ಗಾಂಧಿನಗರ: ಹೆಚ್ಚುತ್ತಿರುವ ಜನಸಂಖ್ಯೆಯಿಂದ ಸಮಸ್ಯೆಗಳು ತೀವ್ರವಾಗುತ್ತಿವೆ. ಹಾಗಾಗಿ, ಜನಸಂಖ್ಯೆ (Population) ನಿಯಂತ್ರಣ ಅತ್ಯಗತ್ಯ ಎಂಬ ನೀತಿ ಸರ್ಕಾರದ್ದು. ಆದರೆ, ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಮಾತ್ರ ಭಿನ್ನವಾದ ಅಭಿಪ್ರಾಯವನ್ನು ಹೊಂದಿದ್ದಾರೆ. ಒತ್ತಾಯಪೂರ್ವಕ ಜನಸಂಖ್ಯೆಯ ನಿಯಂತ್ರಣದಿಂದ ಲಿಂಗ ಅಸಮಾನತೆ ಹೆಚ್ಚಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಇದೇ ವೇಳೆ, ಶಿಕ್ಷಣ, ಸಾಮಾಜಿಕ ಜಾಗೃತಿ ಮತ್ತ ಸಮೃದ್ಧಿಯ ಪರಿಣಾಮ ಭಾರತೀಯ ಜನಸಂಖ್ಯೆ ಕುಸಿಯುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಜೈಶಂಕರ್ ಅವರ ದಿ ಇಂಡಿಯಾ ವೇ: ಸ್ಟ್ರಾಟೆಜಿಸ್ ಫಾರ್ ಆ್ಯನ್ ಅನ್‌ಸರ್ಟನ್ ವರ್ಲ್ಡ್ ಕೃತಿಯು ಗುಜರಾತಿ ಭಾಷೆಗೆ ಅನುವಾದಗೊಂಡಿದ್ದು, ಆ ಪುಸ್ತಕದ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಸ್ವಾತಂತ್ರ್ಯದ ಬಳಿಕ ಭಾರತವು ಜನಸಂಖ್ಯೆಯ ಸಂಸರಚನೆಯಲ್ಲಿ ಭಾರೀ ಬದಲಾವಣೆಗೆ ಸಾಕ್ಷಿಯಾಗಿದೆ. ಜನಸಂಖ್ಯೆ ಸ್ಫೋಟವನ್ನು ಕಂಡ ಭಾರತದಲ್ಲಿ ಅದೇ ವೇಳೆ ಫಲವಂತಿಕೆ ದರದಲ್ಲಿ ಸಾಕಷ್ಟು ಕುಸಿತವಾಗಿರವುದನ್ನು ಕಂಡಿದ್ದೇವೆ. 2022 ಯುಎನ್ ವರ್ಲ್ಡ್ ಪಾಪ್ಯುಲೇಷನ್ ಪ್ರಾಸ್‌ಪೆಕ್ಟ್ಸ್ ವರದಿಯ ಪ್ರಕಾರ, ಭಾರತವು ಚೀನಾವನ್ನು ಹಿಂದಿಕ್ಕಿ 2023ರ ಹೊತ್ತಿಗೆ ಜಗತ್ತಿನ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ರಾಷ್ಟ್ರವಾಗಲಿದೆ. ಭಾರತದ ಜನಸಂಖ್ಯೆಯು 140 ಕೋಟಿ ದಾಟುವ ನಿರೀಕ್ಷೆ ಇದೆ. ಸದ್ಯ, ಜಗತ್ತಿನ ಒಟ್ಟು ಜನಸಂಖ್ಯೆಯಲ್ಲಿ ಭಾರತದ ಪಾಲು ಶೇ.17.5ರಷ್ಟಿದೆ. 2030ರ ವೇಳೆಗೆ ಭಾರತದ ಜನಸಂಖ್ಯೆ 150 ಮತ್ತು 2050ರ ಹೊತ್ತಿಗೆ 166 ಕೋಟಿಗೆ ತಲುಪಬಹುದು ಎಂದು ನಿರೀಕ್ಷಿಸಲಾಗಿದೆ.
ಕೆಲವು ರಾಜಕೀಯ ಕಾರಣಗಳಿಂದಾಗಿ ನಾವು ಇಸ್ರೇಲ್‌ನೊಂದಿಗೆ ಸಂಬಂಧವೃದ್ಧಿಯನ್ನು ನಿಯಂತ್ರಣ ಮಾಡಿಕೊಂಡಿದ್ದೆವು. ಆದರೆ, ಇಸ್ರೇಲ್‌ಗೆ ಭೇಟಿ ನೀಡಿದ ಮೊದಲ ಪ್ರಧಾನಿ ನರೇಂದ್ರ ಮೋದಿ ಅವರಾಗಿದ್ದಾರೆ. ಮತ ರಾಜಕಾರಣಕ್ಕಾಗಿ ರಾಷ್ಟ್ರೀಯ ಹಿತಾಸಕ್ತಿಯನ್ನು ಬದಿಗಿಡುವ ಕಾಲ ಈಗಿಲ್ಲ ಎಂದು ಜೈಶಂಕರ್ ಹೇಳಿದ್ದಾರೆ.
ಪ್ರಧಾನಿ ನೇರಂದ್ರ ಮೋದಿ ಅವರ ಮೊದಲ ಅವಧಿಯಲ್ಲಿ ಭಾರತದ ವಿದೇಶಾಂಗ ನೀತಿಯು ಪರಿಣಾಮಕಾರಿಯಾಗಿತ್ತು. ತಪ್ಪು ನಿರ್ಧಾರಗಳು ಬಹಳ ಕಡಿಮೆ ಎಂದು ಜೈಶಂಕರ್ ಅಭಿಪ್ರಾಪಟ್ಟಿದ್ದಾರೆ. ನೇಬರ್‌ಹುಡ್ ಫಸ್ಟ್ ಎಂಬ ನೀತಿ ಮತ್ತು ಬೇರೆ ಬೇರೆ ರಾಷ್ಟ್ರಗಳೊಂದಿಗೆ ವೈಯಕ್ತಿಕ ಸಂಬಂಧ ಪರಿಣಾವಾಗಿ ಭಾರತಕ್ಕೆ ಸಾಕಷ್ಟು ಲಾಭವಾಗಿದೆ ಎಂದು ಜೈಶಂಕರ್ ಅವರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ | ಬೆಂಗಳೂರಿನ ವಿವಿ ಪುರಂ ಫುಡ್ ಸ್ಟ್ರೀಟ್‌ನಲ್ಲಿ ತಿಂಡಿ ಸವಿದ ಕೇಂದ್ರ ಸಚಿವ ಜೈಶಂಕರ್