ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಕೆಲವೇ ಕೆಲವು ವರ್ಷಗಳ ಹಿಂದೆ ಪರಿಸ್ಥಿತಿಯೇ ಬೇರೆ ಇತ್ತು. ಪಾಕಿಸ್ತಾನಿ ಉಗ್ರರು ಬಂದು ದಾಳಿ ನಡೆಸುತ್ತಿದ್ದರು. ಸ್ಥಳೀಯ ಉಗ್ರರು ಅವರಿಗೆ ಸಹಕಾರ ನೀಡುತ್ತಿದ್ದರು. ಕೆಲವೊಂದಿಷ್ಟು ಮೂಲಭೂತವಾದಿ ಯುವಕರು ಸೇನೆಯ ಮೇಲೆ ಕಲ್ಲೆಸೆಯುತ್ತಿದ್ದರು. ಆದರೀಗ, ಕಣಿವೆಯ ಪರಿಸ್ಥಿತಿ ಬದಲಾಗಿದೆ. ಯುವಕರು ಉದ್ಯೋಗಸ್ಥರಾಗುತ್ತಿದ್ದಾರೆ, ವೃತ್ತಿಪರತೆಯನ್ನು ಮೈಗೂಡಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ನಿದರ್ಶನ ಎಂಬಂತೆ, ಕೂಲಿ ಕಾರ್ಮಿಕನಾಗಿದ್ದ ಉಮರ್ ಅಹ್ಮದ್ ಗನಿ ಎಂಬ ಯುವಕನೀಗ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯಲ್ಲಿ (NEET) ತೇರ್ಗಡೆ ಹೊಂದಿದ್ದಾನೆ.
ಹೌದು, ದಕ್ಷಿಣ ಕಾಶ್ಮೀರದ ಪುಲ್ವಾಮ ಜಿಲ್ಲೆಯ ಜಾಗಿ ಗಮ್ ಎಂಬ ಪುಟ್ಟ ಗ್ರಾಮದ ಉಮರ್ ಅಹ್ಮದ್ ಗನಿ (19) ನೀಟ್ ಪಾಸಾಗಿದ್ದಾನೆ. ಹಗಲು ರಾತ್ರಿ ಓದಿ, ಕೂಲಿ ಕೆಲಸ ಮಾಡಿ, ವೈದ್ಯನಾಗಬೇಕು ಎಂಬ ಮಹೋನ್ನತ ಆಸೆಯಿಂದ ಕಷ್ಟಪಟ್ಟು ಈಗ ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ನಡೆಯುವ ನೀಟ್ ಪಾಸಾಗಿದ್ದಾನೆ. ಆ ಮೂಲಕ ಕನಸಿನ ಸನಿಹಕ್ಕೆ ಹೋಗಿದ್ದಾನೆ.
“ನನ್ನ ಕುಟುಂಬವು ಆರ್ಥಿಕವಾಗಿ ಸದೃಢವಾಗಿಲ್ಲ. ಹಾಗಾಗಿ, ನಾನು ಬೆಳಗ್ಗೆಯಿಂದ ಸಂಜೆತನಕ ಕೂಲಿ ಕೆಲಸ ಮಾಡುತ್ತೇನೆ. ಸಂಜೆ 4ರಿಂದ ರಾತ್ರಿ 12 ಗಂಟೆವರೆಗೆ ಓದುತ್ತಿದ್ದೆ. ಬೆಳಗಿನ ಜಾವ ಬೇಗ ಎದ್ದು ಕೂಡ ಓದುತ್ತಿದ್ದೆ. ನನ್ನ ತಂದೆ-ತಾಯಿಗೆ ವಯಸ್ಸಾಗುತ್ತಿದೆ. ಅವರನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಅದಕ್ಕಾಗಿ ನಾನು ವೈದ್ಯನಾಗಬೇಕು” ಎಂದು ಉಮರ್ ಅಹ್ಮದ್ ಗನಿ ತಿಳಿಸಿದ್ದಾನೆ.
ಕೆಲ ದಿನಗಳ ಹಿಂದಷ್ಟೇ, ಶ್ರೀನಗರದ ನೌಶೇರಾ ನಿವಾಸಿಗಳಾದ ತುಬಾ ಬಶೀರ್, ರುತ್ಬಾ ಬಶೀರ್ ಹಾಗೂ ಉರ್ಬಿಶ್ ಸಹೋದರಿಯರು ಮೊದಲ ಪ್ರಯತ್ನದಲ್ಲಿಯೇ ನೀಟ್ ಪಾಸಾಗಿದ್ದಾರೆ. ಇವರೀಗ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ಅರ್ಹರಾಗಿದ್ದು, ಮೂವರೂ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಮುಂದಾಗಿದ್ದಾರೆ. ಇವರು ಕಸಿನ್ ಸಿಸ್ಟರ್‌ಗಳಾಗಿದ್ದು, ಮಧ್ಯಮ ವರ್ಗದ ಕೌಟುಂಬಿಕ ಹಿನ್ನೆಲೆ ಹೊಂದಿದ್ದಾರೆ. ಇವರು ಕೂಡ ವೈದ್ಯರಾಗಬೇಕು ಎಂದು ಪಣತೊಟ್ಟಿದ್ದಾರೆ. ಒಟ್ಟಿನಲ್ಲಿ, ಗುಂಡಿನ ದಾಳಿ, ಕಲ್ಲೇಟು ಕಾಣುತ್ತಿದ್ದ ಕಾಶ್ಮೀರದಲ್ಲಿ ಯುವಕ-ಯುವತಿಯರು ವಿದ್ಯಾವಂತರಾಗಿ, ಉಜ್ವಲ ಭವಿಷ್ಯ ರೂಪಿಸಿಕೊಳ್ಳುತ್ತಿರುವುದು ಸಂತಸದ ಸಂಗತಿಯಾಗಿದೆ.