ನವದೆಹಲಿ: ರಾಜಕಾರಣಿಗಳು ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಪಕ್ಷಾಂತರ ಮಾಡುವುದು ಸಹಜ. ಆದರೆ, ಒಂದೇ ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಪಕ್ಷಾಂತರ ಆಗುತ್ತಿದೆ ಎಂದರೆ, ಆ ಪಕ್ಷ ಸೋಲಿನ ಹಾದಿ ಹಿಡಿದಿದೆ ಎಂದೇ ಅರ್ಥ. ಇದಕ್ಕೆ ನಿದರ್ಶನ ಎಂಬಂತೆ, ಇತ್ತೀಚಿನ ಕೆಲ ವರ್ಷಗಳಲ್ಲಿ ಕಾಂಗ್ರೆಸ್‌ನಿಂದ ಬಿಜೆಪಿಗೆ ಸೇರ್ಪಡೆಯಾಗುವ ನಾಯಕರ ಸಂಖ್ಯೆ ಜಾಸ್ತಿಯಾಗಿದೆ.
ಅದರಲ್ಲೂ, ಕಾಂಗ್ರೆಸ್‌ನ ಪ್ರಮುಖ ನಾಯಕರು ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದಾರೆ. ದೇಶದ ಮೊದಲ ಗವರ್ನರ್ ಜನರಲ್ ಸಿ.ರಾಜಗೋಪಾಲಚಾರಿ ಅವರ ಮರಿ ಮೊಮ್ಮಗ ಸಿ.ಆರ್.ಕೇಶವನ್ ಅವರು ಶನಿವಾರ (ಮಾರ್ಚ್ 8) ಬಿಜೆಪಿ ಸೇರ್ಪಡೆಯಾಗಿರುವುದೇ ಈ ಮಾತಿಗೆ ಉತ್ತಮ ಉದಾಹರಣೆಯಾಗಿದೆ. ಹಾಗಾದರೆ, ಇತ್ತೀಚೆಗೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾದ ಪ್ರಮುಖ ನಾಯಕರು ಯಾರು? ಇಲ್ಲಿದೆ ಮಾಹಿತಿ.
ಸಿ.ಆರ್.ಕೇಶವನ್
ನವದೆಹಲಿಯಲ್ಲಿರುವ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಬಿಜೆಪಿ ನಾಯಕರ ಸಮ್ಮುಖದಲ್ಲಿ ಶನಿವಾರ ಸಿ.ರಾಜಗೋಪಾಲಚಾರಿ ಅವರ ಮರಿ ಮೊಮ್ಮಗ ಸಿ.ಆರ್.ಕೇಶವನ್ ಅವರು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಇದರಿಂದ ತಮಿಳುನಾಡಿನಲ್ಲಿ ಕಾಂಗ್ರೆಸ್‌ಗೆ ಭಾರಿ ಹಿನ್ನಡೆಯಾದಂತಾಗಿದೆ.
ಹಾಗೆಯೇ, ತಮಿಳುನಾಡಿನಲ್ಲಿ ಬಿಜೆಪಿ ಬಲವರ್ಧನೆಗೆ ಸಿ.ಆರ್.ಕೇಶವನ್ ಅವರು ಪಕ್ಷಕ್ಕೆ ಸೇರ್ಪಡೆಯಾಗಿರುವುದು ಸಕಾರಾತ್ಮಕ ಬೆಳವಣಿಗೆ ಎಂದೇ ವಿಶ್ಲೇಷಿಸಲಾಗುತ್ತಿದೆ. “ಕಾಂಗ್ರೆಸ್‌ನಲ್ಲಿ ನಾನು ಮಾಡಿದ ಸೇವೆಗೆ ಸರಿಯಾದ ಸ್ಪಂದನೆ ಸಿಗದ ಕಾರಣ ಹಾಗೂ ಮೋದಿ ಅವರ ನಾಯಕತ್ವ ಮೆಚ್ಚಿ ಬಿಜೆಪಿ ಸೇರ್ಪಡೆಯಾಗಿದ್ದೇನೆ” ಎಂದು ಕೇಶವನ್ ತಿಳಿಸಿದ್ದಾರೆ.
ಕಿರಣ್ ಕುಮಾರ್ ರೆಡ್ಡಿ
ಸಿ.ಆರ್.ಕೇಶವನ್ ಅವರಿಗಿಂತ ಒಂದು ದಿನ ಮೊದಲು ಅಂದರೆ ಮಾರ್ಚ್ 7ರಂದು ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಕಿರಣ್ ಕುಮಾರ್ ರೆಡ್ಡಿ ಅವರು ಬಿಜೆಪಿ ಪಾಳಯ ಸೇರಿದ್ದಾರೆ. ಮಾರ್ಚ್ ತಿಂಗಳಲ್ಲಿ ಕಿರಣ್ ಕುಮಾರ್ ಅವರು ಕಾಂಗ್ರೆಸ್‌ಗೆ ರಾಜೀನಾಮೆ ಕೊಟ್ಟಿದ್ದರು.
