Site icon Vistara News

ಚುನಾವಣೆಯಲ್ಲಿ ಈ ಅಭ್ಯರ್ಥಿ ಗೆಲ್ಲುತ್ತಾರೆ ಎಂದು ಭವಿಷ್ಯ ನುಡಿದ ಗಿಳಿ; ಬಳಿಕ ಗಿಳಿ ಮಾಲೀಕನ ಬಂಧನ!

Fortune Teller

Fortune Teller Arrested After Predicting NDA Candidate's Victory In Tamil Nadu

ಚೆನ್ನೈ: ಲೋಕಸಭೆ ಚುನಾವಣೆಯಲ್ಲಿ (Lok Sabha Election 2024) ಗೆಲುವು ಸಾಧಿಸಲು ಅಭ್ಯರ್ಥಿಗಳು ಇನ್ನಿಲ್ಲದ ರಣತಂತ್ರ ರೂಪಿಸುತ್ತಿದ್ದಾರೆ. ಇದರ ಜತೆಗೆ ನಾಮಪತ್ರ ಸಲ್ಲಿಕೆಗೂ ಮುನ್ನ ಮನೆ ದೇವರಿಗೆ ಪೂಜೆ, ಜ್ಯೋತಿಷಿಗಳ ಬಳಿ ತೆರಳಿ ಭವಿಷ್ಯ ಕೇಳುವುದು, ಆರಾಧಿಸುವ ಸ್ವಾಮೀಜಿಗಳ ಆಶೀರ್ವಾದ ಪಡೆಯುವುದು ಸೇರಿ ಗೆಲುವಿಗಾಗಿ ಹಲವು ರೀತಿಯ ಪ್ರಯತ್ನ ಮಾಡುತ್ತಿದ್ದಾರೆ. ಇನ್ನು ತಮಿಳುನಾಡಿನ ಕಡಲೂರು (Cuddalore) ಲೋಕಸಭೆ ಕ್ಷೇತ್ರದಲ್ಲಿ ಅಭ್ಯರ್ಥಿಯೊಬ್ಬರು ಚುನಾವಣೆ ಗೆಲುವಿಗಾಗಿ ಗಿಳಿ ಶಾಸ್ತ್ರದ (Fortune Teller) ಮೊರೆ ಹೋಗಿದ್ದಾರೆ. ಈಗ ಗಿಳಿಯನ್ನು (Parrot) ಇಟ್ಟುಕೊಂಡು ಜನರ ಭವಿಷ್ಯ ತಿಳಿಸುತ್ತಿದ್ದ ಗಿಳಿಯ ಮಾಲೀಕ ಕಂಬಿ ಎಣಿಸುವಂತಾಗಿದೆ.

ಸಿನಿಮಾ ನಿರ್ದೇಶಕರೂ ಆಗಿರುವ ಥಂಕರ್‌ ಬಚ್ಚನ್‌ ಅವರು ಬಿಜೆಪಿ ಮಿತ್ರಪಕ್ಷವಾದ ಪಟ್ಟಾಲಿ ಮಕ್ಕಳ್‌ ಕಚ್ಚಿ (PMK0 ಪಕ್ಷದಿಂದ ಕಣಕ್ಕಿಳಿದಿದ್ದಾರೆ. ಇತ್ತೀಚೆಗೆ ಅವರು ಚುನಾವಣೆ ಪ್ರಚಾರದ ವೇಳೆ ಸೆಲ್ವರಾಜ್‌ ಎಂಬ ಗಿಳಿ ಶಾಸ್ತ್ರದವನ ಬಳಿ ತೆರಳಿದ್ದಾರೆ. ಚುನಾವಣೆಯಲ್ಲಿ ನನ್ನ ಅದೃಷ್ಟ ಹೇಗಿದೆ ಹೇಳಿ ಎಂದಿದ್ದಾರೆ. ಆಗ ಗಿಳಿಯ ಮೂಲಕ ಸೆಲ್ವರಾಜ್‌ ಅವರು ಭವಿಷ್ಯ ನುಡಿದಿದ್ದಾರೆ. ಗಿಳಿಯು ಥಂಕರ್‌ ಬಚ್ಚನ್‌ ಅವರೇ ಗೆಲುವು ಸಾಧಿಸುತ್ತಾರೆ ಎಂಬುದಾಗಿ ಸೂಚಿಸಿದೆ. ಆದರೆ, ಈ ಸುದ್ದಿಯು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಲೇ ಕಡಲೂರು ಅರಣ್ಯ ಇಲಾಖೆ ಪೊಲೀಸರು ಸೆಲ್ವರಾಜ್‌ ಅವರನ್ನು ಬಂಧಿಸಿದ್ದಾರೆ. ಗಿಳಿಯನ್ನು ಪಂಜರದಿಂದ ಬಿಟ್ಟಿದ್ದಾರೆ. ಬಳಿಕ ಸೆಲ್ವರಾಜ್‌ ಅವರಿಗೆ ಎಚ್ಚರಿಕೆ ನೀಡಿ ಬಿಡುಗಡೆ ಮಾಡಿದ್ದಾರೆ.

