Site icon Vistara News

Gujarat Election | ಗುಜರಾತ್‌ನಲ್ಲಿ ಇಂದು ಮೊದಲ ಹಂತದ ಮತದಾನ, ಹೇಗಿದೆ ಚುನಾವಣೆ ಹವಾಮಾನ?

Gujarat Election Result

ಗಾಂಧಿನಗರ: ದೇಶದ ಗಮನ ಸೆಳೆದಿರುವ, ೨೦೨೪ರ ಲೋಕಸಭೆ ಚುನಾವಣೆ ದೃಷ್ಟಿಯಿಂದ ಪ್ರಾಮುಖ್ಯತೆ ಪಡೆದಿರುವ, ಪ್ರತಿಷ್ಠೆಯ ಕಣವೂ ಆಗಿರುವ ಗುಜರಾತ್‌ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನ (Gujarat Election) ಗುರುವಾರ (ಡಿಸೆಂಬರ್‌ ೧) ನಡೆಯಲಿದೆ. ಬಿಜೆಪಿ, ಕಾಂಗ್ರೆಸ್‌ ಹಾಗೂ ಆಮ್‌ ಆದ್ಮಿ ಪಕ್ಷವು ಗೆಲುವಿಗೆ ಇನ್ನಿಲ್ಲದ ಕಸರತ್ತು ನಡೆಸಿದ್ದು, ಮೊದಲ ಹಂತದ ಮತದಾನದ ಮೇಲೆ ಎಲ್ಲರ ಗಮನ ಇದೆ.

ಹಾಗಾದರೆ, ಮೊದಲ ಹಂತದಲ್ಲಿ ಎಷ್ಟು ಕ್ಷೇತ್ರಗಳಿಗೆ ಮತದಾನ ನಡೆಯಲಿದೆ? ಯಾವ ಪ್ರಮುಖ ಅಭ್ಯರ್ಥಿಗಳು ಕಣದಲ್ಲಿದ್ದಾರೆ? ಗುಜರಾತ್‌ ವಿಧಾನಸಭೆ ಚುನಾವಣೆಯಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರುವ ಸಾಧ್ಯತೆ ಇದೆ? ಚುನಾವಣೆ ಸಮೀಕ್ಷೆಗಳು ಏನು ಹೇಳುತ್ತವೆ? ಯಾವ ಪಕ್ಷಗಳ ಬಲಾಬಲ ಹೇಗಿದೆ ಎಂಬುದರ ಮಾಹಿತಿ ಇಲ್ಲಿದೆ.

೮೯ ಕ್ಷೇತ್ರಗಳಲ್ಲಿ ಮತದಾನ
ಮೊದಲ ಹಂತದಲ್ಲಿ ಗುಜರಾತ್‌ನ ೮೯ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ದಕ್ಷಿಣ ಗುಜರಾತ್‌ ಹಾಗೂ ಕಛ್-ಸೌರಾಷ್ಟ್ರ ಪ್ರದೇಶದ ೧೯ ಜಿಲ್ಲೆಗಳಲ್ಲಿ ಮತದಾನ ನಡೆಯಲಿದ್ದು, ೭೮೮ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ೮೯ ಕ್ಷೇತ್ರಗಳಲ್ಲಿ ೧೪ ಕ್ಷೇತ್ರಗಳು ಎಸ್‌ಟಿಗೆ ಹಾಗೂ ೭ ಕ್ಷೇತ್ರ ದಲಿತರಿಗೆ ಮೀಸಲಾಗಿವೆ. ಮೊದಲ ಹಂತದಲ್ಲಿ ಸುಮಾರು ೨.೩೯ ಕೋಟಿ ಮತದಾರರು ಹಕ್ಕು ಚಲಾವಣೆ ಮಾಡಲಿದ್ದಾರೆ. ಬೆಳಗ್ಗೆ ೮ರಿಂದ ಸಂಜೆ ೫.೩೦ರವರೆಗೆ ಮತದಾನ ನಡೆಯಲಿದ್ದು, ಪ್ರತಿಯೊಂದು ಮತಗಟ್ಟೆಗಳಲ್ಲಿ ಹೆಚ್ಚಿನ ಭದ್ರತೆ ಒದಗಿಸಲಾಗಿದೆ.

ಒಟ್ಟು ಕ್ಷೇತ್ರಗಳು: ೧೮೨, ಮ್ಯಾಜಿಕ್‌ ನಂಬರ್‌: ೯೨, ಮೊದಲ ಹಂತದಲ್ಲಿ ೮೯ ಕ್ಷೇತ್ರಗಳಲ್ಲಿ ಮತದಾನ

ಬಿಜೆಪಿ ಬಲ ಏನು?

