ಕರ್ನಾಟಕ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ʻಗೃಹಲಕ್ಷ್ಮಿ ಯೋಜನೆ’ಯನ್ನು ಅನಾವರಣಗೊಳಿಸಿದೆ. ಪ್ರತಿ ಕುಟುಂಬದ ಮುಖ್ಯಸ್ಥ ಮಹಿಳೆಗೂ ತಿಂಗಳಿಗೆ ರೂ 2,000 ನೀಡುವ ಭರವಸೆ ನೀಡಿದೆ. ಇನ್ನೊಂದೆಡೆ ತೃಣಮೂಲ ಕಾಂಗ್ರೆಸ್, ಮೇಘಾಲಯ ಚುನಾವಣೆಯ ಹಿನ್ನಲೆಯಲ್ಲಿ, ಮಹಿಳಾ ಸಬಲೀಕರಣ ಯೋಜನೆಯ ಭಾಗವಾಗಿ, ಮಹಿಳೆಯರಿಗೆ ಮಾಸಿಕ 1,000 ರೂಪಾಯಿಗಳ ಆರ್ಥಿಕ ನೆರವು ನೀಡುವುದಾಗಿ ಭರವಸೆ ನೀಡಿದೆ.
ಕಳೆದ ವರ್ಷದ ಚುನಾವಣಾ ಋತುವಿನಲ್ಲಿ ʼಮಹಿಳೆಯರಿಗೆ ಮಾಸಿಕ ಹಣಕಾಸಿನ ನೆರವುʼ ಎಂಬುದು ಪ್ರಬಲ ಆಯುಧವಾಗಿತ್ತು. ಹಿಮಾಚಲ ಪ್ರದೇಶದಲ್ಲಿ ಇದು ಕಾಂಗ್ರೆಸ್‌ನ ಪ್ರಮುಖ ಚುನಾವಣಾ ಯೋಜನೆಯಾಗಿತ್ತು. ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ)ದ ಯೋಜನೆಯೂ ಆಗಿತ್ತು. ಡಿಸೆಂಬರ್ 2022ರ ಚುನಾವಣೆಯ ಪೂರ್ವದಲ್ಲಿ, ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ 18ರಿಂದ 60 ವರ್ಷ ವಯಸ್ಸಿನ ಮಹಿಳೆಯರಿಗೆ ಮಾಸಿಕ 1,500 ರೂ. ನೀಡುವ ಭರವಸೆ ಕೊಟ್ಟಿತು. ಪಂಜಾಬ್‌ನಲ್ಲಿ ಆಪ್ ಕಳೆದ ವರ್ಷ ಫೆಬ್ರವರಿಯಲ್ಲಿ ತನ್ನ ಚುನಾವಣಾ ಪ್ರಚಾರದ ಸಮಯದಲ್ಲಿ ಎಲ್ಲಾ ಮಹಿಳೆಯರಿಗೆ ರೂ 1,000 ನೀಡುವುದಾಗಿ ಹೇಳಿತ್ತು.
ಈ ಎರಡು ರಾಜ್ಯಗಳಲ್ಲಿ ಅದೇ ಪಕ್ಷಗಳು ಅಧಿಕಾರಕ್ಕೆ ಬಂದಿವೆ. ಬಂದ ನಂತರ ಈ ಭರವಸೆಗಳನ್ನು ಏನು ಮಾಡಿವೆ?
ಪಂಜಾಬ್‌ನಲ್ಲಿ ಆಪ್ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ನೀಡಿದ ಮುಖ್ಯ ಭರವಸೆಗಳು ಎರಡು. ಒಂದು, ತಿಂಗಳಿಗೆ 300 ಯುನಿಟ್‌ಗಳ ಉಚಿತ ವಿದ್ಯುತ್ ಮತ್ತು ಮಹಿಳೆಯರಿಗೆ ಮಾಸಿಕ 1,000 ರೂ. ಕಳೆದ ವರ್ಷ ಜುಲೈನಲ್ಲಿ ಭಗವಂತ ಮಾನ್ ಸರ್ಕಾರ ಉಚಿತ ವಿದ್ಯುತ್ ಭರವಸೆಯ ಬಗ್ಗೆ ಒಂದು ಹೆಜ್ಜೆ ಮುಂದಿಟ್ಟಿದೆ. ಆದರೆ ಮಹಿಳೆಯರಿಗೆ ಮಾಸಿಕ ಸ್ಟೈಫಂಡ್ ಬಗ್ಗೆ ಮೌನ ವಹಿಸಿತ್ತು.