ಮತಗಳಿಗಾಗಿ ಜನರಿಗೆ ಕ್ಷೌರ

ತಮಿಳುನಾಡಿನ ರಾಮನಾಥಪುರಂ ಲೋಕಸಭೆ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಪರಿರಾಜನ್‌ ಎಂಬುವರು ಚುನಾವಣೆ ಪ್ರಚಾರದ ಭಾಗವಾಗಿ ಒಂದು ದಿನದ ಮಟ್ಟಿಗೆ ಕ್ಷೌರಿಕನ ಕೆಲಸ ಮಾಡಿದ್ದಾರೆ. ಜನರಿಗೆ ಕಟಿಂಗ್‌ ಮಾಡಿ, ಅವರ ಗಡ್ಡ ಬೋಳಿಸಿ, ಅವರು ಸಲೂನ್‌ನಿಂದ ಹೊರಡುವಾಗ ಕೈ ಮುಗಿದು ಮತ ಕೇಳುತ್ತಿದ್ದಾರೆ. ಇದು ಸುತ್ತಮುತ್ತಲಿನ ಭಾಗದ ಜನರ ಗಮನವನ್ನೂ ಸೆಳೆದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಇವರ ಚಟುವಟಿಕೆ ಕುರಿತು ಪರ-ವಿರೋಧ ಚರ್ಚೆ ವ್ಯಕ್ತವಾಗುತ್ತಿದೆ.

ತರಕಾರಿ ಮಾರಿ ಪ್ರಚಾರ

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರೂ ಆಗಿರುವ ಎಸ್.‌ ದಾಮೋದರನ್‌ ಅವರು ತಮಿಳುನಾಡಿ ತಿರುಚಿರಪಳ್ಳಿ ಲೋಕಸಭೆ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಇವರು ಜನರಿಗೆ ಹುಸಿ ಭರವಸೆಗಳನ್ನು ನೀಡುವ, ಅಬ್ಬರದ ಪ್ರಚಾರ ಮಾಡುವ, ಹಣ ಚೆಲ್ಲುವ ಬದಲು ತರಕಾರಿ ಮಾರಾಟಗಾರರ ಜತೆ ಮಾತನಾಡುವ, ಅವರೂ ತರಕಾರಿ, ಹೂವು, ಹಾರಗಳನ್ನು ಮಾರಾಟ ಮಾಡುವ ಮೂಲಕ ವಿಭಿನ್ನವಾಗಿ ಪ್ರಚಾರ ಕೈಗೊಂಡಿದ್ದಾರೆ. ಇವರು ತಿರುಚಿರಪಳ್ಳಿಯ ಗಾಂಧಿ ಮಾರ್ಕೆಟ್‌ನಲ್ಲಿ ತರಕಾರಿ ಮಾರಾಟ ಮಾಡಿ ಪ್ರಚಾರ ನಡೆಸಿದ ವಿಡಿಯೊ ಈಗ ವೈರಲ್‌ ಆಗಿದೆ.

ಇದನ್ನೂ ಓದಿ: Lok Sabha Election : ಒಂದೇ ದಿನ ಹತ್ತು ಗ್ರಾಮಗಳಲ್ಲಿ ಚುನಾವಣಾ ಪ್ರಚಾರಕ್ಕೆ ಡಾ. ಸುಧಾಕರ್ ಸಜ್ಜು

Exit mobile version