Site icon Vistara News

Flipkart Layoffs: ವೇತನ ಹೆಚ್ಚಿಸುವ ವೇಳೆಯೇ 1,500 ನೌಕರರನ್ನು ವಜಾಗೊಳಿಸಿದ ಫ್ಲಿಪ್‌ಕಾರ್ಟ್!

Flipkart

Flipkart to lay off 5-7% workforce, performance-based job cuts in March: Report

ನವದೆಹಲಿ: ಮಾರ್ಚ್‌-ಏಪ್ರಿಲ್‌ ತಿಂಗಳು ಸಮೀಪಿಸುತ್ತಿದೆ. ಎಲ್ಲ ಕಂಪನಿಗಳ ಸಹೋದ್ಯೋಗಿಗಳು ವೇತನ ಹೆಚ್ಚಳ, ಬಡ್ತಿಗಾಗಿ ಲೆಕ್ಕಾಚಾರ ಹಾಕುತ್ತಿರುತ್ತಾರೆ. ಎಷ್ಟು ಸಂಬಳ ಹೆಚ್ಚಾಗಬಹುದು, ಮುಂದಿನ ಕಮಿಟ್‌ಮೆಂಟ್‌ಗಳು ಏನು ಎಂಬುದರ ಯೋಚನೆಯಲ್ಲಿರುತ್ತಾರೆ. ಆದರೆ, ಫ್ಲಿಪ್‌ಕಾರ್ಟ್‌ ಕಂಪನಿ ಮಾತ್ರ ಉದ್ಯೋಗಿಗಳಿಗೆ ವೇತನ ಹೆಚ್ಚಿಸುವುದು ಬಿಡಿ, ಅವರ ನೌಕರಿಗೇ ಕತ್ತರಿ (Flipkart Layoffs) ಹಾಕುವ ತೀರ್ಮಾನ ತೆಗೆದುಕೊಂಡಿದೆ. ಆ ಮೂಲಕ ಫ್ಲಿಪ್‌ಕಾರ್ಟ್‌ ನೌಕರರ ಕನಸಿಗೆ ಎಳ್ಳು-ನೀರು ಬಿಟ್ಟಿದೆ. ಹೌದು, ಫ್ಲಿಪ್‌ಕಾರ್ಟ್‌ ಕಂಪನಿಯು ಶೇ.5-7ರಷ್ಟು ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಲು ಫ್ಲಿಪ್‌ಕಾರ್ಟ್‌ ತೀರ್ಮಾನಿಸಿದೆ ಎಂದು ತಿಳಿದುಬಂದಿದೆ.

ಫ್ಲಿಪ್‌ಕಾರ್ಟ್‌ ಕಂಪನಿಯು ತನ್ನ ನೌಕರರನ್ನು ಕಡಿತಗೊಳಿಸುವ ಮೂಲಕ ಕಂಪನಿಯನ್ನು ಲಾಭದಲ್ಲಿಯೇ ಮುಂದುವರಿಸುವುದು ಉದ್ದೇಶವಾಗಿದೆ ಎನ್ನಲಾಗಿದೆ. ಕಂಪನಿಯಲ್ಲಿ ಸರಿಯಾಗಿ ಕಾರ್ಯನಿರ್ವಹಿಸದವರು, ಕಾರ್ಯಕ್ಷಮತೆ ಹೊಂದದವರನ್ನು ಮಾರ್ಚ್‌-ಏಪ್ರಿಲ್‌ನಲ್ಲಿ ವಜಾಗೊಳಿಸಲಾಗುತ್ತದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಫ್ಲಿಪ್‌ಕಾರ್ಟ್‌ನಲ್ಲಿ ಸದ್ಯ 22 ಸಾವಿರ ಉದ್ಯೋಗಿಗಳಿರುವ ಕಾರಣ ಮಾರ್ಚ್-ಏಪ್ರಿಲ್‌ನಲ್ಲಿ ಸಾವಿರಕ್ಕೂ ಅಧಿಕ ನೌಕರರನ್ನು ವಜಾಗೊಳಿಸಲಾಗುತ್ತದೆ ಎನ್ನಲಾಗಿದೆ.

