ನವ ದೆಹಲಿ: ಪಾಕಿಸ್ತಾನದ ಮಾಜಿ ಅಧ್ಯಕ್ಷ, ಪರ್ವೇಜ್ ಮುಜರಫ್ ಅವರು ನಿಧನರಾಗಿದ್ದಾರೆ ಎಂಬ ಸುದ್ದಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಜೋರಾಗಿ ಹರಡಿದೆ. ಆದರೆ, ಪಾಕಿಸ್ತಾನ ಸರಕಾರ ಇನ್ನೂ ಅಧಿಕೃತವಾಗಿ ಏನನ್ನೂ ಪ್ರಕಟಿಸಿಲ್ಲ. ಪಾಬಾಕಿಸ್ತಾನದ ವಕ್ತ್ ಎಂಬ ಮಾಧ್ಯಮ ಸಂಸ್ಥೆ ತನ್ನ ಟ್ವಿಟರ್ ಹ್ಯಾಂಡಲ್‌ನಲ್ಲಿ ಮುಷರಫ್ ನಿಧನರಾಗಿದ್ದಾರೆ ಎಂಬ ಸುದ್ದಿಯನ್ನು ಒಮ್ಮೆ ಪ್ರಕಟಿಸಿತಾದರೂ ಬಳಿಕ ಅದನ್ನು ಡಿಲೀಟ್ ಮಾಡಿದೆ. ಈ ನಡುವೆ ಪಾಕಿಸ್ತಾನದ ಕೆಲವು ಮಾಧ್ಯಮಗಳು ಇದೊಂದು ಸುಳ್ಳು ಸುದ್ದಿ ಎಂದಿವೆ.
ಪಾಕಿಸ್ತಾನದ ಹಿರಿಯ ಪತ್ರಕರ್ತರೊಬ್ಬರು ಇದು ಸಂಪೂರ್ಣ ಸುಳ್ಳು ಸುದ್ದಿ. ಅವರಿಗೆ ಆರಾಮ ಇಲ್ಲದಿರುವುದು ನಿಜ. ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ, ಸಾವಿನ ಸುದ್ದಿ ಕೇವಲ ವದಂತಿ ಎಂದಿದ್ದಾರೆ.
ಭಾರತದಲ್ಲೂ ಕೆಲವು ಮಾಧ್ಯಮಗಳಲ್ಲಿ ಪರ್ವೇಜ್ ಮುಷರಫ್ ಮೃತರಾದರು ಎಂಬ ಸುದ್ದಿ ಪ್ರಕಟವಾಗಿದ್ದು, ಕೆಲವರು ಸ್ವಲ್ಪ ಹೊತ್ತಿನ ಬಳಿಕ ಅದನ್ನು ಹಿಂದೆಗೆದುಕೊಂಡರು.
ನಿಜವಾದ ಪರಿಸ್ಥಿತಿ ಹೇಗಿದೆ?
ಮುಷರಫ್ ಸಾವಿನ ವದಂತಿಗೆ ಸ್ವತಃ ಕುಟುಂಬಿಕರು ಪರ್ವೇಜ್ ಅವರೇ ಟ್ವಿಟರ್ ಹ್ಯಾಂಡಲ್‌ನಲ್ಲಿ ಸ್ಪಷ್ಟೀಕರಣ ನೀಡಿದ್ದಾರೆ.
ʻʻಅವರು ವೆಂಟಿಲೇಟರ್‌ನಲ್ಲಿಲ್ಲ. ಅಮಿಲೊಯ್ಡೋಸಿಸ್ ಎಂಬ ಸಮಸ್ಯೆಯಿಂದ ಬಳಲುತ್ತಿರುವ ಅವರು ಕಳೆದ ಮೂರು ವಾರಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅತ್ಯಂತ ಕಷ್ಟಕರ ಪರಿಸ್ಥಿತಿಯಲ್ಲಿದ್ದಾರೆ. ಅವರ ಆರೋಗ್ಯ ಸುಧಾರಣೆ ಕಷ್ಟ. ಅಂಗಾಂಗಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಅವರ ದೈನಂದಿನ ಬದುಕು ಸುಧಾರಣೆಯಾಗಲಿ ಎಂದು ಹಾರೈಸಿʼ ಎಂದು ಟ್ವೀಟ್‌ನಲ್ಲಿ ಮನವಿ ಮಾಡಲಾಗಿದೆ.