ಭೂಪೇಂದ್ರ ಪಟೇಲ್

ಗುಜರಾತ್‌ನಲ್ಲಿ ಬಿಜೆಪಿಯು ಕಳೆದ ೨೭ ವರ್ಷಗಳಿಂದ ಅಧಿಕಾರ ಅನುಭವಿಸುತ್ತಿದೆ. ಪ್ರತಿ ಬಾರಿ ಚುನಾವಣೆ ನಡೆದಾಗ ಆಡಳಿತ ವಿರೋಧಿ ಅಲೆ ಇದೆ ಎಂದು ಹೇಳಲಾಗುತ್ತದೆಯಾದರೂ ಫಲಿತಾಂಶ ಮಾತ್ರ ಬಿಜೆಪಿ ಪರವಾಗಿಯೇ ಇರುತ್ತದೆ. ಅಷ್ಟರಮಟ್ಟಿಗೆ ಗುಜರಾತ್‌ ಕಮಲ ಪಾಳಯದ ಭದ್ರಕೋಟೆಯಾಗಿದೆ. ಈಗ ದಾಖಲೆಯ ಏಳನೇ ಅವಧಿ ಮೇಲೆ ಕಣ್ಣಿಟ್ಟಿರುವ ಬಿಜೆಪಿಯು ಹಲವಾರು ತಂತ್ರ ಹೆಣೆದಿದೆ. ಪಟೇಲರು ಸೇರಿ ಮೇಲ್ವರ್ಗದವರ ಮತಗಳು ಬಿಜೆಪಿಗೆ ಸುಲಭವಾಗಿ ದಕ್ಕಿದರೂ, ತಳ ಸಮುದಾಯದವರನ್ನೂ ಸೆಳೆಯಲು ಯತ್ನಿಸಿದೆ. ಆದರೆ, ಕಳೆದ ಬಾರಿ ಕಾಂಗ್ರೆಸ್‌ ಒಂದೇ ಬಿಜೆಪಿಗೆ ಸ್ಪರ್ಧಿಯಾಗಿತ್ತು. ಆದರೆ, ಈ ಬಾರಿ ಕಾಂಗ್ರೆಸ್‌ ಜತೆ ಆಪ್‌ ಸಹ ಸ್ಪರ್ಧೆಯೊಡ್ಡಿದೆ. ಆದರೆ, ಮೋದಿ ಅಲೆ, ಅಮಿತ್‌ ಶಾ ತಂತ್ರವು ಎರಡೂ ಪಕ್ಷಗಳಿಗೆ ಸವಾಲಾಗುವುದರಲ್ಲಿ ಎರಡು ಮಾತಿಲ್ಲ.

ಬಿಜೆಪಿ ಪ್ರಮುಖ ಅಭ್ಯರ್ಥಿಗಳು: ಭೂಪೇಂದ್ರ ಪಟೇಲ್‌, ಹಾರ್ದಿಕ್‌ ಪಟೇಲ್‌, ಹರ್ಷ್‌ ಸಂಘವಿ

ಕಾಂಗ್ರೆಸ್‌ ಲೆಕ್ಕಾಚಾರ ಏನು?

ಜಗದೀಶ್‌ ಠಾಕೂರ್

ಕಳೆದ ೨೭ ವರ್ಷಗಳಿಂದ ಕಾಂಗ್ರೆಸ್‌ಗೆ ಗುಜರಾತ್‌ ಗಗನ ಕುಸುಮವೇ ಆಗಿದೆ. ಆದರೆ, ಈ ಬಾರಿ ಬಿಜೆಪಿಗೆ ಸ್ಪರ್ಧೆಯೊಡ್ಡಲು ಕಾಂಗ್ರೆಸ್‌ ಹಲವು ಲೆಕ್ಕಾಚಾರ ಹೆಣೆದಿದೆ. ಜಿಗ್ನೇಶ್‌ ಮೇವಾನಿ ಸೇರಿ ಹಲವರಿಗೆ ಟಿಕೆಟ್‌ ನೀಡುವ ಮೂಲಕ ತಂತ್ರ ಹೂಡಿದೆ. ಕಳೆದ ಬಾರಿಯಂತೆ ಈ ಬಾರಿಯೂ ತೀವ್ರ ಸ್ಪರ್ಧೆಯೊಡ್ಡುವ ಸಾಧ್ಯತೆ ಹೆಚ್ಚಿದೆ. ಆದರೆ, ಕಾಂಗ್ರೆಸ್‌ಗೆ ಅಬ್ಬರದ ಪ್ರಚಾರದ ಕೊರತೆ ಇದೆ. ರಾಹುಲ್‌ ಗಾಂಧಿ ಅವರು ಕೇವಲ ಎರಡು ರ‍್ಯಾಲಿ ನಡೆಸಿದ್ದಾರೆ. ಭಾರತ್‌ ಜೋಡೋ ಯಶಸ್ಸನ್ನು ಗುಜರಾತ್‌ನಲ್ಲಿ ಸಕಾರಾತ್ಮಕವಾಗಿ ಬಳಸಿಕೊಳ್ಳುವಲ್ಲಿ, ಆಡಳಿತ ವಿರೋಧಿ ಅಲೆಯನ್ನು ಮತ್ತಷ್ಟು ಹೆಚ್ಚಿಸುವಲ್ಲಿ ಕಾಂಗ್ರೆಸ್‌ ಎಡವಿದೆ. ಇಷ್ಟೆಲ್ಲ ನಕಾರಾತ್ಮಕ ಅಂಶಗಳನ್ನು ಇಟ್ಟುಕೊಂಡು ಹೇಗೆ ಪ್ರಬಲ ಸ್ಪರ್ಧೆಯೊಡ್ಡುತ್ತದೆ ಎಂಬುದನ್ನು ಫಲಿತಾಂಶವೇ ನಿರ್ಧರಿಸಲಿದೆ.