ಇತ್ತೀಚೆಗೆ, ಪಂಜಾಬ್‌ನ ಸಾಮಾಜಿಕ ಭದ್ರತೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಬಲ್ಜಿತ್ ಕೌರ್ ಅವರು ಸರ್ಕಾರ ಶೀಘ್ರದಲ್ಲೇ 1,000 ರೂಪಾಯಿಗಳನ್ನು ವಿತರಿಸಲು ಪ್ರಾರಂಭಿಸಲಿದೆ ಎಂದರು. ಈ ಬಗ್ಗೆ ಡೇಟಾ ಡೇಟಾ ಸಿದ್ಧಪಡಿಸಲಾಗಿದೆ ಎಂದು ಕೌರ್ ಅಧಿಕೃತ ಹೇಳಿಕೆ ನೀಡಿದ್ದಾರೆ.
ಆದರೆ ಪಂಜಾಬ್‌ನ ಹಣಕಾಸು ಸ್ಥಿತಿಗತಿ ಹೇಗಿದೆ? 2021-22ನೇ ಹಣಕಾಸು ವರ್ಷದ ಅಂತ್ಯಕ್ಕೆ ರಾಜ್ಯ 2.63 ಲಕ್ಷ ಕೋಟಿ ರೂ.ಗಳ ಬೃಹತ್ ಸಾಲವನ್ನು ಹೊಂದಿತ್ತು. ಇದು ರಾಜ್ಯದ ದೇಶೀಯ ಉತ್ಪನ್ನ (GSDP)ದ 45.88 ಶೇಕಡಾ. ಮುಂದಿನ ವರ್ಷದ ಒಳಗೆ ಸಾಲದ ಪ್ರಮಾಣ 2.84 ಲಕ್ಷ ಕೋಟಿ ರೂ. ತಲುಪಲಿದೆ. ಇದರ ಜತೆಗೆ ರಾಜ್ಯ ಸಮಿತಿಗಳು, ಮಂಡಳಿಗಳು 55,000 ಕೋಟಿ ರೂ. ಬಾಕಿ ಹೊಂದಿವೆ. ಈ ವರ್ಷದ ಮೊದಲ ತ್ರೈಮಾಸಿಕದಲ್ಲೇ 30,000 ಕೋಟಿ ರೂ.ಗಳನ್ನು ರಾಜ್ಯ ಸಾಲ ಪಡೆದಿದೆ.
ಉಚಿತ 300 ಯೂನಿಟ್ ವಿದ್ಯುತ್ ಯೋಜನೆ ತಂದ ನಂತರ ರಾಜ್ಯದ ವಿದ್ಯುತ್ ಸಬ್ಸಿಡಿ ಬಿಲ್ ದಿನಕ್ಕೆ 54 ಕೋಟಿ ರೂಪಾಯಿಗಳಾಗಿದ್ದು, ವಾರ್ಷಿಕವಾಗಿ 20,000 ಕೋಟಿ ರೂಪಾಯಿಗಳನ್ನು ದಾಟಲಿದೆ.
ಕಳೆದ ತಿಂಗಳು ಅಧಿಕಾರಕ್ಕೆ ಬಂದ ಸುಖವಿಂದರ್ ಸಿಂಗ್ ಸುಖು ನೇತೃತ್ವದ ಹಿಮಾಚಲ ಪ್ರದೇಶದ ಕಾಂಗ್ರೆಸ್ ಸರ್ಕಾರ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದೆ. ಮಹತ್ವಾಕಾಂಕ್ಷೆಯ ಸಮಾಜ ಕಲ್ಯಾಣ ಯೋಜನೆಗಳ ಅನುಷ್ಠಾನ ಅವರಿಗೀಗ ದೊಡ್ಡ ಸವಾಲು.
