Site icon Vistara News

Flipkart: ಫ್ಲಿಪ್‌ಕಾರ್ಟ್‌ನಲ್ಲಿ ಈಗ ಮೊಬೈಲ್‌ ರಿಚಾರ್ಚ್‌ ಸೇರಿ ಹಲವು ಪೇಮೆಂಟ್ ಸಾಧ್ಯ; ಇಲ್ಲಿದೆ ವಿವರ

Flipkart

Flipkart users can now pay phone bills, recharge Fastag and more on the app

ಬೆಂಗಳೂರು: ಭಾರತದ ಇ-ಕಾಮರ್ಸ್ ಸಂಸ್ಥೆ ಫ್ಲಿಪ್‌ಕಾರ್ಟ್ (Flipkart) ತನ್ನ ಆ್ಯಪ್‌ನಲ್ಲಿ ಫಾಸ್ಟ್ ಟ್ಯಾಗ್, ಡಿಟಿಎಚ್ ರೀಚಾರ್ಜಸ್, ಲ್ಯಾಂಡ್ ಲೈನ್, ಬ್ರಾಡ್ ಬ್ಯಾಂಡ್ ಮತ್ತು ಮೊಬೈಲ್ ಪೋಸ್ಟ್ ಪೇಯ್ಡ್ ಬಿಲ್‌ಗಳನ್ನು ಪಾವತಿ ಮಾಡುವ ಸೌಲಭ್ಯವನ್ನು ಪರಿಚಯಿಸಿದೆ. ಹಾಲಿ ಇರುವ ವಿದ್ಯುತ್ ಬಿಲ್ ಮತ್ತು ಮೊಬೈಲ್ ಪ್ರಿಪೇಯ್ಡ್ ಸೌಲಭ್ಯಗಳ ಜತೆಯಲ್ಲಿ ಈ ಹೊಸ ಬಿಲ್ ಪಾವತಿ ವಿಭಾಗಗಳನ್ನು (Bill Payment) ಆರಂಭಿಸಿದೆ. ಈ ಉದ್ದೇಶಕ್ಕಾಗಿ ಫ್ಲಿಪ್ ಕಾರ್ಟ್ ಭಾರತದಲ್ಲಿ ಮುಂಚೂಣಿಯಲ್ಲಿರುವ ಪೇಮೆಂಟ್ ಸೊಲ್ಯೂಷನ್ ಕಂಪನಿಗಳಲ್ಲಿ ಒಂದಾಗಿರುವ ಬಿಲ್ ಡೆಸ್ಕ್ ಜತೆ ಪಾಲುದಾರಿಕೆ ಮಾಡಿಕೊಂಡಿದೆ. ಈ ಮೂಲಕ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಶನ್ ಆಫ್ ಇಂಡಿಯಾ ಅಭಿವೃದ್ಧಿಪಡಿಸಿರುವ ಭಾರತ್ ಬಿಲ್ ಪೇಮೆಂಟ್ಸ್ ಸಿಸ್ಟಂ (BBPS) ನೊಂದಿಗೆ ಹೊಸ ಸೇವೆಗಳನ್ನು ಸಮಗ್ರಗೊಳಿಸಲಾಗುತ್ತದೆ.

ಸೀಮಿತ ಅವಧಿಯ ಡೀಲ್‌ನ ಭಾಗವಾಗಿ ಗ್ರಾಹಕರು ಫ್ಲಿಪ್ ಕಾರ್ಟ್ ಯುಪಿಐಅನ್ನು ಬಳಸಿಕೊಂಡು ತಮ್ಮ ಸೂಪರ್ ಕಾಯಿನ್‌ಗಳೊಂದಿಗೆ ಶೇ.10 ರವರೆಗೆ ರಿಡೀಮ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಈ ಹೊಸ ವಿಭಾಗಗಳ ಆರಂಭದೊಂದಿಗೆ ಗ್ರಾಹಕರು ಫ್ಲಿಪ್‌ಕಾರ್ಟ್‌ನಲ್ಲಿ ಶಾಪಿಂಗ್ ಅನುಭವ ಪಡೆದುಕೊಳ್ಳುವುದರ ಜತೆಗೆ ತಮ್ಮ ಬಿಲ್‌ಗಳನ್ನು ಪಾವತಿಸಬಹುದು ಮತ್ತು ರಿಚಾರ್ಜ್ ಪೇಮೆಂಟ್‌ಗಳನ್ನು ಮಾಡಬಹುದಾಗಿದೆ.

