Site icon Vistara News

Anantnag Encounter: ಒಂದೆಡೆ ಕಾಡು, ಮತ್ತೊಂದೆಡೆ ಬೆಟ್ಟ; ಕಾಶ್ಮೀರದಲ್ಲಿ ಎನ್‌ಕೌಂಟರ್‌ ನಡೆಯುತ್ತಿರುವುದು ಹೇಗೆ?

Indian Army In Jammu Kashmir

Forest On One Side, Hills On The Other: The Inside Story Of Anantnag Encounter

ಶ್ರೀನಗರ: ಜಮ್ಮು-ಕಾಶ್ಮೀರದ ಅನಂತನಾಗ್‌ ಜಿಲ್ಲೆಯಲ್ಲಿ ನಡೆಯುತ್ತಿರುವ ಎನ್‌ಕೌಂಟರ್‌ (Anantnag Encounter) ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಸತತ 72 ಗಂಟೆಗಳಿಂದ ಹಗಲು-ರಾತ್ರಿ ಎನ್ನದೆ ಭದ್ರತಾ ಸಿಬ್ಬಂದಿಯು ಕಾಕೆರ್‌ನಾಗ್‌ ಪ್ರದೇಶದಲ್ಲಿ ಉಗ್ರರ ವಿರುದ್ಧ ಕಾರ್ಯಾಚರಣೆ ಕೈಗೊಳ್ಳುತ್ತಿದ್ದಾರೆ. ಒಂದೆಡೆ ದಟ್ಟ ಕಾಡು, ಮತ್ತೊಂದೆಡೆ ಬೆಟ್ಟ-ಗುಡ್ಡ ಇರುವುದರಿಂದ ಕಾರ್ಯಾಚರಣೆಗೆ ಅಡೆತಡೆ ಆಗುತ್ತಿದೆ. ಇಷ್ಟಾದರೂ ಛಲ ಬಿಡದ ಯೋಧರು ಆಪರೇಷನ್‌ ಮುಂದುವರಿಸಿದ್ದಾರೆ.

ಕಾರ್ಯಾಚರಣೆ ಆರಂಭ ಯಾವಾಗ?

ಸೆಪ್ಟೆಂಬರ್‌ 12-13ರ ತಡರಾತ್ರಿ ಕಾಕೆರ್‌ನಾಗ್‌ ಅರಣ್ಯ ಪ್ರದೇಶದಲ್ಲಿ ಲಷ್ಕರೆ ತಯ್ಬಾ ಉಗ್ರರು ಅಡಗಿದ್ದಾರೆ ಎಂಬ ಮಾಹಿತಿ ಮೇರೆಗೆ ಭದ್ರತಾ ಸಿಬ್ಬಂದಿಯು ಕಾರ್ಯಾಚರಣೆ ಆರಂಭಿಸಿದ್ದಾರೆ. ಆದರೆ, ಅಪಾರ ಶಸ್ತ್ರಾಸ್ತ್ರಗಳನ್ನು ಹೊಂದಿರುವ ಉಗ್ರರು ಇದೇ ವೇಳೆ ಸೈನಿಕರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಆಗ, ಒಬ್ಬ ಕರ್ನಲ್‌, ಒಬ್ಬ ಮೇಜರ್‌ ಹಾಗೂ ಒಬ್ಬ ಡಿವೈಎಸ್‌ಪಿ ಹುತಾತ್ಮರಾಗುತ್ತಾರೆ. ಶುಕ್ರವಾರ (ಸೆಪ್ಟೆಂಬರ್‌ 15) ಮತ್ತೊಬ್ಬ ಯೋಧ ಹುತಾತ್ಮರಾಗಿದ್ದಾರೆ.