ಪಕ್ಷದ ವರಿಷ್ಠರೊಂದಿಗಿನ ಭಿನ್ನಾಭಿಪ್ರಾಯ, ನಾಯಕತ್ವದ ಬಗೆಗಿನ ಅಸಮಾಧಾನವೇ ಅವರ ರಾಜೀನಾಮೆಗೆ ಕಾರಣವಾಗಿದೆ ಎಂದು ತಿಳಿದುಬಂದಿದೆ. ಮುಂಬರುವ ವರ್ಷದಲ್ಲಿ ಆಂಧ್ರಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ನಡೆಯುವ ಕಾರಣ ರೆಡ್ಡಿ ಅವರು ಬಿಜೆಪಿ ಸೇರಿದ್ದು ಕಮಲ ಪಾಳಯಕ್ಕೆ ಸಕಾರಾತ್ಮಕ ಎನ್ನಲಾಗಿದೆ.
ಅನಿಲ್ ಆ್ಯಂಟನಿ
ಕೇಂದ್ರದ ಮಾಜಿ ಸಚಿವ ಎ.ಕೆ. ಆ್ಯಂಟನಿ ಪುತ್ರ ಅನಿಲ್ ಆ್ಯಂಟನಿ ಅವರು ಮಾರ್ಚ್ 6ರಂದು ಬಿಜೆಪಿ ಸೇರ್ಪಡೆಯಾಗಿದ್ದು, ಇದರಿಂದ ಕೇರಳದಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಾದರೆ, ಬಿಜೆಪಿಗೆ ಬಲ ಬಂದಂತಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಬಿಬಿಸಿ ನಿರ್ಮಿಸಿ ಡಾಕ್ಯುಮೆಂಟರಿಗೆ ಸಂಬಂಧಿಸಿದಂತೆ ಮಾಡಿದ ಟ್ವೀಟ್ ಬಳಿಕ ಉಂಟಾದ ಭಿನ್ನಾಭಿಪ್ರಾಯಕ್ಕೆ ಬೇಸತ್ತು ಅನಿಲ್ ಆ್ಯಂಟನಿ ಅವರು ಕಳೆದ ಜನವರಿಯಲ್ಲಿ ಕಾಂಗ್ರೆಸ್ ತೊರೆದಿದ್ದರು.
ಕೊನೆಗೆ ಅವರು ತಮ್ಮ ತಂದೆ ಹಾಗೂ ಸಹೋದರನ ವಿರೋಧದ ಮಧ್ಯೆಯೇ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಅನಿಲ್ ಆ್ಯಂಟನಿ ಅವರು ಯುವ ನಾಯಕರಾದ ಕಾರಣ ಕೇರಳದಲ್ಲಿ ಪ್ರಾಬಲ್ಯವಿಲ್ಲದ ಬಿಜೆಪಿಗೆ ಹೊಸ ನಾಯಕ ಸಿಕ್ಕಂತಾಗಿದೆ. ಅತ್ತ, ಕೇರಳದಲ್ಲಿಯೂ ಕಾಂಗ್ರೆಸ್ ಬಲ ಅಷ್ಟಕ್ಕಷ್ಟೇ ಇದೆ. ಹೀಗಿರುವ ಬೆನ್ನಲ್ಲೇ ಯುವ ನಾಯಕ ರಾಜೀನಾಮೆ ನೀಡಿರುವುದು ಪಕ್ಷಕ್ಕೆ ಹಿನ್ನಡೆಯುಂಟಾದಂತೆ ಎಂದು ವಿಶ್ಲೇಷಿಸಲಾಗುತ್ತಿದೆ.
