ದೇಶಿಸಲಾಗಿದೆ. ಗಾಯಾಳುಗಳ ಎಲ್ಲ ವೈದ್ಯಕೀಯ ವೆಚ್ಚವನ್ನು ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಭರಿಸಲಾಗುವುದು. ಎಲ್ಲರಿಗೂ ಉತ್ತಮ ಆರೋಗ್ಯವನ್ನು ಹಾರೈಸುತ್ತೇನೆ” ಎಂದು ನವೀನ್ ಪಟ್ನಾಯಕ್ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಕೂಡ ಘಟನೆಯ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ. “ಪುರಿ ಚಂದನ ಯಾತ್ರೆಯ ಸಂದರ್ಭದಲ್ಲಿ ನರೇಂದ್ರ ಪುಷ್ಕರಿಣಿ ದೇವಿಘಾಟ್‌ನಲ್ಲಿ ನಡೆದ ಅಪಘಾತದಲ್ಲಿ ಅನೇಕರು ಗಾಯಗೊಂಡಿದ್ದಾರೆ ಎಂಬ ಸುದ್ದಿ ಕೇಳಿ ದುಃಖವಾಗಿದೆ. ಭಗವಂತನ ಆಶೀರ್ವಾದದಿಂದ, ಚಿಕಿತ್ಸೆಯಲ್ಲಿರುವವರು ಶೀಘ್ರದಲ್ಲೇ ಗುಣಮುಖರಾಗಿ ಮನೆಗೆ ಮರಳಲಿ” ಎಂದು ಅವರು ಹಾರೈಸಿದ್ದಾರೆ.

ಇದನ್ನೂ ಓದಿ: Fire Accident: ದೇಗುಲದಲ್ಲಿ ಅಗ್ನಿ ದುರಂತ; 13 ಜನಕ್ಕೆ ಗಾಯ, ಸಿಎಂ ಸ್ವಲ್ಪದರಲ್ಲೇ ಪಾರು!

Exit mobile version