Site icon Vistara News

ಭಾರತದ 30 ಸಾವಿರ ವಿದ್ಯಾರ್ಥಿಗಳಿಗೆ‌ ಫ್ರಾನ್ಸ್ ವೀಸಾ; ಮ್ಯಾಕ್ರನ್‌ ಗಣರಾಜ್ಯೋತ್ಸವ ಗಿಫ್ಟ್

Narendra Modi And Macron

France to welcome 30,000 Indian students by 2030: Says Emmanuel Macron

ನವದೆಹಲಿ: ಭಾರತದ 75 ಗಣರಾಜ್ಯೋತ್ಸವದಲ್ಲಿ (Republic Day 2024) ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುಯೆಲ್‌ ಮ್ಯಾಕ್ರನ್‌ (Emmanuel Macron) ಅವರು ಭಾರತದ ವಿದ್ಯಾರ್ಥಿಗಳಿಗೆ ವಿಶೇಷ ಉಡುಗೊರೆಯೊಂದನ್ನೂ ನೀಡಿದ್ದಾರೆ. “2030ರ ವೇಳೆಗೆ ಭಾರತದ ಸುಮಾರು 30 ಸಾವಿರ ವಿದ್ಯಾರ್ಥಿಗಳನ್ನು (Indian Students) ಫ್ರಾನ್ಸ್‌ ಸ್ವಾಗತಿಸುತ್ತದೆ. ಇದು ತುಂಬ ನಿರೀಕ್ಷೆ ಹಾಗೂ ಮಹತ್ವಕಾಂಕ್ಷಿಯೊಂದಿಗೆ ಆರಂಭಿಸುತ್ತಿರುವ ಯೋಜನೆಯಾಗಿದೆ” ಎಂದು ಇಮ್ಯಾನುಯೆಲ್‌ ಮ್ಯಾಕ್ರನ್‌ ಅವರು ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ. ಇದರಿಂದಾಗಿ ಭಾರತದ 30 ಸಾವಿರ ವಿದ್ಯಾರ್ಥಿಗಳಿಗೆ ವೀಸಾ ಸಿಗಲಿದೆ.

“ಭಾರತ ಹಾಗೂ ಫ್ರಾನ್ಸ್‌ ಇದುವರೆಗೆ ಒಗ್ಗೂಡಿ ಹೆಜ್ಜೆ ಹಾಕಿವೆ. ಮುಂದೆಯೂ ಜತೆಯಾಗಿ ಸಾಗುವ ಭರವಸೆ ಇದೆ. ಇದೇ ಕಾರಣಕ್ಕೆ ಮುಂದಿನ ಆರು ವರ್ಷದಲ್ಲಿ ಭಾರತದ 30 ಸಾವಿರ ವಿದ್ಯಾರ್ಥಿಗಳನ್ನು ಫ್ರಾನ್ಸ್‌ ಸ್ವಾಗತಿಸುತ್ತದೆ. ಭಾರತದ ಯುವಕರು ಕೂಡ ಮುಂದಿನ ದಿನಗಳಲ್ಲಿ ಸಹಕಾರ ತತ್ವ ಅನುಸರಿಸುವಂತೆ ಮಾಡುವುದು, ಉತ್ತಮ ಸಹಭಾಗಿತ್ವ ಹೊಂದಬೇಕು ಎಂಬುದು ನಮ್ಮ ಉದ್ದೇಶವಾಗಿದೆ” ಎಂದು ಮ್ಯಾಕ್ರನ್‌ ಪೋಸ್ಟ್‌ ಮಾಡಿದ್ದಾರೆ.

“ಫ್ರಾನ್ಸ್‌ನಲ್ಲಿ ವಿಶ್ವದರ್ಜೆಯ 35 ವಿಶ್ವವಿದ್ಯಾಲಯಗಳಿವೆ. ಹಾಗೆಯೇ, ಫ್ರೆಂಚ್‌ ಭಾಷೆ ಬರದವರು ಕೂಡ ಅಧ್ಯಯನ ಮಾಡಲಿ ಎಂಬ ದೃಷ್ಟಿಯಿಂದ ಅಂತಾರಾಷ್ಟ್ರೀಯ ದರ್ಜೆಯ ತರಗತಿಗಳನ್ನು ನಿರ್ಮಿಸುತ್ತಿದ್ದೇವೆ. ಇದರಿಂದ ಬೇರೆ ದೇಶಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಫ್ರೆಂಚ್‌ ಫಾರ್‌ ಆಲ್‌, ಫ್ರೆಂಚ್‌ ಫಾರ್‌ ಎ ಬೆಟರ್‌ ಫ್ಯೂಚರ್‌ ಎಂಬ ಧ್ಯೇಯದೊಂದಿಗೆ ಬೇರೆಯವರಿಗೂ ಫ್ರೆಂಚ್‌ ಕಲಿಸುವ ತರಗತಿಗಳನ್ನು ಕೂಡ ನಿರ್ಮಿಸುತ್ತಿದ್ದೇವೆ” ಎಂದು ತಿಳಿಸಿದರು.

ಗಣರಾಜ್ಯೋತ್ಸವದ ಬಳಿಕ ಅವರು ಫ್ರಾನ್ಸ್‌ ರಾಯಭಾರ ಕಚೇರಿಗೆ ಭೇಟಿ ನೀಡಲಿರುವ ಅವರು, ಅಲ್ಲಿನ ಸಿಬ್ಬಂದಿ ಜತೆ ಮಾತುಕತೆ ನಡೆಸಲಿದ್ದಾರೆ. ಸಂಜೆ 7.10ಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಫ್ರಾನ್ಸ್‌ ಅಧ್ಯಕ್ಷ ಭೇಟಿಯಾಗಲಿದ್ದಾರೆ. ಇದಾದ ಬಳಿಕ ರಾಷ್ಟ್ರಪತಿ ಭವನದಲ್ಲಿ ರಾತ್ರಿ ನಡೆಯುವ ಭೋಜನ ಕೂಟದಲ್ಲಿ ಫ್ರಾನ್ಸ್‌ ಅಧ್ಯಕ್ಷ ಊಟ ಮಾಡಲಿದ್ದಾರೆ.

ಇದನ್ನೂ ಓದಿ: PM Modi France Visit: ಮೋದಿ-ಮ್ಯಾಕ್ರನ್ ಡಿನ್ನರ್ ವೇಳೆ ಎರಡು ಬಾರಿ ಜೈ ಹೋ ಹಾಡು ಹಾಡಿದ ಕಲಾವಿದರು!

ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವ ಮೂಲಕ ಇಂತಹ ಆತಿಥ್ಯ ಸ್ವೀಕರಿಸಿದ ಫ್ರಾನ್ಸ್‌ನ ಆರನೇ ನಾಯಕ ಎಂಬ ಖ್ಯಾತಿಗೆ ಇಮ್ಯಾನುಯೆಲ್‌ ಮ್ಯಾಕ್ರನ್‌ ಅವರು ಭಾಜನರಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು 2023ರ ಜುಲೈನಲ್ಲಿ ಫ್ರಾನ್ಸ್‌ನಲ್ಲಿ ನಡೆದ ರಾಷ್ಟ್ರೀಯ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಗೌರವ ಸ್ವೀಕರಿಸಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version