ಇಲ್ಲೂ ಎರಡು ಪ್ರಮುಖ ಭರವಸೆಗಳು. ಒಂದು, ಹಳೆಯ ಪಿಂಚಣಿ ಯೋಜನೆಯನ್ನು ಮತ್ತೆ ಪರಿಚಯಿಸುವುದು, ಇನ್ನೊಂದು, ಮಹಿಳೆಯರಿಗಾಗಿ ಮಾಸಿಕ ಹಣಕಾಸು ಯೋಜನೆ. ತಮ್ಮ ಪ್ರಚಾರದ ಸಮಯದಲ್ಲಿ, ಮಹಿಳೆಯರು ತಮ್ಮ ಹೆಸರು, ವಯಸ್ಸು ಮತ್ತು ಫೋನ್ ನಂಬರ್ ಕೊಟ್ಟರೆ ಭತ್ಯೆಯನ್ನು ಪಡೆಯಬಹುದು ಎಂದು ಕಾಂಗ್ರೆಸ್ ಫಾರ್ಮ್‌ಗಳನ್ನು ವಿತರಿಸಿತು. ಮತದಾನಕ್ಕೂ ಮುನ್ನವೇ ಈ ಯೋಜನೆಗೆ ಅಗಾಧ ಪ್ರತಿಕ್ರಿಯೆ ವ್ಯಕ್ತವಾಯಿತು.
ಇಲ್ಲಿಯವರೆಗೂ ಈ ಯೋಜನೆಯ ಬಗ್ಗೆ ಪ್ರತ್ಯೇಕವಾಗಿ ಸರ್ಕಾರ ಏನೂ ಹೇಳಿಲ್ಲ. ಆದರೆ ʼʼಭರವಸೆಗಳ ಅನುಷ್ಠಾನಕ್ಕೆ ಸಂಬಂಧಿಸಿ ಮುಖ್ಯಮಂತ್ರಿಗಳಿಗೆ ದೂರದೃಷ್ಟಿ ಇದೆ. ಒಪಿಎಸ್, ಉದ್ಯೋಗ ಅಥವಾ ಮಹಿಳೆಯರಿಗೆ ಆರ್ಥಿಕ ಸಹಾಯ ಇತ್ಯಾದಿ ಬಗ್ಗೆ ಚರ್ಚಿಸಲಾಗುತ್ತಿದ್ದು, ಶೀಘ್ರದಲ್ಲೇ ಯೋಜನೆ ಜಾರಿಗೆ ಸ್ವರೂಪ ರಚನೆಯಾಗಲಿದೆʼʼ ಎಂದು ಸಿಎಂ ಮಾಧ್ಯಮ ಸಲಹೆಗಾರರು ಇತ್ತೀಚೆಗೆ ಹೇಳಿದರು.
ಬಿಜೆಪಿ ಈ ನೀತಿಗಳನ್ನು ʼವಂಚನೆʼ ಎಂದು ಕರೆದಿದೆ. ʼಸರ್ಕಾರಕ್ಕೆ ಇದರ ಕುರಿತು ಯಾವುದೇ ಸಮರ್ಪಕ ಯೋಜನೆ ಇಲ್ಲ’ ಎಂದು ಆರೋಪಿಸಿದೆ. “ಸರ್ಕಾರದ ಬಳಿ ಸೂಕ್ತ ಪ್ಲಾನಿಂಗ್ ಇಲ್ಲ. ಹಣ ಎಲ್ಲಿಂದ ಬರುತ್ತದೆ ಎಂದು ಅವರು ಸ್ಪಷ್ಟಪಡಿಸಿಲ್ಲ. ಸಮಿತಿ ರಚಿಸಿದ್ದಾರೆ ಆದರೆ ಯಾವುದೇ ಸ್ಪಷ್ಟತೆ ಇಲ್ಲ. ವಾಸ್ತವದಲ್ಲಿ ಇದರ ಮೂಲಕ ವೆಚ್ಚ ಮತ್ತು ಬೆಲೆ ಏರಿಕೆ ಹೆಚ್ಚಿಸುತ್ತಿದ್ದಾರೆ’ʼ ಎಂದು ಬಿಜೆಪಿ ವಕ್ತಾರ ಕರಣ್ ನಂದಾ ಆರೋಪಿಸಿದ್ದಾರೆ.
ಸುಕು ಅವರು ಮೊದಲ ಕ್ಯಾಬಿನೆಟ್ ಸಭೆಯ ನಂತರ, ಈ ಯೋಜನೆಗಳ ಪೂರೈಕೆ ಸಾಧ್ಯತೆ ಪರಿಶೀಲನೆಗಾಗಿ ಉಪಸಮಿತಿ ರಚನೆಗೆ ಮಂಜೂರು ಮಾಡಿದ್ದಾರೆ. ಫಲಾನುಭವಿಗಳು ಮತ್ತು ಹಣಕಾಸಿನ ಪರಿಗಣನೆಗಳು ಆಗಬೇಕಿವೆ.