2024 ರಲ್ಲಿ ಭಾರತ್ ಬಿಲ್ ಪೇಮೆಂಟ್ ಸಿಸ್ಟಂ (BBPS) ದೇಶಾದ್ಯಂತ 1.3 ಶತಕೋಟಿ ವ್ಯವಹಾರಗಳನ್ನು ನಡೆಸಿದೆ. 2026ರ ವೇಳೆಗೆ ಈ ಸಂಖ್ಯೆ ವಾರ್ಷಿಕ 3 ಶತಕೋಟಿಗೆ ಗೆ ಹೆಚ್ಚಳವಾಗುವ ನಿರೀಕ್ಷೆ ಇದೆ. 20+ ಬಿಲ್ ವರ್ಗಗಳು ಮತ್ತು 21,000 ಕ್ಕೂ ಅಧಿಕ ಬಿಲ್ಲರ್‌ಗಳು ಈ ಬಿಬಿಪಿಎಸ್ ಪರಿಸರ ವ್ಯವಸ್ಥೆಯಲ್ಲಿ ಸಕ್ರಿಯರಾಗಿದ್ದಾರೆ. ಶೇ.70 ಕ್ಕೂ ಅಧಿಕ ಬಿಲ್ ಪೇಮೆಂಟ್‌ಗಳನ್ನು ಎಲೆಕ್ಟ್ರಾನಿಕ್ ಮೂಲಕ ಮಾಡಲಾಗುತ್ತಿದೆ. ಹೊಸ ವಿಭಾಗಗಳನ್ನು ಪರಿಚಯಿಸುವ ಮೂಲಕ ಫ್ಲಿಪ್ ಕಾರ್ಟ್ ಗ್ರಾಹಕರು ತಮ್ಮ ಬಿಲ್‌ಗಳನ್ನು ಎಲೆಕ್ಟ್ರಾನಿಕ್ ಮೂಲಕ ತಡೆರಹಿತವಾಗಿ ಪಾವತಿ ಮಾಡುವ ಇನ್ನಷ್ಟು ಅವಕಾಶಗಳನ್ನು ಒದಗಿಸಿದಂತಾಗಿದೆ.

