Site icon Vistara News

ಸುಪ್ರೀಂ ಕೋರ್ಟ್‌ನ ಮೊದಲ ಮಹಿಳಾ ನ್ಯಾಯಮೂರ್ತಿ ಎಂ.ಫಾತಿಮಾ ಬೀವಿ ನಿಧನ

M Fatima beevi

ಹೊಸದಿಲ್ಲಿ: ದೇಶದ ಸುಪ್ರೀಂ ಕೋರ್ಟ್‌ನ (Supreme court) ಮೊದಲ ಮಹಿಳಾ ನ್ಯಾಯಾಧೀಶೆಯಾಗಿದ್ದ (First woman Justice) ನ್ಯಾಯಮೂರ್ತಿ ಎಂ.ಫಾತಿಮಾ ಬೀವಿ (M. Fathima Beevi) ಅವರು ಇಂದು (ನವೆಂಬರ್ 23) ನಿಧನರಾದರು. ಅವರಿಗೆ 96 ವರ್ಷ ವಯಸ್ಸು ಆಗಿತ್ತು. ಫಾತಿಮಾ ಬೀವಿ ಗುರುವಾರ ಬೆಳಗ್ಗೆ ಕೇರಳದ ಕೊಲ್ಲಂನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಸುಪ್ರೀಂ ಕೋರ್ಟ್‌ನ ಮೊದಲ ಮಹಿಳಾ ನ್ಯಾಯಮೂರ್ತಿಯಾಗಿ, ತಮಿಳುನಾಡಿನ ರಾಜ್ಯಪಾಲರಾಗಿ ಅವರ ಹೆಸರು ದೇಶದ ಇತಿಹಾಸದಲ್ಲಿ ಅವರ ಹೆಸರು ಸುವರ್ಣಾಕ್ಷರಗಳಲ್ಲಿ ಬರೆಯಲ್ಪಟ್ಟಿದೆ.

ಫಾತಿಮಾ ಬೀವಿ ಅವರು 1927 ಏಪ್ರಿಲ್ 30ರಂದು ಅಂದಿನ ತಿರುವಾಂಕೂರ್‌ ರಾಜ್ಯದ ಪತ್ತನಂತಿಟ್ಟದಲ್ಲಿ ಜನಿಸಿದರು. ಆಕೆಯ ತಂದೆಯ ಹೆಸರು ಮೀರಾ ಸಾಹಿಬ್ ಮತ್ತು ತಾಯಿಯ ಹೆಸರು ಖಡೇಜಾ ಬೀಬಿ. ಫಾತಿಮಾ ಬೀವಿ ಅವರಿಗೆ 6 ಸಹೋದರಿಯರು ಮತ್ತು 2 ಸಹೋದರರಿದ್ದಾರೆ. ಫಾತಿಮಾ ಹಿರಿಯವರಾಗಿದ್ದರು. 1943ರಲ್ಲಿ ಪತ್ತನಂತಿಟ್ಟದ ಕ್ಯಾಥೋಲಿಕ್ ಹೈಸ್ಕೂಲ್‌ನಿಂದ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿ ಉನ್ನತ ಶಿಕ್ಷಣಕ್ಕಾಗಿ ತಿರುವನಂತಪುರಕ್ಕೆ ಹೋದರು. ತಿರುವನಂತಪುರಂ ವಿಶ್ವವಿದ್ಯಾನಿಲಯದಿಂದ ಬಿ.ಎಸ್ಸಿ ಮತ್ತು ತಿರುವನಂತಪುರಂನ ಸರ್ಕಾರಿ ಕಾನೂನು ಕಾಲೇಜಿನಿಂದ ಬ್ಯಾಚುಲರ್ ಆಫ್ ಲಾ ಕಲಿತರು.

ಫಾತಿಮಾ ವಿಜ್ಞಾನವನ್ನು ಕಲಿಯಲು ಬಯಸಿದ್ದರು. ಆದರೆ ಆಕೆಯ ತಂದೆ ಭಾರತದ ಮೊದಲ ಮಹಿಳಾ ನ್ಯಾಯಾಧೀಶೆ ಜಸ್ಟಿಸ್ ಅನ್ನಾ ಚಾಂಡಿಯವರಿಂದ ಪ್ರಭಾವಿತರಾಗಿದ್ದರು. ಅದಕ್ಕಾಗಿ ತಮ್ಮ ಮಗಳು ಫಾತಿಮಾ ಬೀವಿಗೆ ವಿಜ್ಞಾನದ ಬದಲು ಕಾನೂನು ಕಲಿಯಲು ಪ್ರೋತ್ಸಾಹಿಸಿದರು. ಫಾತಿಮಾ ಬೀವಿ ತಂದೆಯ ಸಲಹೆ ಅನುಸರಿಸಿ ಕಾನೂನಿನಲ್ಲಿ ವೃತ್ತಿಜೀವನ ಮುಂದುವರಿಸಿದರು.

