ಕೊಹಿಮಾ: ‘ಪ್ರತಿಭೆ ಗುಡಿಸಲಿನಲ್ಲಿ ಹುಟ್ಟಿ ಅರಮನೆಯಲ್ಲಿ ಅರಳುತ್ತದೆ’ ಎಂಬ ಮಾತಿದೆ. ಹಾಗೆಯೇ, ‘ಕಾಯಕವೇ ಕೈಲಾಸ’, ‘ದುಡಿಮೆಯೇ ದುಡ್ಡಿನ ತಾಯಿ’ ಎಂಬ ಮಾತುಗಳು ಕೂಡ ಶ್ರಮದಿಂದ ಯಶಸ್ಸು ಸಿಗುತ್ತದೆ ಎಂಬುದನ್ನು ಸಾರುತ್ತವೆ. ಇಂತಹ ಮಾತುಗಳಿಗೆ ನಿದರ್ಶನ ಎಂಬಂತೆ, ನಾಗಾಲ್ಯಾಂಡ್ ಐಎಎಸ್ ಅಧಿಕಾರಿ ನೆಲ್ಲಾಯಪ್ಪನ್ ಬಿ. ಅವರು ತಗಡಿನ ಮನೆಯಲ್ಲಿ ಓದಿ (Success Story) ಈಗ ಅರಮನೆಯಂತಹ ಬಂಗಲೆ ಕಟ್ಟಿಸಿದ್ದಾರೆ. ಇವರ ಮನೆಯ ಫೋಟೊಗಳೇ ಈಗ ಯಶಸ್ಸಿನ ಕತೆ ಹೇಳುತ್ತಿವೆ.
ಹೌದು, ನಾಗಾಲ್ಯಾಂಡ್ ಐಎಎಸ್ ಅಧಿಕಾರಿಯಾಗಿರುವ, ಸದ್ಯ ನಾಗಾಲ್ಯಾಂಡ್ ಮುಖ್ಯಮಂತ್ರಿ ನೆಫಿಯು ರಿಯೋ ಅವರಿಗೆ ವಿಶೇಷ ಕರ್ತವ್ಯಾಧಿಕಾರಿಯಾಗಿರುವ ನೆಲ್ಲಾಯಪ್ಪನ್ ಬಿ ಅವರು ತಾವು ಮೊದಲು ವಾಸಿಸುತ್ತಿದ್ದ ತಗಡಿನ ಮನೆ ಹಾಗೂ ಈಗ ಕಟ್ಟಿಸಿರುವ ಬಂಗಲೆಯ ಫೋಟೊಗಳನ್ನು ಎಕ್ಸ್‌ನಲ್ಲಿ (ಟ್ವಿಟರ್) ಶೇರ್ ಮಾಡಿದ್ದಾರೆ. ಫೋಟೊಗಳು ಈಗ ವೈರಲ್ ಆಗಿದ್ದು, ಜನರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ನೆಲ್ಲಾಯಪ್ಪನ್ ಪೋಸ್ಟ್
“ನಾನು 30 ವರ್ಷದವನಾಗುವವರೆಗೆ ಒಂದೇ ಕೋಣೆಯ, ತಗಡಿನ ಮನೆಯಲ್ಲಿ ವಾಸಿಸುತ್ತಿದ್ದೆ. ನಾನು, ನನ್ನ ನಾಲ್ವರು ಸಹೋದರ-ಸಹೋದರಿಯರು, ತಂದೆ-ತಾಯಿ ಸೇರಿ ಇದೇ ಮನೆಯಲ್ಲಿ ವಾಸಿಸುತ್ತಿದ್ದೆವು. ಆದರೆ, ಶಿಕ್ಷಣ, ಶ್ರದ್ಧೆ ಹಾಗೂ ಪರಿಶ್ರಮದಿಂದ ಇಂತಹ ಮನೆ ತಲುಪಿದ್ದೇನೆ” ಎಂದು ಅವರು ಬರೆದುಕೊಂಡಿದ್ದಾರೆ. ನೆಲ್ಲಾಯಪ್ಪನ್ ಬಿ ಅವರ ಪೋಸ್ಟ್‌ಅನ್ನು 6 ಲಕ್ಷ ಜನ ನೋಡಿದ್ದು, 12 ಸಾವಿರ ಜನ ಲೈಕ್ ಮಾಡಿದ್ದಾರೆ.
ಇದನ್ನೂ ಓದಿ: Success Story: ಕನಸೆಂಬ ಕುದುರೆಯನೇರಿ; ಕೈ ಇಲ್ಲದಿದ್ದರೂ ಛಲದಿಂದ ಓದಿ JEE ರ‍್ಯಾಂಕ್ ಪಡೆದ ಸ್ನೇಹಾ ಬೆಹೆರಾ
ನೆಲ್ಲಾಯಪ್ಪನ್ ಬಿ ಅವರು ಐಎಎಸ್ ಅಧಿಕಾರಿಯಾಗಿದ್ದು, ಇದಕ್ಕೂ ಮೊದಲು ಅವರು ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾಗಿದ್ದರು. ಈಗ ಅವರು ಮುಖ್ಯಮಂತ್ರಿಯ ವಿಶೇಷ ಕರ್ತವ್ಯಾಧಿಕಾರಿ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನೆಲ್ಲಾಯಪ್ಪನ್ ಬಿ ಅವರ ಪೋಸ್ಟ್‌ಗೆ ನೂರಾರು ಜನ ಪ್ರತಿಕ್ರಿಯಿಸಿದ್ದಾರೆ. “ನೀವು ತುಂಬ ಜನರಿಗೆ ಸ್ಫೂರ್ತಿ ಸರ್. ನಿಮಗೆ ಶುಭವಾಗಲಿ” ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. “ಪರಿಶ್ರಮ, ಶ್ರದ್ಧೆ, ಶಿಕ್ಷಣದಿಂದ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ನೀವೇ ಸಾಕ್ಷಿ” ಎಂದು ಮತ್ತೊಬ್ಬರು ತಿಳಿಸಿದ್ದಾರೆ.