ಹೊಸ ಸೌಲಭ್ಯಗಳನ್ನು ಪರಿಚಯ ಮಾಡಿರುವ ಬಗ್ಗೆ ಮಾತನಾಡಿದ ಫ್ಲಿಪ್ ಕಾರ್ಟ್ ಪೇಮೆಂಟ್ಸ್ ಆ್ಯMಡ್ ಸೂಪರ್ ಕಾಯಿನ್ಸ್ ವಿಭಾಗದ ಉಪಾಧ್ಯಕ್ಷ ಗೌರವ್ ಅರೋರ, “ಡಿಜಿಟಲ್ ಪೇಮೆಂಟ್ಸ್ ಉದ್ಯಮವು ಅತ್ಯಂತ ವೇಗವಾಗಿ ಬೆಳೆಯುತ್ತಿದ್ದು, ಗ್ರಾಹಕರು ತಮ್ಮ ಬಿಲ್‌ಗಳ ಪಾವತಿಗೆ ಹೆಚ್ಚು ಹೆಚ್ಚು ಎಲೆಕ್ಟ್ರಾನಿಕ್ ಮಾದರಿಗಳನ್ನು ಆಯ್ಕೆ ಮಾಡಿಕೊಳ್ಳುವ ಪ್ರಕ್ರಿಯೆ ಹೆಚ್ಚಾಗುತ್ತಿದೆ. ಗ್ರಾಹಕರಿಗೆ ಡಿಜಿಟಲ್ ಪೇಮೆಂಟ್ ಸೌಲಭ್ಯಗಳನ್ನು ಸರಳೀಕರಣಗೊಳಿಸುವ ಫ್ಲಿಪ್ ಕಾರ್ಟ್ ಮತ್ತು ಸರ್ಕಾರದ ನಗದುರಹಿತ ಆರ್ಥಿಕತೆಯ ದೃಷ್ಟಿಕೋನದೊಂದಿಗೆ ನಾವು ನಮ್ಮ ಸೇವೆಗಳ ಆಯ್ಕೆಗಳನ್ನು ವೈವಿಧ್ಯಮಯಗೊಳಿಸುತ್ತಿದ್ದೇವೆ. ತಮ್ಮ ನೆಚ್ಚಿನ ಉತ್ಪನ್ನಗಳನ್ನು ಖರೀದಿಸುವುದರಿಂದ ಹಿಡಿದು ಡಿಜಿಟಲ್ ಪಾವತಿ ಅಗತ್ಯತೆಗಳವರೆಗೆ ಈ ವರ್ಧನೆಯು ಗ್ರಾಹಕರು ತಮ್ಮೆಲ್ಲ ಅಗತ್ಯತೆಗಳನ್ನು ಯಾವುದೇ ಸಮಯದಲ್ಲಿ, ಎಲ್ಲಿ ಬೇಕಾದರೂ ಅತ್ಯಂತ ಸುರಕ್ಷಿತ ಮತ್ತು ತಡೆರಹಿತವಾಗಿ ಪೂರೈಸಿಕೊಳ್ಳಲು ಒನ್-ಸ್ಟಾಪ್ ತಾಣವನ್ನು ರಚಿಸಿದೆ. ಫ್ಲಿಪ್‌ಕಾರ್ಟ್‌ನ ಈ ಉಪಕ್ರಮವು ನಮ್ಮ ಗ್ರಾಹಕರಿಗೆ ನಿರಂತರವಾದ ಆವಿಷ್ಕಾರವನ್ನು ತರುವ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆಯಾಗಿದೆ ಹಾಗೂ ಒಟ್ಟಾರೆ ಅವರ ಅನುಭವವನ್ನು ಹೆಚ್ಚು ಉತ್ಕೃಷ್ಟಗೊಳಿಸುವುದರ ಜತೆಗೆ ಹೆಚ್ಚು ಲಾಭದಾಯಕವಾಗಿಸುವ ನಿಟ್ಟಿನಲ್ಲಿ ಉನ್ನತೀಕರಿಸುತ್ತದೆ” ಎಂದು ತಿಳಿಸಿದರು.

