Site icon Vistara News

Indian Army: ಗಡಿಯೊಳಗೆ ನುಸುಳುತ್ತಿದ್ದ ಉಗ್ರರ ಮೇಲೆ ಗುಂಡಿನ ಮಳೆ, ಒಬ್ಬ ಟೆರರಿಸ್ಟ್ ಖತಂ!

Terrorist Attack on army in kashmir and indian army fight back

ನವದೆಹಲಿ: ಶುಕ್ರವಾರ ತಡರಾತ್ರಿ ಜಮ್ಮುವಿನ ಅಖ್ನೂರ್‌ನಲ್ಲಿರುವ (Jammu Akhnoor) ಖೌರ್‌ನ ಅಂತಾರಾಷ್ಟ್ರೀಯ ಗಡಿಯಲ್ಲಿ(international border) ಭಾರತೀಯ ಸೇನೆಯು(Indian Army), ಉಗ್ರರ ಪ್ರಮುಖ ಒಳನುಸುಳುವಿಕೆಯ ಪ್ರಯತ್ನವನ್ನು ವಿಫಲಗೊಳಿಸಿದೆ. ಈ ವೇಳೆ, ಕನಿಷ್ಠ ಒಬ್ಬ ಭಯೋತ್ಪಾದಕನನ್ನು ಹತ್ಯೆ ಮಾಡಿದೆ(One Terrorist Killed) ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾರೀ ಶಸ್ತ್ರಾಸ್ತ್ರಗಳೊಂದಿಗೆ ನಾಲ್ವರು ಉಗ್ರರು ಗಡಿಯೊಳಗೇ ನುಸುಳುತ್ತಿದ್ದರು. ಈ ಮಾಹಿತಿ ಗೊತ್ತಾಗುತ್ತಿದ್ದಂತೆ ಭಾರತೀಯ ಭದ್ರತಾ ಪಡೆಗಳು ಕಾರ್ಯಾಚರಣೆಯನ್ನು ನಡೆಸಿ, ಕನಿಷ್ಠ ಒಬ್ಬ ಉಗ್ರನನ್ನು ಕೊಂದು ಹಾಕಿದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಒಳನುಸುಳುತ್ತಿದ್ದ ಭಯೋತ್ಪಾದಕರ ಮೇಲೆ ಪಡೆಗಳು ಪರಿಣಾಮಕಾರಿ ಗುಂಡಿನ ದಾಳಿ ನಡೆಸಿದವು. ಮೃತನ ಶವವನ್ನು ಆತನ ಸಹಚರರು ಗಡಿಯಾಚೆ ಎಳೆದೊಯ್ದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಂತಾರಾಷ್ಟ್ರೀಯ ಗಡಿಯ ಅಖ್ನೂರ್‌ನ ಸೆಕ್ಟರ್‌ನಲ್ಲಿ ಒಳನುಸುಳುವಿಕೆ ಪ್ರಯತ್ನವನ್ನು ವಿಫಲಗೊಳಿಸಲಾಗಿದೆ. ಡಿಸೆಂಬರ್ 23 ರ ರಾತ್ರಿ ಸ್ವಂತ ಕಣ್ಗಾವಲು ಸಾಧನಗಳ ಮೂಲಕ ನಾಲ್ವರು ಭಯೋತ್ಪಾದಕರು ಒಳನುಸುಳುತ್ತಿರುವುದನ್ನು ಪತ್ತೆ ಹಚ್ಚಲಾಯಿತು. ಬಳಿಕ ಪರಿಣಾಮಕಾರಿಯಾಗಿ ಭಯೋತ್ಪಾದಕರತ್ತ ಗುಂಡು ಹಾರಿಸಲಾಯಿತು. ಆಗ ಒಬ್ಬ ಉಗ್ರ ಮೃತಪಟ್ಟಿದ್ದಾನೆ. ತಮ್ಮ ಸಹಚರನ ಮೃತ ದೇಹವನ್ನು ಹಿಂದಕ್ಕೆ ಎಳೆದುಕೊಂಡು ಹೋಗಿದ್ದಾರೆ ಎಂದು ಭಾರತೀಯ ಸೇನೆಯ ವೈಟ್ ನೈಟ್ ಕಾರ್ಪ್ಸ್ ಎಕ್ಸ್‌ ವೇದಿಕೆಯಲ್ಲಿ ಬರೆದುಕೊಂಡಿದೆ.

ರಾಜೌರಿ ಸೆಕ್ಟರ್‌ನ ಡೇರಾ ಕಿ ಗಲಿ ಅರಣ್ಯ ಪ್ರದೇಶದಲ್ಲಿ ಗುರುವಾರ ಭಯೋತ್ಪಾದಕರು ನಾಲ್ವರು ಸೇನಾ ಯೋಧರನ್ನು ಕೊಂದ ನಂತರ ಉಗ್ರರನ್ನು ಪತ್ತೆಹಚ್ಚಲು ಬೃಹತ್ ಶೋಧ ಕಾರ್ಯಾಚರಣೆ ನಡೆಯುತ್ತಿರುವಾಗಲೇ ಈ ಘಟನೆ ನಡೆದಿದೆ. ಭಯೋತ್ಪಾದಕರ ದಾಳಿಯಲ್ಲಿ ಇತರ ಮೂವರು ಗಾಯಗೊಂಡಿದ್ದಾರೆ.

ಗುರುವಾರ ಸೇನಾ ವಾಹನಗಳು ರಾಜೌರಿಯ ಸೆಕ್ಟರ್‌ನ ಡೇರಾ ಕಿ ಗಲಿ ಪ್ರದೇಶದಲ್ಲಿ ಹೋಗುತ್ತಿರುವಾಗ ಉಗ್ರರು ಭಾರೀ ದಾಳಿ ನಡೆಸಿದ್ದಾರೆ. ಈ ವೇಳೆ ನಡೆದ ಕಾರ್ಯಾಚರಣೆಯಲ್ಲಿ ಭಾರತದ ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ. ಡಿಸೆಂಬರ್ 21 ರಂದು ಮಧ್ಯಾಹ್ನ 3.45 ರ ಸುಮಾರಿಗೆ ಸೈನಿಕರನ್ನು ಹೊತ್ತ ಎರಡು ಸೇನಾ ವಾಹನಗಳು ಕಾರ್ಯಾಚರಣೆಯ ಸ್ಥಳಕ್ಕೆ ತೆರಳುತ್ತಿದ್ದವು, ಅದರ ಮೇಲೆ ಭಯೋತ್ಪಾದಕರು ಗುಂಡು ಹಾರಿಸಿದ್ದಾರೆ. ಕೂಡಲೇ ನಮ್ಮ ಸೈನಿಕರು ಪ್ರತಿದಾಳಿ ನಡೆಸಿದರು ಎಂದು ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ. ಈಗಲೂ ಕಾರ್ಯಾಚರಣೆಯು ಜಾರಿಯಲ್ಲಿದೆ.

ಈ ಸುದ್ದಿಯನ್ನೂ ಓದಿ: Terror Attack: ಉಗ್ರರ ಹೊಂಚು ದಾಳಿಯಲ್ಲಿ ನಾಲ್ವರು ಯೋಧರು ಹುತಾತ್ಮ

Exit mobile version