ಹೈದರಾಬಾದ್: ತೆಲಂಗಾಣದ ಮಾಜಿ ಸಿಎಂ ಕೆ. ಚಂದ್ರಶೇಖರ ರಾವ್ (K Chandrasekhar Rao) ಅವರು ಜಾರಿ ಬಿದ್ದು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಎರ್ರವೇಲಿಯ ತಮ್ಮ ಫಾರಂಹೌಸ್‌ನಲ್ಲಿ ನಿನ್ನೆ ರಾತ್ರಿ ಅವರು ಜಾರಿ ಬಿದ್ದಿದ್ದಾರೆ. ಬಿದ್ದ ಪರಿಣಾಮ ಗಾಯಗೊಂಡಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ತಡರಾತ್ರಿ ಅವರನ್ನು ಹೈದರಾಬಾದ್‌ನ ಯಶೋದಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಕೆ. ಚಂದ್ರಶೇಖರ್ ರಾವ್ ಅವರು ಬಿದ್ದ ಪರಿಣಾಮ ಸೊಂಟ ಮುರಿತಕ್ಕೆ ಒಳಗಾಗಿದೆ. ಶಸ್ತ್ರಚಿಕಿತ್ಸೆಯ ಅಗತ್ಯವಿರಬಹುದು ಎಂದು ವೈದ್ಯರು ಶಂಕಿಸಿದ್ದಾರೆ.
ಕಳೆದ ಮೂರು ದಿನಗಳಿಂದ ಮಾಜಿ ಮುಖ್ಯಮಂತ್ರಿಗಳು ತಮ್ಮ ಮನೆಯಲ್ಲಿ ಪಕ್ಷದ ಸದಸ್ಯರನ್ನು ಭೇಟಿಯಾಗುತ್ತಿದ್ದರು. ನಿನ್ನೆ ನಡೆದ ನೂತನ ಸಿಎಂ ರೇವಂತ್ ರೆಡ್ಡಿ (Revanth Reddy) ಪದಗ್ರಹಣ ಸಮಾರಂಭದಲ್ಲಿ ಅವರು ಕಾಣಿಸಿಕೊಂಡಿರಲಿಲ್ಲ. ಇತ್ತೀಚೆಗೆ ಮುಕ್ತಾಯಗೊಂಡ ಅಸೆಂಬ್ಲಿ ಚುನಾವಣೆಯಲ್ಲಿ ಕೆಸಿಆರ್ ನೇತೃತ್ವದ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಅನ್ನು ಕಾಂಗ್ರೆಸ್ ಸೋಲಿಸಿದೆ.
ಕೆಸಿಆರ್ ತೆಲಂಗಾಣದ ಸ್ಥಾಪಕ ಮುಖ್ಯಮಂತ್ರಿಯಾಗಿದ್ದು, 2014ರಿಂದ 2023ರವರೆಗೆ ಎರಡು ಅವಧಿಗೆ ತೆಲಂಗಾಣ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಕೆಸಿಆರ್ ತೆಲಂಗಾಣದ ಎರಡು ವಿಧಾನಸಭೆ ಸ್ಥಾನಗಳಲ್ಲಿ ಸ್ಪರ್ಧಿಸಿದ್ದರು. ಗಜ್ವೆಲ್ ಕ್ಷೇತ್ರದಲ್ಲಿ ಗೆದ್ದರು. ಆದರೆ ಕಾಮರೆಡ್ಡಿ ಕ್ಷೇತ್ರದಲ್ಲಿ ಸೋತರು.
ಕೆಸಿಆರ್ ವ್ಯಾಪಕವಾದ ಚುನಾವಣಾ ಪ್ರಚಾರ ನಡೆಸಿದ್ದರು. ಪಕ್ಷವು ಬಡವರಿಗಾಗಿ ಮಾಡಿದ ತನ್ನ ಕಲ್ಯಾಣ ಯೋಜನೆಗಳನ್ನು ಹೈಲೈಟ್ ಮಾಡಲು ಪ್ರಯತ್ನಿಸಿತು. ಆದರೆ ಕೆಲವು ಯೋಜನೆಗಳ ಅನುಷ್ಠಾನ, ಹಣ ಹಂಚಿಕೆಯಲ್ಲಿ ತಾರತಮ್ಯ ಮತ್ತು ಭ್ರಷ್ಟಾಚಾರದ ಆರೋಪ ಕೇಳಿಬಂತು. ಪರಿಣಾಮ ಕೆಸಿಆರ್ ಹಲವು ಶಾಸಕರಿಗೆ ಚುನಾವಣಾ ಟಿಕೆಟ್ ನೀಡಿರಲಿಲ್ಲ. ಪರಿಣಾಮ ಈ ಪೈಕಿ ಬಹುತೇಕ ಸ್ಥಾನಗಳು ಕಾಂಗ್ರೆಸ್ ಪಾಲಾಗಿದೆ.
ಇದನ್ನೂ ಓದಿ: Revant Reddy : ತೆಲಂಗಾಣ ಸಿಎಂ ಪ್ರಮಾಣವಚನ ಸ್ವೀಕಾರಕ್ಕೆ ಡಿಕೆಶಿ, ಸಿದ್ದರಾಮಯ್ಯ ಸಾಥ್