ನವದೆಹಲಿ: ಉದ್ಯೋಗಸ್ಥ ಮಹಿಳೆಯರು ಹಾಗೂ ವಿದ್ಯಾರ್ಥಿನಿಯರಿಗೆ ಮುಟ್ಟಿನ ರಜೆ (Menstrual Leave) ನೀಡಬೇಕು ಎಂದು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ. ಇನ್ನು ದೇಶದ ಕೆಲವು ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿನಿಯರಿಗೆ ಮುಟ್ಟಿನ ರಜೆ ನೀಡಿವೆ. ಇದರ ಬೆನ್ನಲ್ಲೇ, ದೇಶದಲ್ಲಿ ಹೆಣ್ಣುಮಕ್ಕಳಿಗೆ ಮುಟ್ಟಿನ ರಜೆ ನೀಡುವ ಕುರಿತು ಕೇಂದ್ರ ಸರ್ಕಾರ ನೀತಿ ರಚಿಸಬೇಕು ಎಂದು ಸಂಸದೀಯ ಸ್ಥಾಯಿ ಸಮಿತಿ ಶಿಫಾರಸು ಮಾಡಿದೆ.
“ವೈದ್ಯಕೀಯ ಪ್ರಮಾಣಪತ್ರ ಅಥವಾ ಯಾವುದೇ ಸ್ಪಷ್ಟನೆ ಇಲ್ಲದೆ ಹೆಣ್ಣುಮಕ್ಕಳಿಗೆ ಮುಟ್ಟಿನ ರಜೆ ಅಥವಾ ಅನಾರೋಗ್ಯ ರಜೆ ಅಥವಾ ಅರ್ಧ ವೇತನದ ರಜೆ ನೀಡಬೇಕು” ಎಂದು ಸಮಿತಿ ಶಿಫಾರಸು ಮಾಡಿದೆ. ಕೇಂದ್ರ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಹಾಗೂ ಪಿಂಚಣಿಗಳ ಸಚಿವಾಲಯವು ಇತ್ತೀಚೆಗೆ ಮುಟ್ಟಿನ ರಜೆ ನೀಡುವ ಕುರಿತು ಯಾವುದೇ ಪ್ರಸ್ತಾಪವಿಲ್ಲ ಎಂದು ತಿಳಿಸಿದ ಬೆನ್ನಲ್ಲೇ ಸಮಿತಿ ಶಿಫಾರಸು ಮಾಡಿದೆ.
“ಹೆಣ್ಣುಮಕ್ಕಳ ಮಾನಸಿಕ ಹಾಗೂ ಆರೋಗ್ಯ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಅವರಿಗೆ ಮುಟ್ಟಿನ ರಜೆ ನೀಡಬೇಕು. ಇದರಿಂದ ಅವರು ದಕ್ಷವಾಗಿ ಕಾರ್ಯನಿರ್ವಹಿಸಲು ಕೂಡ ಸಾಧ್ಯವಾಗಲಿದೆ. ರಜೆ ನೀಡುವುದರಿಂದ ಮಹಿಳಾ ಕಾರ್ಮಿಕರು ಕೆಲಸದಲ್ಲಿ ತೊಡಗಿಕೊಳ್ಳುವಿಕೆಯೂ ಹೆಚ್ಚಾಗಲಿದೆ” ಎಂದು ಬಿಜೆಪಿ ಹಿರಿಯ ಸುಶೀಲ್ ಕುಮಾರ್ ಮೋದಿ ನೇತೃತ್ವದ ಸಮಿತಿಯು ಕೇಂದ್ರ ಸಿಬ್ಬಂದಿ ಹಾಗೂ ತರಬೇತಿ ಇಲಾಖೆಗೆ ಶಿಫಾರಸು ಮಾಡಿದೆ.
ಇದನ್ನೂ ಓದಿ: Women’s Day 2023: ಎರಡು-ಮೂರು ದಿನ ಮುಟ್ಟಿನ ರಜೆ ಕೊಡುವುದು ಅಗತ್ಯ