ಹಾರ್ದಿಕ್ ಪಟೇಲ್
ಗುಜರಾತ್‌ನಲ್ಲಿ ಮೀಸಲಾತಿ ಹೋರಾಟದ ಕಿಚ್ಚು ಹಚ್ಚಿ, ದೇಶಾದ್ಯಂತ ಸುದ್ದಿಯಾಗಿದ್ದ ಹಾರ್ದಿಕ್ ಪಟೇಲ್ ಅವರು ಕಳೆದ ವರ್ಷದ ಮೇ ತಿಂಗಳಲ್ಲಿ ಕಾಂಗ್ರೆಸ್ ತೊರೆದು, ಜೂನ್ 3ರಂದು ಬಿಜೆಪಿ ಸೇರ್ಪಡೆಯಾಗಿದ್ದಾರೆ. 2019ರಲ್ಲಿ ಕಾಂಗ್ರೆಸ್ ಸೇರಿದ್ದ ಅವರು ಗುಜರಾತ್ ಕಾಂಗ್ರೆಸ್ ಕಾರ್ಯಕಾರಿ ಅಧ್ಯಕ್ಷರಾಗಿದ್ದರು. ಆದರೆ, ಬಿಜೆಪಿ ಸೇರ್ಪಡೆಯಾದ ಅವರು ನಾನು ಮೋದಿ ಅವರ ಸೈನಿಕ ಎಂದು ಹೇಳಿದ್ದರು. ಹಾಗೆಯೇ, ರಾಹುಲ್ ಗಾಂಧಿ ವಿರುದ್ಧ ಹರಿಹಾಯ್ದಿದ್ದರು. ಬಳಿಕ ನಡೆದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ಜಿತಿನ್ ಪ್ರಸಾದ
ಕಾಂಗ್ರೆಸ್ ನಾಯಕತ್ವವನ್ನು ಪ್ರಶ್ನಿಸಿ ರಚನೆಯಾದ ಜಿ-23 ನಾಯಕರಲ್ಲಿ ಕಾಂಗ್ರೆಸ್ ತೊರೆದ ಮೊದಲ ನಾಯಕ ಎಂದರೆ ಅದು ಜಿತಿನ್ ಪ್ರಸಾದ. ಉತ್ತರ ಪ್ರದೇಶ ಕಾಂಗ್ರೆಸ್ ನಾಯಕರಾಗಿದ್ದ ಇವರು ಕಾಂಗ್ರೆಸ್ ತೊರೆದು 2021ರ ಜೂನ್ 10ರಂದು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಹಾಗೆಯೇ, 2022ರಲ್ಲಿ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಲು ಜಿತಿನ್ ಪ್ರಸಾದ ಪಾತ್ರ ಮಹತ್ತರವಾಗಿದೆ.
ಇದನ್ನೂ ಓದಿ: CR Kesavan: ಸಿ.ರಾಜಗೋಪಾಲಚಾರಿ ಮರಿಮೊಮ್ಮಗ ಸಿ.ಆರ್. ಕೇಶವನ್ ಬಿಜೆಪಿ ಸೇರ್ಪಡೆ, ಕಾಂಗ್ರೆಸ್‌ಗೆ ಮತ್ತೊಂದು ಹಿನ್ನಡೆ
ಆರ್‌ಪಿಎನ್ ಸಿಂಗ್
ಕಾಂಗ್ರೆಸ್‌ನ ಪ್ರಮುಖ ನಾಯಕರಾಗಿದ್ದ ಕೇಂದ್ರದ ಮಾಜಿ ಸಚಿವ ಆರ್‌ಪಿಎನ್ ಸಿಂಗ್ ಅವರು ಕೂಡ ಬಿಜೆಪಿ ಸೇರ್ಪಡೆಯಾಗಿ, ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ಗೆಲುವಿಗೆ ಮಹತ್ವದ ಪಾತ್ರ ನಿರ್ವಹಿಸಿದರು. ಕಳೆದ ವರ್ಷದ ಜನವರಿ 25ರಂದು ಸಿಂಗ್ ಬಿಜೆಪಿ ಸೇರಿದರು. “ನಾನು ಕಾಂಗ್ರೆಸ್‌ಗೆ 32 ವರ್ಷ ಸೇವೆ ಸಲ್ಲಿಸಿದ್ದೇನೆ. ಆದರೀಗ ಪಕ್ಷದ ಸ್ಥಿತಿಯೇ ಬದಲಾಗಿದೆ. ಹಾಗಾಗಿ, ದೇಶ ನಿರ್ಮಾಣಕ್ಕಾಗಿ ಕಾರ್ಯನಿರ್ವಹಿಸುತ್ತಿರುವ ಬಿಜೆಪಿ ಸೇರಿದ್ದೇನೆ” ಎಂದು ಆರ್‌ಪಿಎನ್ ಸಿಂಗ್ ಹೇಳಿದ್ದರು. ಇವರ ಜತೆಗೆ ಗುಲಾಂ ನಬಿ ಆಜಾದ್ ಸೇರಿ ಇನ್ನೂ ಹಲವು ನಾಯಕರು ಕಾಂಗ್ರೆಸ್ ತೊರೆದಿದ್ದಾರೆ.