Site icon Vistara News

iPhone : ‌ತೆಲಂಗಾಣದಲ್ಲಿ ಐಫೋನ್‌ ಉತ್ಪಾದನೆಯ ಘಟಕ ಸ್ಥಾಪನೆಗೆ ಫಾಕ್ಸ್‌ಕಾನ್‌ ಒಪ್ಪಿಗೆ

iPhone

ಬೆಂಗಳೂರು: ಐಫೋನ್‌ ಉತ್ಪಾದಿಸುವ ಪ್ರಮುಖ ಗುತ್ತಿಗೆದಾರ, ತೈವಾನ್‌ ಮೂಲದ ಫಾಕ್ಸ್‌ಕಾನ್‌ ಟೆಕ್ನಾಲಜಿ ಗ್ರೂಪ್‌, ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಕೊಂಗಾರಾ ಕಲಾನ್‌ನಲ್ಲಿ (Kongara Kalan) ತನ್ನ ಐಫೋನ್‌ (iPhone) ಉತ್ಪಾದನಾ ಘಟಕವನ್ನು ತೆರೆಯಲಿದೆ. ಫಾಕ್ಸ್‌ಕಾನ್‌ ಸಮೂಹದ ಅಧ್ಯಕ್ಷ ಯಂಗ್‌ ಲಿಯು ಅವರು ತೆಲಂಗಾಣ ಸಿಎಂ ಕೆ. ಚಂದ್ರಶೇಖರ ರಾವ್‌ ಅವರನ್ನು ಹೈದರಾಬಾದ್‌ನಲ್ಲಿ ಮಾರ್ಚ್‌ 2ರಂದು ಭೇಟಿಯಾಗಿದ್ದು, ತೆಲಂಗಾಣದಲ್ಲಿ ಎಲೆಕ್ಟ್ರಾನಿಕ್ಸ್‌ ಉತ್ಪಾದನಾ ಘಟಕ ಸ್ಥಾಪನೆಗೆ ಸಮ್ಮತಿಸಲಾಗಿದೆ. ಈ ಘಟಕದ ಪರಿಣಾಮ 1 ಲಕ್ಷಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ.

ಕರ್ನಾಟಕದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಫಾಕ್ಸ್‌ಕಾನ್‌ ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮಾಡಲಿದೆ ಹಾಗೂ ಇದರಿಂದ 1 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಘೋಷಿಸಿದ ಬಳಿಕ ಈ ಬೆಳವಣಿಗೆ ನಡೆದಿದೆ. ದೊಡ್ಡಬಳ್ಳಾಪುರ ಮತ್ತು ದೇವನಹಳ್ಳಿ ತಾಲ್ಲೂಕಿನಲ್ಲಿ ಬೆಂಗಳೂರು ಏರ್‌ಪೋರ್ಟ್‌ ಸಮೀಪ ಸ್ಥಳವನ್ನು ಗುರುತಿಸಲಾಗಿತ್ತು.

ತೆಲಂಗಾಣದಲ್ಲಿ ಘಟಕ ಸ್ಥಾಪನೆ ಬಗ್ಗೆ ಫಾಕ್ಸ್‌ಕಾನ್‌ ಅಧ್ಯಕ್ಷ ಹೇಳಿದ್ದೇನು?

ತೆಲಂಗಾಣದ ಕೊಂಗಾರಾ ಕಲಾನ್‌ನಲ್ಲಿ ಉತ್ಪಾದನೆ ಘಟಕ ಸ್ಥಾಪನೆಗೆ ಫಾಕ್ಸ್‌ಕಾನ್‌ ಬದ್ಧವಾಗಿದ್ದು, ರಾಜ್ಯ ಸರ್ಕಾರದ ಸಂಪೂರ್ಣ ಸಹಕಾರವನ್ನು ನಿರೀಕ್ಷಿಸುತ್ತಿದೆ ಎಂದು ಫಾಕ್ಸ್‌ ಕಾನ್‌ ಅಧ್ಯಕ್ಷ ಯಂಗ್‌ ಲಿಯು ಸಿಎಂ ಕೆ.ಚಂದ್ರಶೇಖರ ರಾವ್‌ ಅವರಿಗೆ ಪತ್ರ ಬರೆದಿದ್ದಾರೆ.

ಕರ್ನಾಟಕದಲ್ಲಿ ಘಟಕ ಸ್ಥಾಪನೆ ಸಂಬಂಧ ಫಾಕ್ಸ್‌ಕಾನ್‌ ವಿವರಣೆ ಏನು?

ಬೆಂಗಳೂರಿನಲ್ಲಿ ತನ್ನ ಪ್ರಾಜೆಕ್ಟ್‌ ಎಲಿಫೆಂಟ್‌ ಅನ್ನು (Project Elephant) ಮುಂದಿನ ಹಂತಕ್ಕೆ ಕೊಂಡೊಯ್ಯುವ ಬಗ್ಗೆ ಫಾಕ್ಸ್‌ಕಾನ್‌ ವಿಶ್ವಾಸ ಹೊಂದಿದೆ. ಇದರಿಂದ ಕಂಪನಿಯ ಎಲೆಕ್ಟ್ರಿಕ್‌ ವಾಹನ, ಮೆಕಾನಿಕಲ್‌, ಐಸಿ ಡಿಸೈನ್‌, ಸೆಮಿಕಂಡಕ್ಟರ್‌ ಯೋಜನೆಗೆ ಸಹಕಾರಿಯಾಗಲಿದೆ ಎಂದು ಕಂಪನಿಯ ಅಧ್ಯಕ್ಷ ಯಂಗ್‌ ಲಿಯು ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬರೆದಿರುವ ಪತ್ರದಲ್ಲಿ ಸೋಮವಾರ ತಿಳಿಸಿದ್ದಾರೆ.

Exit mobile version