ಹೊಸದಿಲ್ಲಿ: ಸಂಸತ್ತಿನ ಚಳಿಗಾಲದ ಅಧಿವೇಶನದ (parliament Winter Session) ಉಳಿದ ಅವಧಿಗೆ ಐವರು ಕಾಂಗ್ರೆಸ್ ಸಂಸದರನ್ನು ಲೋಕಸಭೆಯಿಂದ ಅಮಾನತುಗೊಳಿಸಲಾಗಿದೆ. “ಅಧ್ಯಕ್ಷರ ನಿರ್ದೇಶನಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ” ಕಾರಣಕ್ಕಾಗಿ ಅವರನ್ನು ಅಮಾನತುಗೊಳಿಸಲಾಗಿದೆ.
ಅಮಾನತುಗೊಂಡ ಸಂಸದರೆಂದರೆ ಪ್ರತಾಪನ್, ಹೈಬಿ ಈಡನ್, ಕುರಿಯಾಕೋಸ್, ಜೋತಿ ಮಣಿ ಮತ್ತು ರಮ್ಯಾ ಹರಿದಾಸ್. ಬುಧವಾರ ಸಂಭವಿಸಿದ ಲೋಕಸಭೆಯ ಭದ್ರತಾ ಲೋಪದ ಹಿನ್ನೆಲೆಯಲ್ಲಿ ಗೃಹ ಸಚಿವ ಅಮಿತ್ ಶಾ ರಾಜೀನಾಮೆಗೆ ಪ್ರತಿಪಕ್ಷಗಳು ಒತ್ತಾಯಿಸಿ ಗಲಭೆ ಸೃಷ್ಟಿಸಿದ್ದವು. ಈ ಸಂದರ್ಭದಲ್ಲಿ ನಡೆಸಿದ ಗದ್ದಲ ಹಾಗೂ ಅಧ್ಯಕ್ಷರಿಗೆ ತೋರಿದ ಅಗೌರವಕ್ಕಾಗಿ ಇವರನ್ನು ಅಮಾನತು ಮಾಡಲಾಗಿದೆ.
ಇದಕ್ಕೂ ಮುನ್ನ ತೃಣಮೂಲ ಕಾಂಗ್ರೆಸ್ ಸಂಸದ ಡೆರೆಕ್ ಓಬ್ರಿಯಾನ್ ಅವರನ್ನು ಅಮಾನತು ಮಾಡಲಾಗಿತ್ತು. ಕಲಾಪದಲ್ಲಿ ಗದ್ದಲ ಸೃಷ್ಟಿಯಾದ ಬಳಿಕ ಲೋಕಸಭೆಯನ್ನು ಮಧ್ಯಾಹ್ನ 3 ಗಂಟೆಗೆ ಮುಂದೂಡಲಾಯಿತು. ಈ ಸಂದರ್ಭದಲ್ಲಿ ಸದನದ ಅಧ್ಯಕ್ಷ ಪೀಠದಲ್ಲಿ ಬಿ. ಮಹ್ತಾಬ್ ಇದ್ದರು.
“ಈ ಸದನವು ಟಿ.ಎನ್. ಪ್ರತಾಪನ್, ಹೈಬಿ ಈಡನ್, ಎಸ್. ಜೋತಿಮಣಿ, ರಮ್ಯಾ ಹರಿದಾಸ್ ಮತ್ತು ಡೀನ್ ಕುರಿಯಾಕೋಸ್ ಅವರ ಅಗೌರವದ, ಅಧ್ಯಕ್ಷರ ನಿರ್ದೇಶನವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ ನಡವಳಿಕೆಯನ್ನು ಗಂಭೀರವಾಗಿ ಪರಿಗಣಿಸಿದೆ. ಈ ಸದಸ್ಯರನ್ನು ಅಧಿವೇಶನದ ಉಳಿದ ಅವಧಿಗೆ ಸದನದಿಂದ ಅಮಾನತುಗೊಳಿಸಲಾಗಿದೆ” ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ಟಿಎಂಸಿ ಸಂಸದ ಡೆರೆಕ್ ಓಬ್ರಿಯಾನ್ ಗುರುವಾರ ರಾಜ್ಯಸಭೆಯಲ್ಲಿ ತೋರಿದ “ಅಗೌರವಪೂರಿತ ದುರ್ನಡತೆ”ಗಾಗಿ ಅಮಾನತುಗೊಂಡಿದ್ದಾರೆ. ಅಮಾನತುಗೊಳಿಸುವ ಪ್ರಸ್ತಾಪವನ್ನು ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನ್‌ಕರ್ ಅಂಗೀಕರಿಸಿದರು. ಕಳೆದ ವಾರ ಟಿಎಂಸಿಯ ಇನ್ನೊಬ್ಬ ಸಂಸತ್ ಸದಸ್ಯೆಯಾದ ಮಹುವಾ ಮೋಯಿತ್ರಾ ಅವರನ್ನು ಲೋಕಸಭೆಯಿಂದ ಉಚ್ಛಾಟಿಸಲಾಗಿತ್ತು.
ಇದನ್ನೂ ಓದಿ: Derek O’Brien: ರಾಜ್ಯಸಭೆಯಲ್ಲಿ ದುರ್ನಡತೆ, ಟಿಎಂಸಿಯ ಡೆರೆಕ್ ಓಬ್ರಿಯಾನ್ ಅಧಿವೇಶನದಿಂದ ಅಮಾನತು