ಹುಟ್ಟಿದ್ದು ಭಾರತದಲ್ಲಿ!
1943ರಲ್ಲಿ ಭಾರತದ ರಾಜಧಾನಿ ದಿಲ್ಲಿಯಲ್ಲಿ ಹುಟ್ಟಿದ ಪರ್ವೇಜ್ ಮುಷರಫ್ ಅವರ ಕುಟುಂಬ ದೇಶ ವಿಭಜನೆಯ ಸಂದರ್ಭದಲ್ಲಿ ಪಾಕಿಸ್ತಾನಕ್ಕೆ ಹೋಗಿತ್ತು. 1964ರಲ್ಲಿ ಪಾಕಿಸ್ತಾನ ಸೇನೆಯನ್ನು ಸೇರಿದ ಅವರು, 1998ರಲ್ಲಿ ಸೇನಾ ಪಡೆಗಳ ಮುಖ್ಯಸ್ಥರಾದರು. 1999ರಲ್ಲಿ ಭಾರತ-ಪಾಕಿಸ್ತಾನ ನಡುವೆ ಕಾರ್ಗಿಲ್ ಯುದ್ಧ ನಡೆದಾಗ ಸೇನೆಯ ಸಾರಥ್ಯ ವಹಿಸಿದ್ದು ಇದೇ ಮುಫರಫ್. ಆಗ ಪ್ರಧಾನಿ ಆಗಿದ್ದ ನವಾಜ್ ಷರೀಫ್ ಅವರೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದ ಕಾರಣಕ್ಕಾಗಿಯೇ ಸೇನಾ ಬಲ ಪ್ರಯೋಗಕ್ಕಾಗಿ ಮುಷರಫ್ ಕಾರ್ಗಿಲ್ ಮೂಲಕ ಭಾರತದ ಮೇಲೆ ದಾಳಿಗೆ ಮುಂದಾದರು ಎನ್ನಲಾಗಿದೆ. ಭಾರತ ಈ ಪ್ರಯತ್ನವನ್ನು ವಿಫಲಗೊಳಿಸಿದ ಹಿನ್ನೆಲೆಯಲ್ಲಿ ಮುಷರಫ್ ತೀವ್ರ ಮುಖಭಂಗಕ್ಕೆ ಈಡಾಗಿದ್ದರು. ಇದು ನವಾಜ್ ಷರೀಫ್ ಮತ್ತು ಮುಷರಫ್ ನಡುವಿನ ಸಂಬಂಧ ಇನ್ನಷ್ಟು ಹದಗೆಡಲು ಕಾರಣವಾಯಿತು.
ಮುಂದಿನ ಹಂತದಲ್ಲಿ ಮುಷರಫ್ ಸೇನಾ ಕ್ರಾಂತಿಯ ಮೂಲಕ ನವಾಜ್ ಷರೀಫ್ ಅವರನ್ನು ಬದಿಗೊತ್ತಿ ಪಾಕಿಸ್ತಾನದ ಅಧ್ಯಕ್ಷತೆಯನ್ನು ವಹಿಸಿಕೊಂಡರು. ನವಾಜ್ ಷರೀಫ್ ಅವರನ್ನು ಗೃಹ ಬಂಧನದಲ್ಲಿ ಇರಿಸಿ ಅಧಿಕೃತವಾಗಿ ಕ್ರಿಮಿನಲ್ ವಿಚಾರಣೆಯನ್ನು ಆರಂಭಿಸಿದರು.
