ಶ್ರೀನಗರ: ನಾಲ್ಕು ತಿಂಗಳ ಹಿಂದೆ ಕಾಂಗ್ರೆಸ್ ತೊರೆದು, ಕಾಂಗ್ರೆಸ್ ನಾಯಕತ್ವದ ಕುರಿತು ಬಹಿರಂಗವಾಗಿ ಟೀಕಿಸಿ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿ, ಕಾಶ್ಮೀರದಲ್ಲಿ ಹೊಸ ಪಕ್ಷ ಸ್ಥಾಪಿಸಿದ ಗುಲಾಂ ನಬಿ ಆಜಾದ್ (Ghulam Nabi Azad) ಅವರು ಜಮ್ಮು-ಕಾಶ್ಮೀರದ ಚುನಾವಣೆಗೂ ಮುನ್ನವೇ ಮತ್ತೆ ಕಾಂಗ್ರೆಸ್ ಸೇರ್ಪಡೆಯಾಗುವ ಕುರಿತು ಚಿಂತನೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಕಾಶ್ಮೀರದಲ್ಲಿ ಚುನಾವಣೆ ಘೋಷಣೆ ಯಾವಾಗ ಎಂಬುದು ಗೊತ್ತಿಲ್ಲ. ಇನ್ನು ನೂತನ ಡೆಮಾಕ್ರಟಿಕ್ ಪ್ರೊಗ್ರೆಸ್ಸಿವ್ ಆಜಾದ್ ಪಾರ್ಟಿಗೆ ಜನರ ಬೆಂಬಲವೂ ಅಷ್ಟಕ್ಕಷ್ಟೇ ಇದೆ. ಅದರಲ್ಲೂ, ಕಾಂಗ್ರೆಸ್ ನಾಯಕತ್ವ ಬಿಕ್ಕಟ್ಟು ಬಹುತೇಕ ಅಂತ್ಯವಾಗಿದ್ದು, ಗಾಂಧಿಯೇತರ ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾಗಿದ್ದಾರೆ. ಕಾಂಗ್ರೆಸ್‌ಗೂ ಆಜಾದ್ ಅವರ ಅವಶ್ಯಕತೆ ಇದೆ. ಹಾಗಾಗಿ, ಆಜಾದ್ ಅವರು ಮರಳಿ ಗೂಡಿಗೆ ಹಿಂತಿರುಗಲಿದ್ದಾರೆ ಎನ್ನಲಾಗಿದೆ. ಇದರ ಕುರಿತು ಕಾಂಗ್ರೆಸ್ ನಾಯಕರೊಬ್ಬರು ಮಾತನಾಡಿದ್ದು, “ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು” ಎಂದು ಹೇಳಿದ್ದಾರೆ. ಹಾಗಾಗಿ, ಗುಲಾಂ ನಬಿ ಆಜಾದ್ ವಾಪಸಾತಿಯನ್ನು ನಿರೀಕ್ಷಿಸಲಾಗಿದೆ.
ಭಾರತ್ ಜೋಡೋ ಯಾತ್ರೆಗೆ ಗುಲಾಂ ನಬಿ ಆಜಾದ್ ಅವರನ್ನು ಆಹ್ವಾನಿಸಲಾಗುತ್ತದೆ. ಯಾತ್ರೆಯ ಸಂಚಾಲಕ ದಿಗ್ವಿಜಯ್ ಸಿಂಗ್ ಅವರೇ ಆಹ್ವಾನಿಸಲಿದ್ದಾರೆ. ಅಂಬಿಕಾ ಸೋನಿ ಅವರು ಆಜಾದ್ ಹಾಗೂ ಪಕ್ಷದ ನಡುವಿನ ಭಿನ್ನಾಭಿಪ್ರಾಯ ಶಮನಗೊಳಿಸಲಿದ್ದಾರೆ ಎನ್ನಲಾಗುತ್ತಿದೆ. ಇನ್ನು ಆಜಾದ್ ಅವರನ್ನು ಮನವೊಲಿಸಲು ಜಿ-23 ಬಣದ ನಾಯಕರನ್ನೇ ಬಳಸಲು ಕಾಂಗ್ರೆಸ್ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.
ಇದರ ಬಗ್ಗೆ ಆಜಾದ್ ಹೇಳುವುದೇನು?
ಕಾಂಗ್ರೆಸ್‌ಗೆ ವಾಪಸಾಗುವ ಕುರಿತು ಪ್ರತಿಕ್ರಿಯಿಸಿದ ಗುಲಾಂ ನಬಿ ಆಜಾದ್, “ಇಂತಹ ಸುದ್ದಿ ಹೇಗೆ ಮತ್ತು ಏಕೆ ಹರಡಿತು ಎಂಬುದೇ” ಅಚ್ಚರಿ ಎನ್ನುವ ಮೂಲಕ ವಾಪಸಾತಿ ಸುದ್ದಿಯನ್ನು ತಳ್ಳಿಹಾಕಿದ್ದಾರೆ. “ನಾನು ಕಾಂಗ್ರೆಸ್‌ನ ಯಾವುದೇ ನಾಯಕರನ್ನು ಸಂಪರ್ಕಿಸಿಲ್ಲ ಹಾಗೂ ಕಾಂಗ್ರೆಸ್ ನಾಯಕರು ಕೂಡ ನನ್ನ ಜತೆ ಮಾತನಾಡಿಲ್ಲ. ಏನಾದರೂ ಆಗಲಿ, ನಮ್ಮ ಪಕ್ಷದಿಂದಲೇ ಹೋರಾಡುತ್ತೇನೆ” ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ | Ghulam Nabi Azad | ಗುಲಾಂ ನಬಿಗೆ ಬೆಂಬಲಿಸಿ ಜಮ್ಮುವಿನಲ್ಲಿ 20 ನಾಯಕರು ಕಾಂಗ್ರೆಸ್‌ಗೆ ವಿದಾಯ!