Site icon Vistara News

Cyrus Mistry | ಟಾಟಾ ಸಂಸ್ಥೆ ಮಾಜಿ ಚೇರ್ಮನ್‌ ಸೈರಸ್‌ ಮಿಸ್ತ್ರಿ ರಸ್ತೆ ಅಪಘಾತದಲ್ಲಿ ವಿಧಿವಶ, ಮೋದಿ ಸಂತಾಪ

ಮುಂಬೈ: ಟಾಟಾ ಸನ್ಸ್‌ ಸಂಸ್ಥೆಯ ಮಾಜಿ ಚೇರ್ಮನ್‌ ಸೈರಸ್‌ ಮಿಸ್ತ್ರಿ (54) (Cyrus Mistry) ಅವರು ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ. ಗುಜರಾತ್‌ನ ಅಹಮದಾಬಾದ್‌ನಿಂದ ಮುಂಬೈಗೆ ಮರ್ಸಿಡೀಸ್ ಕಾರ್‌ನಲ್ಲಿ ತೆರಳುತ್ತಿದ್ದಾಗ ಪಾಲ್ಘರ್‌ನಲ್ಲಿ ಅಪಘಾತ ಸಂಭವಿಸಿದೆ.

ಅಪಘಾತದಿಂದ ನಜ್ಜುಗುಜ್ಜಾಗಿರುವ ಕಾರು.

“ಪಾಲ್ಘರ್‌ ಬಳಿಯ ಸೂರ್ಯ ನದಿಯ ಸೇತುವೆ ಮೇಲೆ ಮಧ್ಯಾಹ್ನ 3.15ರ ಸುಮಾರಿಗೆ ಅಪಘಾತ ಸಂಭವಿಸಿದೆ. ಸೈರಸ್‌ ಮಿಸ್ತ್ರಿ ಅವರ ಜತೆ ಕಾರು ಚಾಲಕ ಸೇರಿ ನಾಲ್ವರು ಪ್ರಯಾಣಿಸುತ್ತಿದ್ದರು. ಮಿಸ್ತ್ರಿ ಸೇರಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಗಾಯಗೊಂಡ ಮತ್ತಿಬ್ಬರನ್ನು ಗುಜರಾತ್‌ ಆಸ್ಪತ್ರೆಗೆ ದಾಖಲಿಸಲಾಗಿದೆ” ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸೈರಸ್‌ ಮಿಸ್ತ್ರಿ ಅವರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ರತನ್ ಟಾಟಾ ಅವರು ನಿವೃತ್ತಿ ಘೋಷಿಸಿದ ಬಳಿಕ ಸೈರಸ್ ಮಿಸ್ತ್ರಿ ಅವರು 2012ರಲ್ಲಿ ಟಾಟಾ ಸನ್ಸ್ ಚೇರ್ಮನ್ ಆಗಿ ನೇಮಕವಾಗಿದ್ದರು. ಆದರೆ, ಭಿನ್ನಾಭಿಪ್ರಾಯ ಉಂಟಾದ ಹಿನ್ನೆಲೆಯಲ್ಲಿ ಸೈರಸ್ ಮಿಸ್ತ್ರಿ ಅವರನ್ನು ಅವರ ಹುದ್ದೆಯಿಂದ 2016ರಲ್ಲಿ ಕೆಳಗಿಳಿಸಲಾಗಿತ್ತು.

ನರೇಂದ್ರ ಮೋದಿ ಸಂತಾಪ

ಸೈರಸ್‌ ಮಿಸ್ತ್ರಿ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. “ಮಿಸ್ತ್ರಿ ಅವರ ಅಗಲಿಕೆಯ ಸುದ್ದಿ ತಿಳಿದು ಮನಸ್ಸಿಗೆ ಆಘಾತವಾಗಿದೆ. ಅವರ ನಿಧನದಿಂದ ಕೈಗಾರಿಕೆ ಹಾಗೂ ವಾಣಿಜ್ಯ ಕ್ಷೇತ್ರಕ್ಕೆ ಅಪಾರ ನಷ್ಟವಾಗಿದೆ. ಮಿಸ್ತ್ರಿ ಆತ್ಮಕ್ಕೆ ಶಾಂತಿ ಸಿಗಲಿ” ಎಂದು ಟ್ವೀಟ್‌ ಮಾಡಿದ್ದಾರೆ.

ಇದನ್ನೂ ಓದಿ | TATA | ಟಾಟಾ ಸನ್ಸ್‌ ಅಧ್ಯಕ್ಷ, ಟಾಟಾ ಟ್ರಸ್ಟ್‌ ಅಧ್ಯಕ್ಷರಾಗುವಂತಿಲ್ಲ, ಮಿಸ್ತ್ರಿ ಪ್ರಕರಣ ಮರುಕಳಿಸದಿರಲು ಕ್ರಮ

Exit mobile version