ಮುಷರಫ್ ಆಡಳಿತಾವಧಿಯಲ್ಲಿ ದೇಶದಲ್ಲಿ ಅರಾಜಕತೆ, ಶೋಷಣೆ ಹೆಚ್ಚಾಯಿತು ಎಂಬ ಆರೋಪವಿತ್ತು. ಜತೆಗೆ ಆಂತರಿಕ ಕಲಹದ ಪರಿಣಾಮವಾಗಿ ಹಲವಾರು ಬಾರಿ ಹತ್ಯಾ ಯತ್ನಗಳು ನಡೆದಿದ್ದವು. ಈ ನಡುವೆ, ಶೌಕತ್ ಅಜೀಜ್ ಅವರು ಪ್ರಧಾನಿ ಪಟ್ಟದಿಂದ ನಿರ್ಗಮಿಸಿದ ಬಳಿಕ ತೀವ್ರ ಪ್ರತಿರೋಧ ಎದುರಾಯಿತು. ಕೊನೆಗೆ 2008ರಲ್ಲಿ ವಾಗ್ದಂಡನೆಯ ಭಯದಿಂದ ದೇಶವನ್ನೇ ಬಿಟ್ಟು ಲಂಡನ್‌ಗೆ ಹೋಗಿ ನೆಲೆಸಿದರು. 2013ರ ಚುನಾವಣೆಯ ಸಂದರ್ಭದಲ್ಲಿ ಮರಳಿ ಬಂದರೂ ಹಲವಾರು ಕೊಲೆ ಪ್ರಕರಣಗಳು, ಬಂಧನ ವಾರಂಟ್‌ಗಳ ನಡುವೆ ಸಿಕ್ಕಿ ಹಾಕಿಕೊಂಡಿದ್ದರಿಂದ ಸ್ಪರ್ಧೆಗೆ ಅವಕಾಶ ದೊರೆಯಲಿಲ್ಲ. ಮರಳಿ ಅಧಿಕಾರ ಪಡೆದ ನವಾಜ್ ಷರೀಫ್ ಅವರು ಮುಷರಫ್ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾದರು. 2017ರಲ್ಲಿ ದೇಶ ಬಿಟ್ಟು ದುಬೈ ಸೇರಿಕೊಂಡ ಅವರಿಗೆ 2019ರಲ್ಲಿ ದೇಶದ್ರೋಹದ ಆಪಾದನೆ ಹೊರಿಸಿ ಮರಣ ದಂಡನೆ ಶಿಕ್ಷೆ ವಿಧಿಸಲಾಯಿತು. ಆದರೆ ಬಳಿಕ ಲಾಹೋರ್ ಕೋರ್ಟ್ ಅದನ್ನು ಜೀವಾವಧಿಯಾಗಿ ಪರಿವರ್ತಿಸಿತು.
ಈಗ ಎಲ್ಲಿದ್ದಾರೆ?
ಕಳೆದ ಕೆಲವು ಸಮಯದಿಂದ ತೀವ್ರ ಅನಾರೋಗ್ಯದಲ್ಲಿರುವ ಮುಷರಫ್ ಮೂರು ವಾರಗಳಿಂದ ಮತ್ತೆ ಆಸ್ಪತ್ರೆ ಸೇರಿದ್ದಾರೆ. ಅಲ್ಲಿಂದ ಬಂದಿರುವ ಸಾವಿನ ಸುದ್ದಿ ಸುಳ್ಳು ಎಂದು ಹೇಳಲಾಗುತ್ತಿದೆ. ಆದರೆ, ಹೆಚ್ಚು ದಿನ ದಿನ ಬದುಕುವುದು ಕಷ್ಟ ಎಂದು ಕುಟುಂಬದವರೇ ತಿಳಿಸಿದ್ದಾರೆ.