1950ರಲ್ಲಿ ಬಾರ್ ಕೌನ್ಸಿಲ್ ಆಫ್ ಇಂಡಿಯಾ ಪರೀಕ್ಷೆಗೆ ಹಾಜರಾಗಿ ಪ್ರಥಮ ಸ್ಥಾನ ಪಡೆದರು. ಬಾರ್ ಕೌನ್ಸಿಲ್ ಚಿನ್ನದ ಪದಕವನ್ನೂ ಪಡೆದರು. 1950 ನವೆಂಬರ್ 14ರಂದು ಕೇರಳದಲ್ಲಿ ವಕೀಲರಾಗಿ ವೃತ್ತಿಜೀವನವನ್ನು ಪ್ರಾರಂಭಿಸಿದರು. 8 ವರ್ಷಗಳ ನಂತರ ಕೇರಳ ಅಧೀನ ನ್ಯಾಯಾಂಗ ಸೇವೆಗಳಲ್ಲಿ ಮುನ್ಸಿಫ್ ಆಗಿ ಸೇವೆ ಸಲ್ಲಿಸಿದರು. ಕೇರಳದ ನ್ಯಾಯಾಧೀಶರಾಗಿ (1968-72), ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ (1972-4), ಜಿಲ್ಲಾ
ಸೆಷನ್ಸ್ ನ್ಯಾಯಾಧೀಶರು (1974-80), ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ (1980-83)ಗಳಲ್ಲಿ ಸೇವೆ ಸಲ್ಲಿಸಿದರು. 1983ರಲ್ಲಿ ಕೇರಳ ಹೈಕೋರ್ಟ್‌ನ ನ್ಯಾಯಾಧೀಶರಾದರು. 6 ಅಕ್ಟೋಬರ್ 1989ರಂದು ಹೈಕೋರ್ಟ್‌ನಿಂದ ನಿವೃತ್ತರಾದ ನಂತರ ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರಾದರು. ಈ ಸ್ಥಾನವನ್ನು ಸಾಧಿಸಿದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಅವರು 1992ರಲ್ಲಿ ಸುಪ್ರೀಂ ಕೋರ್ಟ್‌ನಿಂದ ನಿವೃತ್ತರಾದರು. ನಂತರ ಅವರು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸದಸ್ಯರಾಗಿದ್ದರು (1993). ಕೇರಳ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು (1993). ತಮಿಳುನಾಡಿನ ರಾಜ್ಯಪಾಲರಾಗಿಯೂ ಸೇವೆ ಸಲ್ಲಿಸಿದ್ದರು. ಅವರು ಉನ್ನತ ನ್ಯಾಯಾಂಗಕ್ಕೆ ನೇಮಕಗೊಂಡ ಮೊದಲ ಮುಸ್ಲಿಂ ನ್ಯಾಯಾಧೀಶರೂ ಹೌದು. ಫಾತಿಮಾ ಬೀವಿ ಸಾಧನೆಗೆ ಹಲವು ಪ್ರಶಸ್ತಿಗಳು ಒಲಿದುಬಂದಿವೆ. ಭಾರತ್‌ ಜ್ಯೋತಿ ಪ್ರ ಶಸ್ತಿ, ಯುಎಸ್- ಇಂಡಿಯಾ ಬ್ಯುಸಿನೆಸ್ ಕೌನ್ಸಿಲ್ (ಯುಎಸ್ಐಬಿಸಿ) ಜೀವಮಾನ ಸಾಧನೆ ಪ್ರಶಸ್ತಿಯನ್ನು ಪಡೆದಿದ್ದಾರೆ. 2002ರಲ್ಲಿ ಎಡಪಕ್ಷಗಳು ಫಾತಿಮಾ ಬಿವಿ ಅವರ ಹೆಸರನ್ನು ಭಾರತದ ರಾಷ್ಟ್ರಪತಿಯಾಗಿ ನಾಮನಿರ್ದೇಶನ ಮಾಡಲು ಮುಂದಾಗಿದ್ದವು.

ಇದನ್ನೂ ಓದಿ: Same Sex Marriage Verdict: ಸಲಿಂಗ ವಿವಾಹ ಮಾನ್ಯತೆ; ಇಲ್ಲಿವೆ ಸುಪ್ರೀಂ ಕೋರ್ಟ್‌ ಅಣಿಮುತ್ತುಗಳು

Exit mobile version