ಕಾಂಗ್ರೆಸ್‌ ಪ್ರಮುಖ ಅಭ್ಯರ್ಥಿಗಳು: ಜಗದೀಶ್ ಠಾಕೂರ್‌, ಮಹೇಂದ್ರ ಸಿಂಗ್‌ ವಘೇಲಾ, ಭರತ್‌ ಸೋಲಂಕಿ

ಮ್ಯಾಜಿಕ್‌ ಮಾಡುವುದೇ ಆಪ್‌?

ಇಸುಧಾನ್ ಗಢವಿ

ಪಂಜಾಬ್‌ನಲ್ಲಿ ಆಡಳಿತ ವಿರೋಧಿ ಅಲೆಯನ್ನು ಸದ್ಬಳಕೆ ಮಾಡಿಕೊಂಡು ಅಧಿಕಾರ ಹಿಡಿದ ಆಮ್‌ ಆದ್ಮಿ ಪಕ್ಷಕ್ಕೆ ಗುಜರಾತ್‌ ಗಾದಿ ಮೇಲೆ ಹೆಚ್ಚಿನ ಗಮನವಿದೆ. ಹಾಗಾಗಿಯೇ, ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್‌ ಅವರು ಗುಜರಾತ್‌ನಲ್ಲಿ ಹೆಚ್ಚು ಸಭೆ, ರ‍್ಯಾಲಿಗಳನ್ನು ನಡೆಸಿ ಜನರ ಮನವೊಲಿಸಲು ಯತ್ನಿಸಿದ್ದಾರೆ. ಆದರೆ, ಬಿಜೆಪಿ ಪರ ಅಲೆ, ಕಾಂಗ್ರೆಸ್‌ ಪ್ರಾಬಲ್ಯವನ್ನೂ ಮೀರಿ ಮತದಾರರು ಆಪ್‌ಗೆ ಬೆಂಬಲಿಸಿದರೆ ಅದು ಮ್ಯಾಜಿಕ್‌ ಆಗಲಿದೆ. ಇದುವರೆಗೆ ನಡೆದ ಸಮೀಕ್ಷೆಗಳ ಪ್ರಕಾರ ಒಂದು ಸಮೀಕ್ಷೆಯೂ ಆಪ್‌ ಪರವಾಗಿಲ್ಲ. ಬಿಜೆಪಿಯೇ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಸಮೀಕ್ಷೆಗಳು ತಿಳಿಸಿವೆ. ಮುಖ್ಯಮಂತ್ರಿ ಅಭ್ಯರ್ಥಿ ಇಸುಧಾನ್‌ ಗಢವಿ ಹೊರತಾಗಿ ಪ್ರಬಲ ನಾಯಕರ ನಾಯಕರ ಕೊರತೆಯೂ ಆಪ್‌ಗಿದೆ.

ಆಪ್‌ ಪ್ರಮುಖ ಅಭ್ಯರ್ಥಿಗಳು: ಇಸುಧಾನ್‌ ಗಢವಿ, ಗೋಪಾಲ್‌ ಇಟಾಲಿಯಾ, ಕೈಲಾಶ್‌ ಗಡ್ವಿ

ಇದನ್ನೂ ಓದಿ | Gujarat Election 2022 | ಗುಜರಾತ್‌ನಲ್ಲಿ ಉತ್ತರ-ದಕ್ಷಿಣದ ಬಿಜೆಪಿ ಕಾರ್ಯಕರ್ತೆಯರು ಒಂದಾಗಿ ಪ್ರಚಾರ

Exit mobile version