ಕಳೆದ ಎರಡು ವರ್ಷದಿಂದಲೂ ಫ್ಲಿಪ್‌ಕಾರ್ಟ್‌ ಇಂತಹ ತಂತ್ರ ಅನುಸರಿಸುತ್ತಿದೆ. ಪ್ರತಿ ವರ್ಷ ವೇತನ ಹೆಚ್ಚಿಸುವ ಸಂದರ್ಭದಲ್ಲಿಯೇ ಕಾರ್ಯಕ್ಷಮತೆ ಇಲ್ಲದ ಉದ್ಯೋಗಿಗಳನ್ನು ವಜಾಗೊಳಿಸುತ್ತಿದೆ. ಈ ಬಾರಿಯೂ ವಾಲ್‌ಮಾರ್ಟ್‌ ಒಡೆತನದ ಫ್ಲಿಪ್‌ಕಾರ್ಟ್‌ ಕಂಪನಿಯು 1,500 ನೌಕರರನ್ನು ವಜಾಗೊಳಿಸಲಿದೆ ಎಂದು ತಿಳಿದುಬಂದಿದೆ. ಕಂಪನಿಯ ನಿರ್ವಹಣಾ ವೆಚ್ಚದ ನಿಯಂತ್ರಣ, ಲಾಭದಲ್ಲೇ ಮುಂದುವರಿಯುವುದು ಸೇರಿ ಹಲವು ಕಾರಣಗಳಿಂದಾಗಿ ಒಂದು ವರ್ಷದಿಂದ ಫ್ಲಿಪ್‌ಕಾರ್ಟ್‌ ನೇಮಕವನ್ನೇ ಮಾಡಿಲ್ಲ ಎನ್ನಲಾಗಿದೆ.

ಇದನ್ನೂ ಓದಿ: Paytm Layoff : ಪೇಟಿಎಂನಿಂದ 1000ಕ್ಕೂ ಹೆಚ್ಚು ಉದ್ಯೋಗಿಗಳ ವಜಾ

ಕೆಲ ದಿನಗಳ ಹಿಂದಷ್ಟೇ ಪೇಟಿಎಂ ಕೂಡ ಸಾವಿರ ಉದ್ಯೋಗಿಗಳಿಗೆ ಪಿಂಕ್‌ ಸ್ಲಿಪ್‌ ನೀಡಿತ್ತು. ಪೇಟಿಎಂ ಮಾತ್ರವಲ್ಲ, ಹೊಸ ಟೆಕ್ ಸ್ಟಾರ್ಟ್ಅಪ್​ಗಳು ಈ ವರ್ಷ ದೇಶಾದ್ಯಂತ ಹೆಚ್ಚಿನ ಸಂಖ್ಯೆಯ ಉದ್ಯೋಗ ಕಡಿತ ಮಾಡಿವೆ. ಲಾಂಗ್​ಹೌಡ್​ ಕನ್ಸಲ್ಟಿಂಗ್​​ನ ಅಂಕಿಅಂಶಗಳು ಹೊಸ ಕಂಪನಿಗಳು ಈ ವರ್ಷ ಸುಮಾರು 28,000 ಜನರನ್ನು ವಜಾಗೊಳಿಸಿವೆ ಎಂದು ಹೇಳಿದೆ. ಕಳೆದ ಎರಡು ವರ್ಷಗಳಿಗೆ ಹೋಲಿಸಿದರೆ ವಜಾಗೊಳಿಸುವ ಪ್ರಮಾಣವು ಭಾರೀ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಏಕೆಂದರೆ 2021ರಲ್ಲಿ ಈ ಕಂಪನಿಗಳಿಂದ ಕೇವಲ 4,080 ಜನರನ್ನು ವಜಾಗೊಳಿಸಲಾಗಿದೆ ಮತ್ತು 2022 ರಲ್ಲಿ 20,000 ಜನರನ್ನು ವಜಾಗೊಳಿಸಲಾಗಿದೆ. 28,000 ಜನರಲ್ಲಿ ಹೆಚ್ಚಿನವರನ್ನು ಕೇವಲ ಆರು ತಿಂಗಳ ಅವಧಿಯಲ್ಲಿ ವಜಾಗೊಳಿಸಲಾಯಿತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version