ಪ್ರಕೃತಿಯೇ ಸೈನಿಕರಿಗೆ ಶತ್ರು

ಜಮ್ಮು-ಕಾಶ್ಮೀರದಲ್ಲಿ ಕಾರ್ಯಾಚರಣೆ ಕೈಗೊಳ್ಳುವ ಯೋಧರಿಗೆ ಪ್ರಕೃತಿಯೇ ದೊಡ್ಡ ಶತ್ರುವಾಗಿದೆ. ಒಂದೆಡೆ ದಟ್ಟ ಅರಣ್ಯದಲ್ಲಿ ಉಗ್ರರನ್ನು ಪತ್ತೆ ಹಚ್ಚುವುದು ಕಷ್ಟವಾದರೆ, ಮತ್ತೊಂದೆಡೆ ಬೆಟ್ಟ-ಗುಡ್ಡಗಳಲ್ಲಿ ಕಾರ್ಯಾಚರಣೆ ನಡೆಸುವುದು ಇನ್ನಷ್ಟು ಕಷ್ಟವಾಗುತ್ತಿದೆ. ಹಾಗಾಗಿಯೇ, ಎನ್‌ಕೌಂಟರ್‌ ನಾಲ್ಕನೇ ದಿನಕ್ಕೆ ಕಾಲಿಟ್ಟರೂ ಲಷ್ಕರೆ ತಯ್ಬಾದ 2-3 ಉಗ್ರರು ಸಿಗುತ್ತಿಲ್ಲ. ಇಷ್ಟಾದರೂ ಯೋಧರು ಹಿಂದಡಿ ಇಡುತ್ತಿಲ್ಲ. ಹಾಗಾಗಿ, ಕಾರ್ಯಾಚರಣೆಯು ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ.

ಅದರಲ್ಲೂ ಕಾಕೆರ್‌ನಾಗ್‌ ಅರಣ್ಯ ಪ್ರದೇಶದಲ್ಲಿ ತುಂಬ ಗುಹೆಗಳಿವೆ. ಗುಹೆಗಳಲ್ಲಿ ಅಡಗಿರುವ ಉಗ್ರರ ಮೇಲೆ ಗುಂಡಿನ ದಾಳಿ ನಡೆಸಲು ಹೋದರೆ ಬ್ಯಾಕಪ್‌ ಅಥವಾ ಕವರ್‌ (ಗುಂಡಿನ ದಾಳಿ ಮಾಡುವ ಯೋಧನಿಗೆ ಬೇರೆ ಯೋಧರು ಕೂಡ ದಾಳಿ ಮೂಲಕವೇ ಭದ್ರತೆ ಒದಗಿಸುವುದು) ಸಿಗುವುದಿಲ್ಲ. ಇದರಿಂದಾಗಿ ಎನ್‌ಕೌಂಟರ್‌ ಜಟಿಲವಾಗುತ್ತಿದೆ ಎಂದು ತಿಳಿದುಬಂದಿದೆ.

ಸತತ ಕಾರ್ಯಾಚರಣೆ ಏಕೆ?

ಕಾಕೆರ್‌ನಾಗ್‌ ಅರಣ್ಯ ಪ್ರದೇಶದಲ್ಲಿ ಮೂರ್ನಾಲ್ಕು ದಿನಗಳಿಂದ ಎನ್‌ಕೌಂಟರ್‌ ನಡೆಯುತ್ತಿದ್ದು, ಇಷ್ಟಾದರೂ ಉಗ್ರರು ಸಿಗುತ್ತಿಲ್ಲ. ಅದರಲ್ಲೂ ಸಾಮಾನ್ಯ ಉಗ್ರರಾಗಿದ್ದರೆ ಇಷ್ಟೊಂದು ಸುದೀರ್ಘ ಕಾರ್ಯಾಚರಣೆ ನಡೆಯುವುದಿಲ್ಲ. ಕಳೆದ ವರ್ಷ ಲಷ್ಕರೆ ತಯ್ಬಾ ಸೇರಿದ ಉಜೈರ್‌ ಖಾನ್‌ ಸೇರಿ ಮೂವರು ಉಗ್ರರು ಅರಣ್ಯದಲ್ಲಿ ಅಡಗಿದ್ದಾರೆ ಎಂಬ ಮಾಹಿತಿ ಇದೆ. ಅವರ ಬಳಿ ಹೆಚ್ಚಿನ ಶಸ್ತ್ರಾಸ್ತ್ರಗಳಿದ್ದು, ತರಬೇತಿ ಪಡೆದವರಾಗಿದ್ದಾರೆ. ಹಾಗಾಗಿ, ಅವರನ್ನು ಕೊಂದೇ ತೀರಬೇಕು ಎಂಬ ತೀರ್ಮಾನಕ್ಕೆ ಬಂದಿರುವ ಸೇನೆಯು ಸತತ ಕಾರ್ಯಾಚರಣೆ ನಡೆಸುತ್ತಿದೆ.

Exit mobile version