ಬಿಲ್ ಡೆಸ್ಕ್ ಸಹ-ಸಂಸ್ಥಾಪಕ ಮತ್ತು ನಿರ್ದೇಶಕ ಅಜಯ್ ಕೌಶಲ್ ಮಾತನಾಡಿ, “ನಮ್ಮ ದೀರ್ಘಾವಧಿಯ ಪಾಲುದಾರ ಸಂಸ್ಥೆಯಾಗಿರುವ ಫ್ಲಿಪ್‌ಕಾರ್ಟ್‌ಗೆ ಬಿಬಿಪಿಎಸ್ ಸೇವೆಗಳನ್ನು ವಿಸ್ತರಣೆ ಮಾಡುತ್ತಿರುವುದಕ್ಕೆ ನಮಗೆ ಅತೀವ ಸಂತಸ ಉಂಟಾಗುತ್ತಿದೆ. ಈ ರಚನಾತ್ಮಕ ವಿಸ್ತರಣೆಯು ಫ್ಲಿಪ್‌ಕಾರ್ಟ್ ಗ್ರಾಹಕರಿಗೆ ತಡೆರಹಿತವಾದ ಬಿಲ್ ಪೇಮೆಂಟ್‌ಗಳನ್ನು ಮಾಡಲು, ಸಕಾಲಕ್ಕೆ ನೋಟಿಫಿಕೇಶನ್ ಪಡೆಯಲು ಹಾಗೂ ಖಾತೆಯಲ್ಲಿ ಹಣವನ್ನು ಪರೀಕ್ಷಿಸಿಕೊಳ್ಳಲು ನೆರವಾಗುತ್ತದೆ. ಈ ಸಹಯೋಗವು ಬಿಲ್ ಡೆಸ್ಕ್ ಮತ್ತು ಫ್ಲಿಪ್‌ಕಾರ್ಟ್ ನಡುವಿನ ಬಲವಾದ, ದೀರ್ಘವಾದ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ. ಇದು ಗ್ರಾಹಕರ ತೃಪ್ತಿ ಮತ್ತು ನಾವೀನ್ಯತೆಯ ಹಂಚಿಕೆ ಬದ್ಧತೆಯ ಮೇಲೆ ರಚಿಸಲ್ಪಟ್ಟಿದೆ” ಎಂದು ವಿವರಿಸಿದರು.

ಫ್ಲಿಪ್‌ಕಾರ್ಟ್ ಇತ್ತೀಚೆಗೆ ತನ್ನ ಯುಪಿಐ ಸೇವೆ ಆರಂಭಿಸಿತ್ತು. ಈ ವ್ಯವಸ್ಥೆಯು ಸೂಪರ್ ಕಾಯಿನ್ಸ್ ಮತ್ತು ಕ್ಯಾಶ್ ಬ್ಯಾಕ್ ಮೂಲಕ ಬಹುಮಾನಗಳನ್ನು ಗಳಿಸುವಾಗ ಗ್ರಾಹಕರಿಗೆ ರಿಚಾರ್ಜ್ ಗಳು ಮತ್ತು ಬಿಲ್ ಪಾವತಿಗಳಿಗೆ ಅರ್ಥಗರ್ಭಿತ, ಸುರಕ್ಷಿತ ಮತ್ತು ಅನುಕೂಲಕರ ಆಯ್ಕೆಗಳನ್ನು ನೀಡುತ್ತದೆ. ಒಂದು ಕ್ಲಿಕ್ ಮತ್ತು ತ್ವರಿತ ಕಾರ್ಯಚಟುವಟಿಕೆಗಳ ಪರಿಚಯದ ಮೂಲಕ ಫ್ಲಿಪ್ ಕಾರ್ಟ್ ಗ್ರಾಹಕರಿಗೆ ಅನುಕೂಲಕರವಾದ ಡಿಜಿಟಲ್ ಪಾವತಿ ಅನುಭವವನ್ನು ನೀಡುತ್ತದೆ. ಇಲ್ಲಿ ಅವರು ಫ್ಲಿಪ್ ಕಾರ್ಟ್ ಮಾರುಕಟ್ಟೆಯ ಒಳಗೆ ಮತ್ತು ಹೊರಗೆ ಆನ್‌ಲೈನ್ ಮತ್ತು ಆಫ್‌ಲೈನ್ ವ್ಯಾಪಾರಿ ವಹಿವಾಟುಗಳಿಗೆ ವೈಶಿಷ್ಟ್ಯತೆಗಳನ್ನು ಪಡೆದುಕೊಳ್ಳಬಹುದಾಗಿದೆ.‌

ಇದನ್ನೂ ಓದಿ: Water Aerator : ಸ್ವಿಗ್ಗಿಯಲ್ಲಿ ಆರ್ಡರ್ ಮಾಡಿದ್ರೆ 10 ನಿಮಿಷದಲ್ಲಿ ಮನೆ ತಲುಪುತ್ತದೆ ವಾಟರ್ ಏರಿಯೇಟರ್​

Exit mobile version