ಇದನ್ನೂ ಓದಿ | ʼ200 ಯುನಿಟ್ ಉಚಿತ ವಿದ್ಯುತ್ʼ ಶಾಕ್‌ನಲ್ಲಿ ಬಿಜೆಪಿ: ಸೋಮವಾರ ನಡೆಯುವ ʼಪ್ರಿಯಾಂಕಾ ಗಾಂಧಿʼ ಸಮಾವೇಶದ ಮೇಲೆ ಎಲ್ಲರ ಕಣ್ಣು
ಹಿಮಾಚಲ ಪ್ರದೇಶವು 75,000 ಕೋಟಿ ರೂಪಾಯಿ ಸಾಲವನ್ನು ಹೊತ್ತಿದೆ. ಆರನೇ ವೇತನ ಆಯೋಗದ ಪ್ರಕಾರ 1000 ಕೋಟಿ ರೂ. ಅರಿಯರ್ಸ್ ಬಾಕಿ ಇದೆ. ಸರ್ಕಾರ ಒಪಿಎಸ್ ಯೋಜನೆಗೆ ವಾರ್ಷಿಕವಾಗಿ ರೂ. 800-900 ಕೋಟಿ ವೆಚ್ಚ ಮಾಡಲು ಉದ್ದೇಶಿಸಿದ್ದು, ನೌಕರರು ಠೇವಣಿ ಮಾಡಿರುವ 8,000 ಕೋಟಿ ರೂ.ಗಳನ್ನು ನೀಡುವಂತೆ ಕೇಂದ್ರಕ್ಕೆ ಪತ್ರ ಬರೆಯಲು ಮುಂದಾಗಿದೆ.
ಡಿಸೆಂಬರ್‌ನಲ್ಲಿ ನಡೆದ ಮೊದಲ ಚಳಿಗಾಲದ ಅಧಿವೇಶನದಲ್ಲಿ, ಹಿಮಾಚಲ ಪ್ರದೇಶದ ಹಣಕಾಸಿನ ಜವಾಬ್ದಾರಿ ಮತ್ತು ಬಜೆಟ್ ನಿರ್ವಹಣೆ (ತಿದ್ದುಪಡಿ) ಮಸೂದೆಯನ್ನು ಸದನವು ಅಂಗೀಕರಿಸಿತು. 2023ರಲ್ಲಿ ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ (GSDP) ಮೇಲಿನ ಸಾಲದ ಮಿತಿಯನ್ನು 4%ನಿಂದ 6%ಗೆ ಹೆಚ್ಚಿಸಲು ಮುಂದಾಗಿದೆ.
ರಾಜ್ಯದ 2022-23ನೇ ಸಾಲಿನ ಬಜೆಟ್ ಪ್ರಕಾರ ಪ್ರತಿ 100 ರೂ.ಗಳಲ್ಲಿ 26 ರೂ.ಗಳನ್ನು ವೇತನಕ್ಕೆ, 15 ರೂ.ಗಳನ್ನು ಪಿಂಚಣಿಗೆ, 10 ರೂ.ಗಳನ್ನು ಬಡ್ಡಿ ಪಾವತಿಗೆ, ರೂ. 11ನ್ನು ಸಾಲ ಮರುಪಾವತಿಗೆ, ಸ್ವಾಯತ್ತ ಸಂಸ್ಥೆಗಳ ಅನುದಾನಕ್ಕೆ 9 ಮತ್ತು ಇತರ ಚಟುವಟಿಕೆಗಳಿಗೆ ಕೇವಲ 29 ರೂ. ವೆಚ್ಚ ಮಾಡಲಾಗುತ್ತಿದೆ ಎಂದು ಲೆಕ್ಕ ಪರಿಶೋಧಕರ ವರದಿ ತಿಳಿಸಿದೆ. ಮುಂಬರುವ ಹಣಕಾಸು ವರ್ಷದಲ್ಲಿ ವಿತ್ತೀಯ ಕೊರತೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಚಳಿಗಾಲದ ಅಧಿವೇಶನದಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ | ನಾ ನಾಯಕಿ | ಉಚಿತ ವಿದ್ಯುತ್ ಘೋಷಣೆಯಿಂದ ಬಿಜೆಪಿ ಹೆದರಿದೆ ಎಂದ ಸಲೀಂ ಆಹ್ಮದ್: ನಾ ನಾಯಕಿ ವೇದಿಕೆಯಲ್ಲಿ ಗಂಡಸರಿಗಿಲ್ಲ ಜಾಗ